ಇದು ಗೊಂಬೆ ಲೋಕವಯ್ಯ!

ವಿಜಯವಾಣಿ (4)
Published on

ಕರ್ನಾಟಕದಲ್ಲಿ ಗೊಂಬೆಗಳು ಕೇವಲ ಮಕ್ಕಳ ಆಟಿಕೆ ವಸ್ತುಗಳಲ್ಲ! ನಾಡಹಬ್ಬವಾದ ದಸರಾದಲ್ಲಿ ಗೊಂಬೆ ಕೂರಿಸುವ ಪರಿಪಾಠದ ಮೂಲಕ ಸಾಂಸ್ಕೃತಿಕ ಸ್ಥಾನವನ್ನು ಪಡೆದುಕೊಂಡಿರುವುದು ವಿಶೇಷ. ಕಲಾವಿದರ ಬಾಳಿಗೆ ಜೀವನೋಪಾಯದ ಮಾಧ್ಯಮವಾಗಿ, ಇತ್ತೀಚಿನ ವರ್ಷಗಳಲ್ಲಿ ಉದ್ಯಮದ ಸ್ವರೂಪವನ್ನೂ ಪಡೆದುಕೊಂಡಿದೆ. ಮನೆಗಳಲ್ಲಿ ಎಷ್ಟೇ ಅಲಂಕಾರಿಕ ವಸ್ತುಗಳು ಇದ್ದರೂ, ಈ ಮರದ ಗೊಂಬೆಗಳ ಸೌಂದರ್ಯವೇ ವಿಶಿಷ್ಟ.

ಚನ್ನಪಟ್ಟಣದ ಗೊಂಬೆ

ದಸರಾ ಸಮಯದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೊಂಬೆಗಳಿಗೆ ಅಧಿಕ ಬೇಡಿಕೆ. ಚನ್ನಪಟ್ಟಣದ ಗೊಂಬೆಗಳಿಗೆ ವಿಶ್ವ ವಾಣಿಜ್ಯ ಒಕ್ಕೂಟದಿಂದ ಮಾನ್ಯತೆ ದೊರೆತಿದೆ. ಇಲ್ಲಿನ ಗೊಂಬೆಗಳಿಗೆ ಮತ್ತು ಆಟಿಕೆಗಳಿಗೆ ಮುಖ್ಯವಾಗಿ ಕರಿಮರ (ರೋಸ್​ವುಡ್), ಶ್ರೀಗಂಧ ಮತ್ತು ಐವರಿ ಮರಗಳನ್ನು ಬಳಸಲಾಗುತ್ತದೆ. ಜೊತೆಗೆ ಕೇದಾರ್, ಪೈನ್, ತೇಗ್ ಮತ್ತು ಸಿತಾಮೋರ್ ಮರಗಳನ್ನೂ ಬಳಸಲಾಗುತ್ತದೆ. ಗೊಂಬೆಗಳ ಜನಪ್ರಿಯತೆಯಿಂದಾಗಿ ಚನ್ನಪಟ್ಟಣ ‘ಗೊಂಬೆಗಳ ಊರು’ ಎಂದೇ ಪ್ರಸಿದ್ಧವಾಗಿದೆ. ಚನ್ನಪಟ್ಟಣದ ಗೊಂಬೆಗಳು ಜಿಐ ಟ್ಯಾಗ್ ಹೊಂದಿದ್ದು, ವಿಶಿಷ್ಟ ಕೆತ್ತನೆ, ಆಕರ್ಷಕ ಬಣ್ಣ ಮತ್ತು ವಿನ್ಯಾಸಗಳಿಂದ ಪ್ರಸಿದ್ಧಿ ಪಡೆದಿವೆ. ಇಲ್ಲಿನ ಗೊಂಬೆ ಉದ್ಯಮಕ್ಕೆ ಮೂರು ಶತಮಾನಗಳ ದೀರ್ಘ ಇತಿಹಾಸವಿದೆ.

