

ಐದಾರು ಕಂತುಗಳ ಹಿಂದಿರಬಹುದು ಒಮ್ಮೆ ಈ ಅಂಕಣದಲ್ಲಿ ಒಂದು ಇಂಗ್ಲಿಷ್ ಪದಕ್ಕೆ ಕನ್ನಡ ಪದ ಸೂಚಿಸಿದವರಲ್ಲಿ ನಾರಾಯಣ ಮಿಸ್ಕಿನ್ ಎಂಬೊಂದು ಹೆಸರು ಪ್ರಕಟವಾಗಿತ್ತು. ಅದಾದ ಮೇಲೆ ಇನ್ನೊಂದು ಸಲ ಲೀಲಾವತಿ ಮಿಸ್ಕಿನ್ ಎಂಬ ಹೆಸರೂ ಸೇರಿಕೊಂಡು ಎರಡು ಪ್ರವೇಶಿಕೆಗಳು ಬಂದವು. ಆ ಸಲವೂ ಅವರಿಬ್ಬರ ಪದ ಆಯ್ಕೆಯಾಗಿತ್ತು, ಹೆಸರು ಪ್ರಕಟವಾಗಿತ್ತು. ಮತ್ತೊಮ್ಮೆ ಅಂಬಾಲಾಲ್ ಮಿಸ್ಕಿನ್ ಎಂಬುವವರೂ ಭಾಗವಹಿಸಿದ್ದರು. ಆಮೇಲಂತೂ ‘ಮಿಸ್ಕಿನ್ ಕುಟುಂಬದ ಸದಸ್ಯರು’ ಎಂದು ಏಕೀಕೃತ ಪ್ರವೇಶಿಕೆ ಬರತೊಡಗಿತು.
ಇವರೆಲ್ಲ ಒಂದೇ ಕುಟುಂಬದವರಿರಬಹುದು ಎಂದು ಅಂದಾಜಾಯ್ತು. ಆನಂದವೂ ಆಯ್ತು. ಪೂರಕವಾಗಿ ಕಳೆದಸಲ ಒಂದು ಛಾಯಾಚಿತ್ರವನ್ನೂ ಕಳುಹಿಸಿದ್ದರು. ಗೋಡೆಯ ಮೇಲೆ ಕರಿಹಲಗೆ, ಅದರಲ್ಲಿ ಮೇಲ್ಗಡೆ ‘ವಿದ್ಯಾವರ್ಷಿಣಿ ಮನೆಪಾಠ ತರಗತಿ’ ಎಂದು, ಅದರ ಕೆಳಗೆ ‘ಕಟ್ಟುವೆವು ನಾವು ಕನ್ನಡದ ಪದವೊಂದನು’ ಎಂದು ಸೀಮೆಸುಣ್ಣದಿಂದ ಮುದ್ದಾದ ಕನ್ನಡ ಅಕ್ಷರಗಳಲ್ಲಿ ಬರೆದದ್ದಿತ್ತು. ಆ ವಾರದ ಮೂರು ಇಂಗ್ಲಿಷ್ ಪದಗಳು ಮತ್ತು ಪ್ರತಿಯೊಂದರ ಪಕ್ಕದಲ್ಲಿ ತಲಾ ಏಳೆಂಟು ಕನ್ನಡ ಪದಗಳೂ ಇದ್ದವು. ಜೊತೆಯಲ್ಲೇ ಪಂಪನ ಕವಿವಾಣಿಗಳು, ಕನ್ನಡದ ಬಗೆಗೆ ಕೆಲವು ನಲ್ನುಡಿಗಳು. ಕುತೂಹಲ ತಾಳಲಾರದೆ ಈ ಚಟುವಟಿಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂದಿದ್ದೇನೆ, ಸಂರ್ಪಸಬಹುದೇ ಎಂದು ಕೇಳಿದೆ.
ಹಾಗೆ ಮೊನ್ನೆ ಲೀಲಾವತಿ ಮಿಸ್ಕಿನ್ ಅವರು ವಾಟ್ಸ್ಆಪ್ ಕರೆ ಮಾಡಿ ಹಂಚಿಕೊಂಡ ವಿಷಯ ಇಷ್ಟು: ಅವರೊಬ್ಬ ನಿವೃತ್ತ ಶಿಕ್ಷಕಿ. ಶಾಲೆಯಲ್ಲಿ ವಿಜ್ಞಾನ ಕಲಿಸುತ್ತಿದ್ದವರು. ಈಗ ವಿದ್ಯಾವರ್ಷಿಣಿ ಎಂಬ ಹೆಸರಿನ ಗೃಹಸಂಸ್ಥೆ ಆರಂಭಿಸಿ ಮನೆಪಾಠ ಹೇಳಿಕೊಡುತ್ತಾರೆ. ವಿಜ್ಞಾನವಷ್ಟೇ ಅಲ್ಲದೇ ಅವಕಾಶವಾದಾಗೆಲ್ಲ ಕನ್ನಡದ ಕಂಪನ್ನೂ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾರೆ. ಪತಿ ನಾರಾಯಣ ಮಿಸ್ಕಿನ್, ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿಯಲ್ಲಿ ಸೇವೆ ಸಲ್ಲಿಸಿ ಈಗ ಸ್ವಯಂನಿವೃತ್ತಿ ಪಡೆದಿದ್ದಾರೆ. ಅಣ್ಣತಮ್ಮಂದಿರೆಲ್ಲ ಸೇರಿ ಒಂದೇ ಸೂರಿನಡಿ ಕೂಡುಕುಟುಂಬ. ಹಬ್ಬಹರಿದಿನಗಳನ್ನೂ ಎಲ್ಲರೂ ಒಟ್ಟಿಗೇ ಆಚರಿಸುತ್ತಾರೆ. ಹುಬ್ಬಳ್ಳಿಯಲ್ಲೇ ಅವರದೊಂದು ಪುಸ್ತಕದಂಗಡಿಯೂ ಇದೆ.
ಈಗ ವಿದ್ಯಾವರ್ಷಿಣಿ ಮನೆಪಾಠದಲ್ಲಿ ಹದಿನೈದು ದಿನಗಳಿಗೊಮ್ಮೆ ‘ಕಟ್ಟುವೆವು ನಾವು ಕನ್ನಡದ ಪದ...’ ವಿಷಯದ್ದೇ ತರಗತಿ ನಡೆಯುತ್ತದೆ. ಮೂರು ಇಂಗ್ಲಿಷ್ ಪದಗಳಿಗೆ ಸೂಕ್ತ ಕನ್ನಡ ಪದಗಳು ಯಾವುವು ಆಗಬಹುದೆಂದು ಕುಟುಂಬಸದಸ್ಯರೆಲ್ಲ ರ್ಚಚಿಸುತ್ತಾರೆ, ಕರಿಹಲಗೆಯ ಮೇಲೆ ಬರೆದು ಪಟ್ಟಿ ಮಾಡುತ್ತಾರೆ, ಅಂತಿಮವಾಗಿ ಒಂದೊಂದನ್ನು ಆಯ್ಕೆ ಮಾಡಿ ವಾಟ್ಸ್ಆಪ್ನಲ್ಲಿ ಕಳುಹಿಸುತ್ತಾರೆ. ಸಂದೇಶದ ಕೊನೆಗೆ ‘ಮಿಸ್ಕಿನ್ ಕುಟುಂಬದ ಸದಸ್ಯರಿಂದ’ ಎಂದು ನಮೂದಿಸುತ್ತಾರೆ. ಅಂಕಣದ ಹೆಸರು ‘ಕಟ್ಟುವೆವು ನಾವು...’ ಎಂದು ಉತ್ತಮಪುರುಷ ಬಹುವಚನ ಧ್ವನಿಸುವಂತೆ ಇರುವುದಕ್ಕೂ ಒಂದು ಸಾರ್ಥಕ್ಯ. ಈ ಬಾರಿ ವಿಶೇಷ ಕೋರಿಕೆಯ ಮೇರೆಗೆ, ತರಗತಿ ಮುಗಿದ ಮೇಲೆ ಹಿನ್ನೆಲೆಯಲ್ಲಿ ಕರಿಹಲಗೆ ಮತ್ತು ಮುಂದೆ ಕುಟುಂಬಸದಸ್ಯರೆಲ್ಲ ಕುಳಿತುಕೊಂಡಿರುವ ಛಾಯಾಚಿತ್ರ ಕಳುಹಿಸಿದ್ದಾರೆ. ಇದೊಂದು ರಚನಾತ್ಮಕ ಕನ್ನಡಪ್ರೀತಿಯ ಮತ್ತು ಕೌಟುಂಬಿಕ ಸಹಬಾಳ್ವೆಯ ಅಪರೂಪದ ನಿದರ್ಶನ. ನಮಗೆಲ್ಲರಿಗೂ ಸ್ಪೂರ್ತಿಯಾಗಲೆಂದು ಇಲ್ಲಿ ಹಂಚಿಕೊಂಡಿದ್ದೇನೆ.
ಇನ್ನು, ಕಳೆದ ಸಲದ ಇಂಗ್ಲಿಷ್ ಪದಗಳನ್ನು ಅವಲೋಕಿಸೋಣ. ಮೊದಲನೆಯದು Prescription. ಇದು prescribe ಎಂಬ ಕ್ರಿಯಾಪದದ ನಾಮಪದರೂಪ. ಈ ಕ್ರಿಯಾಪದವಾದರೋ pre ಮತ್ತು scribe ಎಂಬೆರಡು ಘಟಕಗಳಿಂದಾದದ್ದು, ‘ಮುಂಚಿತವಾಗಿ ಬರೆದಿಡು’ ಎಂಬ ಅರ್ಥವುಳ್ಳದ್ದು. ಯಾವುದೇ ನಿರ್ದೇಶನ, ಕಾನೂನು, ಧಾರ್ವಿುಕ ನಡಾವಳಿ, ಅಥವಾ ನಿಯಮವನ್ನು ಮೊದಲೇ ಬರೆದಿಟ್ಟರೆ ಅದೊಂದು ಪ್ರಿಸ್ಕ್ರಿಪ್ಷನ್. ಶಿಕ್ಷಣದಲ್ಲಿ ಯಾವ ವಿಷಯಕ್ಕೆ ಯಾವ ಪಠ್ಯಪುