ವೈದ್ಯರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಆಸ್ಪತ್ರೆಗಳನ್ನು ಕ್ಲೋಸ್​ ಮಾಡಿ; ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ ನ್ಯಾಯಾಲಯ

Untitled-design-2024-08-16T131024.943
Published on

ಕೋಲ್ಕತಾ: ವೈದ್ಯಕೀಯ ಕಾಲೇಜಿನಲ್ಲಿನ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿರೋಧಿಸಿ ಬುಧವಾರ (ಆಗಸ್ಟ್​​ 14) ಮೆಡಿಕಲ್​ ಕಾಲೇಜು ಆವರಣದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಂಭವಿಸಿದ ವಿಧ್ವಂಸಕ ಕೃತ್ಯದ ಕುರಿತು ಕೋಲ್ಕತಾ ಹೈಕೋರ್ಟ್ ಶುಕ್ರವಾರ(ಆಗಸ್ಟ್​​​ 16) ವಿಚಾರಣೆ ನಡೆಸಿತು.

ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಅವರು ಆಸ್ಪತ್ರೆಯಲ್ಲಿ ವಿಧ್ವಂಸಕ ಕೃತ್ಯಗಳ ಬಗ್ಗೆ ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ. ಈ ಕಾರಣದಿಂದಾಗಿ ನ್ಯಾಯಾಲಯವು ಪ್ರಕರಣವನ್ನು ಪಟ್ಟಿ ಮಾಡಿದೆ ಎಂದು ಹೇಳಿದರು. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತೀವ್ರ ಛೀಮಾರಿ ಹಾಕಿದೆ.

ಆಸ್ಪತ್ರೆಯನ್ನು ಮುಚ್ಚುವುದು ಮತ್ತು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸುವುದು ಉತ್ತಮ ಎಂದು ನ್ಯಾಯಾಲಯ ಹೇಳಿದಾಗ, ಕೋರ್ಟ್​ನಲ್ಲಿ ಹಾಜರಿದ್ದ ಸರ್ಕಾರದ ಪರ ವಕೀಲರು ಆಸ್ಪತ್ರೆ ಬಳಿ ಪೊಲೀಸರು ಇರುವುದಾಗಿ ತಿಳಿಸಿದರು.ಈ ಕುರಿತು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು, ಪೊಲೀಸರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೊಂದು ದುರದೃಷ್ಟಕರ ಪರಿಸ್ಥಿತಿ. ವೈದ್ಯರು ನಿರ್ಭಯವಾಗಿ ಹೇಗೆ ಕೆಲಸ ಮಾಡುತ್ತಾರೆ?ಈ ಘಟನೆಯ ನಂತರ ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿತು.

ಸಾಮಾನ್ಯವಾಗಿ ಜನರು ಆಸ್ಪತ್ರೆಗೆ ಪ್ರವೇಶಿಸಿದರೆ, ತುರ್ತು ಸಂದರ್ಭದಲ್ಲಿ ಪೊಲೀಸರು ಅಲ್ಲಿ ಹಾಜರಿರಬೇಕು ಎಂದು ನ್ಯಾಯಾಲಯ ಹೇಳಿದೆ. ಪ್ರತಿಭಟನಾ ಸ್ಥಳಕ್ಕೆ 7000 ಜನರು ಪ್ರವೇಶಿಸಿದ್ದಾರೆ. 7000 ಜನ ಕಾಲ್ನಡಿಗೆಯಲ್ಲಿ ಬರುವಂತಿಲ್ಲ, ಇದು ರಾಜ್ಯ ಸರ್ಕಾರದ ಆಡಳಿತದ ವೈಫಲ್ಯವನ್ನು ತೋರಿಸುತ್ತದೆ. ಘಟನೆಯ ವಿವರಗಳನ್ನು ನ್ಯಾಯಾಲಯ ಪೊಲೀಸರಿಂದ ಕೇಳಿದೆ. ವೈದ್ಯರಿಗೆ ಭದ್ರತೆ ಸಿಗದಿದ್ದರೆ ಅವರು ಹೇಗೆ ಕೆಲಸ ಮಾಡುತ್ತಾರೆ. ಇಷ್ಟು ಗಲಾಟೆ ನಡೆದಾಗ ಸಿಆರ್​ಪಿಸಿಯ ಸಿಕ್ಷನ್​ 144 ಪಾಸ್​ ಮಾಡಿ ಆ ಪ್ರದೇಶವನ್ನು ಸುತ್ತವರಿದಿರಬೇಕಿತ್ತು. ವೈದ್ಯರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಬೀಗ ಹಾಕಿ ಎಂದು ಕೋರ್ಟ್ ಹೇಳಿದೆ.

ಘಟನಾ ಸ್ಥಳಕ್ಕೆ ತೆರಳಿ ವಾಸ್ತವಾಂಶದ ತನಿಖೆ ನಡೆಸಲು ಸಿಬಿಐಗೆ ಸಂಪೂರ್ಣ ಅಧಿಕಾರವಿದೆ. ಈ ಪ್ರಕರಣದ ಮಧ್ಯಂತರ ವರದಿಯನ್ನು ಸಲ್ಲಿಸುವಂತೆಯೂ ಸಿಬಿಐಗೆ ಸೂಚಿಸಲಾಗಿತ್ತು. ಸಂತ್ರಸ್ತೆಯ ಭಾವಚಿತ್ರವನ್ನು ಮಾಧ್ಯಮಗಳಲ್ಲಿ ತೋರಿಸಬಾರದು ಅಥವಾ ಸಾರ್ವಜನಿಕಗೊಳಿಸಬಾರದು ಎಂದು ನ್ಯಾಯಾಲಯ ಹೇಳಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net