ಶಿವ, ವಿಷ್ಣು, ಲಕ್ಷ್ಮೀ, ದುರ್ಗೆ, ಸರಸ್ವತೀ ಹೀಗೆ ಅನೇಕ ದೇವತಾ ವಿಗ್ರಹಗಳು ಗೊಂಬೆಗಳಾಗಿ ತಯಾರಾಗುತ್ತವೆ ಮತ್ತು ಇವು ತಮ್ಮ ಸೌಂದರ್ಯದಿಂದ ಗಮನ ಸೆಳೆಯುತ್ತವೆ. ಈ ದೇವತೆಗಳ ಚಿಕ್ಕ ವಿಗ್ರಹಕ್ಕೆ ಬೇಡಿಕೆ ಜಾಸ್ತಿ ಇದೆ. ಸಾಮಾಜಿಕ ಸ್ವಾಸ್ಥ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ಏರುತ್ತಿರುವ ಗೊಂಬೆ ಬೇಡಿಕೆಯನ್ನು ವೃತ್ತಿಪರತೆಯಿಂದ ಪೂರೈಸಲಾಗುತ್ತಿದೆ. ಪ್ರಮುಖವಾಗಿ, ಚನ್ನಪಟ್ಟಣದ ಗೊಂಬೆ ತಯಾರಿಸುವುದು 24 ವೃತ್ತಿಪರ ಕುಟುಂಬಗಳು. ಅಮೆರಿಕ, ಇಂಗ್ಲೆಂಡ್, ಕೆನಡಾ, ಬ್ರಿಟನ್, ಯುಗೋಸ್ಲಾವಿಯಾ, ಜಪಾನ್, ಜರ್ಮನಿ ಮತ್ತಿತರ ದೇಶಗಳಿಗೆ ಚನ್ನಪಟ್ಟಣದ ಗೊಂಬೆಗಳು ರಫ್ತಾಗುತ್ತಿವೆ. ಮಾತ್ರವಲ್ಲ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಗುರುತಾಗಿ, ಅಪ್ರತಿಮ ಸೌಂದರ್ಯದಿಂದ ರಾರಾಜಿಸುತ್ತಿವೆ.

ಕಿನ್ನಾಳ ಗೊಂಬೆ

ಉತ್ತರ ಕರ್ನಾಟಕದ ಕಿನ್ನಾಳ ಕಲೆ ಗೊಂಬೆ ತಯಾರಿಕೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಪುಟ್ಟ ಊರು ಕಿನ್ನಾಳದ ಗೊಂಬೆಗಳು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿದ್ದು, ಭೌಗೊಳಿಕ ಸೂಚ್ಯಂಕ (ಜಿಐ ಟ್ಯಾಗ್) ಹೊಂದಿವೆ. ಇಲ್ಲಿ ತಯಾರಿಸುವ ಕಿಸುಗಲ್ ಗೊಂಬೆಗಳಿಗೆ ಭಾರಿ ಬೇಡಿಕೆ ಇದೆ. ಇಲ್ಲಿ ತಯಾರಾಗುವ ಮರದ ಆಟಿಕೆಗಳು ಮತ್ತು ಗೊಂಬೆಗಳು ಈಗ ಆನ್​ಲೈನ್​ನಲ್ಲೂ ಲಭ್ಯ ಇವೆ. ಕಿನ್ನಾಳ ಕಲೆಯಲ್ಲಿ ಪೌರಾಣಿಕ ಪ್ರಸಂಗಗಳಿಗೆ ಸಂಬಂಧಿಸಿದ ಗೊಂಬೆಗಳನ್ನೇ ಹೆಚ್ಚಾಗಿ ತಯಾರಿಸಲಾಗುತ್ತದೆ. ಇವುಗಳಿಗೆ ಹೆಚ್ಚಾಗಿ ಪೊಳಕಿ ಮರ ಹಾಗೂ ಟಣಕಿನ ಮರ ಬಳಸಲಾಗುತ್ತದೆ. ಕಿನ್ನಾಳದ 72 ಕುಟುಂಬಗಳು ಗೊಂಬೆ ಮತ್ತು ಆಟಿಕೆ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಕಿನ್ನಾಳ ಕುಶಲಕರ್ವಿುಗಳನ್ನು ಚಿತ್ರಕಾರರು ಎಂದೂ ಕರೆಯಲಾಗುತ್ತದೆ. ಯುವಕರು ತರಬೇತಿ ಪಡೆದು ಹೊಸ ವಿನ್ಯಾಸದಲ್ಲಿ ಗೊಂಬೆಗಳನ್ನು ತಯಾರಿಸಿ, ಮಾರುಕಟ್ಟೆಯನ್ನು ವಿಸ್ತರಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಅರಸರು ಈ ಕಲೆಗೆ ಪ್ರೋತ್ಸಾಹ ನೀಡಿ, ಬೆಳೆಸಿದರು. ಇಂದಿನ ಕಿನ್ನಾಳ ಕಲೆಯ ಕುಶಲಕರ್ವಿುಗಳ ಪೂರ್ವಜರೇ, ಹಿಂದಿನ ವಿಜಯನಗರ ಸಾಮ್ರಾಜ್ಯ ಕಾಲದ ಸಾವಿರಾರು ಅತ್ಯದ್ಭುತ ಮರದ ಕಲಾಕೃತಿಗಳ ನಿರ್ವತೃಗಳು. ಹಂಪಿಯ ಪಂಪಾಪತೀಶ್ವರ ದೇವಸ್ಥಾನದ ಸೂಕ್ಷ್ಮ ಶಿಲ್ಪಕಲೆಯನ್ನು ಕೊಟ್ಟವರೂ, ಅಲ್ಲಿನ ಮರದ ತೇರಿನ ನಿರ್ವತೃಗಳೂ ಇವರೇ. ಈ ಕಿನ್ನಾಳ ಕಾಷ್ಠಶಿಲ್ಪಕಲೆಯ ಪ್ರಸಿದ್ಧಿಯು ಅದ್ಯಾವ ಎತ್ತರದಲ್ಲಿ ಇದೆಯೆಂದರೆ ಗ್ಲಾಸ್ಗೋ ಸ್ಕೂಲ್ ಆಫ್ ಆರ್ಟ್ ಮತ್ತು ಗ್ಲಾಸ್ಗೋ ವಿಶ್ವವಿದ್ಯಾಲಯ ಕಿನ್ನಾಳ ಕಲೆಯೊಂದಿಗೆ ಕೈಜೋಡಿಸಿವೆ.

ಮನ್ ಕೀ ಬಾತ್​ನಲ್ಲೂ ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿ 2020ರ ಆಗಸ್ಟ್​ನಲ್ಲಿ ಮನ್ ಕೀ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣಿತಿ ಹೊಂದಿರುವ ಅನೇಕ ಪ್ರತಿಭಾವಂತ ಮತ್ತು ನುರಿತ ಕುಶಲಕರ್ವಿುಗಳು ನಮ್ಮಲ್ಲಿದ್ದಾರೆ’ ಎಂದು ಹೇಳಿದ್ದ ಮೋದಿ ಚನ್ನಪಟ್ಟಣದ ಬೊಂಬೆಗಳನ್ನೂ ಉದಾಹರಿಸಿದ್ದರು.

ರಾಷ್ಟ್ರಮಟ್ಟದಲ್ಲಿ ಪ್ರದರ್ಶನ...

  • 2013ರಲ್ಲಿ ದೆಹಲಿಯ ಗಣರಾಜ್ಯ ಉತ್ಸವದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಕಿನ್ನಾಳ ಆಟಿಕೆಗಳ ಪ್ರದರ್ಶನದ ಟ್ಯಾಬ್ಲೊ ಜನಮನ ಸೆಳೆದಿತ್ತು.

ವಿದೇಶಗಳಿಗೂ ರಫ್ತು

  • ಜರ್ಮನಿ, ಬ್ರಿಟನ್, ಮಲೇಷ್ಯಾ, ಸಿಂಗಾಪುರ, ದುಬೈ, ಸ್ವಿಜರ್ಲೆಂಡ್ ಸೇರಿ ಅನೇಕ ರಾಷ್ಟ್ರಗಳಿಗೆ ಕಿನ್ನಾಳ ಕಲಾಕೃತಿಗಳು ರಫ್ತಾಗಿವೆ.

ಮುಖ್ಯಾಂಶಗಳು

  • ಅಲ್ಪ ಬಂಡವಾಳ ಹೂಡಿ ದೇಶೀಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುವ ಕಲೆ.
  • ಸ್ವಾವಲಂಬಿ ಜೀವನ ಸಾಗಿಸುವ ಕಲಾವಿದ ಉದ್ಯೋಗವನ್ನೂ ಸೃಷ್ಟಿಸುತ್ತಾನೆ.
  • ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸದೆ ಮಾಲಿನ್ಯ ರಹಿತವಾದ ಕಲೆಗಾರಿಕೆ.
  • ಸಾಂಪ್ರದಾಯಿಕ ಪದ್ಧತಿಗೆ ಪ್ರೋತ್ಸಾಹ. ಈ ಮೂಲಕ ಕಲಾ ಪರಂಪರೆಯ ಉಳಿವು.
  • ಸ್ಥಳೀಯವಾಗಿ ಯುವಜನರಿಗೆ ಉದ್ಯೋಗ ಹಾಗೂ ಜೀವನಭದ್ರತೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net