

ವಿಜಯಪುರ: ವಕ್ಫ್ ವಿಚಾರದಲ್ಲಿ ಅಸತ್ಯವನ್ನು ಸತ್ಯ ಮಾಡುವ ಕೆಲಸ ನಡೆದಿದೆ. ಸುಳ್ಳು ಪ್ರಚಾರ ನಡೆದಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿಎಂ ಪ್ರಚಾರದಲ್ಲಿ ಭಾಗಿಯಾಗದಂತೆ ತಡೆ ಹಿಡಿಯುವ ಪ್ರಯತ್ನ
"ಕಳೆದೊಂದು ವಾರದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಕ್ಫ್ ವಿಚಾರ ಸದ್ದು ಮಾಡಿದೆ. ಈಗಾಗಲೇ ಸ್ಪಷ್ಟವಾಗಿ ಹೇಳಿದಂತೆ ಒಂದೇ ಒಂದು ಇಂಚು ರೈತರು, ಧಾರ್ಮಿಕ ಸಂಸ್ಥೆಗಳ ಜಮೀನು ವಕ್ಫ್ಗೆ ಹೋಗಲು ಬಿಡಲ್ಲ. ಸಿಎಂ ಸಿದ್ದರಾಮಯ್ಯ ಅವರು ಸಹ ಸ್ಪಷ್ಟವಾಗಿ ಹೇಳಿದ್ದಾರೆ. 12 ಸಾವಿರ ಎಕರೆ ಜಮೀನು ಇನಾಂ ಮತ್ತು ಭೂ ಸುಧಾರಣೆ ಕಾಯ್ದೆಯಡಿ ಹಂಚಿದ್ದು, ಅದನ್ನು ಯಾರೂ ಹಿಂಪಡೆಯಲ್ಲ ಎಂದು ಘಂಟಾಘೋಷವಾಗಿ ಹೇಳಲಾಗಿದೆ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಹ ಅಧಿಕಾರಿಗಳಿಗೆ ಸೂಚನೆ ನೀಡಿ ನೊಟೀಸ್ ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಇಷ್ಟೆಲ್ಲ ಸತ್ಯ ಹೇಳಿದರೂ ಅನವಶ್ಯಕವಾಗಿ ಗೊಂದಲ ಸೃಷ್ಠಿಸಲಾಗುತ್ತಿದೆ" ಎಂದರು.
"ಬಿಜೆಪಿಯ ನಾಟ್ಯ ಮಂಡಳಿ ಆಂತರಿಕ ಯಡಿಯೂರಪ್ಪ ವರ್ಸೆಸ್ ಅದರ್ಸ್ ತಿಕ್ಕಾಟವನ್ನು ವಕ್ಫ್ ಕಡೆ ಒಯ್ಯಲಾಗಿದೆ. ವಿಜಯೇಂದ್ರ, ಅಶೋಕ ಟೀಮ್ ಬಂದಿಲ್ಲ. ಧಾರ್ಮಿಕ ಮುಖಂಡರಿಗೆ ಈ ವಿಚಾರ ಗೊತ್ತಿಲ್ಲ. ಕನ್ಹೇರಿ ಸ್ವಾಮೀಜಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಮೋದಿ ಸೇರಿದಂತೆ 2011ರಿಂದ ನಡೆದ ವಿದ್ಯಮಾನ ಶ್ರೀಗಳ ಗಮನಕ್ಕೆ ತಂದರೆ ಅವರ ವಿರುದ್ಧ ಶ್ರೀಗಳೇ ತಿರುಗಿ ಬಳಲಿದ್ದಾರೆ" ಎಂದು ವ್ಯಂಗ್ಯವಾಡಿದರು.
"2014ರ ಪ್ರಣಾಳಿಕೆಯಲ್ಲಿ ನರೇಂದ್ರ ಮೋದಿ ಅವರು ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ನೀಡುವುದಾಗಿ ಹೇಳುತ್ತಾರಲ್ಲದೇ ವಕ್ಫ್ಗೆ ಶಕ್ತಿ ತುಂಬುವುದು, ಧಾರ್ಮಿಕ ಮುಖಂಡರ ಜೊತೆ ಚರ್ಚಿಸಿ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆಗ ಈ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಏನು ಮಾಡುತ್ತಿದ್ದರು? ಸೋ ಕಾಲ್ಡ್ ಹಿಂದು ರಕ್ಷಕರು ಏನು ಮಾಡುತ್ತಿದ್ದರು?" ಎಂದು ಪ್ರಶ್ನಿಸಿದರು.
"ಶೋಭಾ ಕರಂದ್ಲಾಜೆ ಅವರು ಲೋಕಸಭೆಯಲ್ಲಿ ವಕ್ಫ್ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಶ್ನೆ ಮಾಡುತ್ತಾರೆ. ಸಂಸತ್ನಲ್ಲಿ ಅಂದಿನ ಬಿಜೆಪಿ ಸರ್ಕಾರ ಉತ್ತರ ನೀಡುತ್ತಾ ವಕ್ಫ್ ಆಸ್ತಿಗಳನ್ನು ಜಿಐಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ. ಡಿಜಿಟಲೈಜೇಶನ್ ಮಾಡಲಾಗುತ್ತಿದೆ. ಸಮರೋಪಾದಿಯಲ್ಲಿ ಶೇ.85 ರಷ್ಟು ಡಿಜಿಟಲೈಜೇಶನ್ ಮಾಡಿದ್ದಾಗಿ ತಿಳಿಸಿತ್ತು. ಹಣಕಾಸಿನ ನೆರವು ಸಹ ನೀಡಲಾಗಿದೆ ಎಂದು ತಿಳಿಸಿತ್ತು. ಡಬ್ಲೂ ಎಎಂಎಸ್ ಐ ಪೋರ್ಟ್ ಲ್ ಸಹ ಆರಂಭಿಸಿದ್ದು, ಆಸ್ತಿಗಳನ್ನು ನೋಂದಣಿ ಮಾಡಲಾಗುತ್ತಿದೆ ಎಂದು ಉತ್ತರಿಸಲಾಗಿತ್ತು" ಎಂದು ಹೇಳಿದರು.
"ಅಲ್ಲದೇ ವಕ್ಪ್ ಆಸ್ತಿ, ನಿಯಮಾವಳಿ ಹಾಗೂ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಜಾಕಿವುಲ್ಲಾ ಖಾನ್ ನೇತೃತ್ವದಲ್ಲಿ ಸಮಿತಿ ಕೂಡ ರಚನೆ ಮಾಡಿದ್ದಾರೆ. ಮುಂದುವರಿದು ಕಳೆದ ಮೂರು ವರ್ಷಗಳಲ್ಲಿ ನಿರ್ವಹಣೆ ಹಾಗೂ ಮೂಲ ಸೌಕರ್ಯಗಳಿಗೆ ಅನುದಾನ ನೆರವು ಸಹ ನೀಡಲಾಗಿದೆ ಎಂದು ತಿಳಿಸಲಾಗಿದೆ. ಬಹುಶಃ ಯತ್ನಾಳರಿಗೆ ಇದೆಲ್ಲ ಗೊತ್ತಿಲ್ಲ ಅನ್ನಿಸುತ್ತದೆ. ಗೊತ್ತಿದ್ದರೆ ಅಂದೇ ರಾಜೀನಾಮೆ ಕೊಡುತ್ತಿದ್ದರೇನೋ. ಇದೆಲ್ಲ ಕೇವಲ ನಾಟಕ. ವಕ್ಫ್ ಕಾಯ್ದೆ ತಿದ್ದುಪಡಿ ಹಿನ್ನೆಲೆ ರಾಷ್ಟ್ರದ ಲ್ಲಿ ಹಿಂದು-ಮುಸ್ಲಿಂ ಒಡೆದಾಳುವ ನೀತಿ ಭಾಗವಾಗಿ ಈ ನಾಟಕ ನಡೆದಿದೆ" ಎಂದರು.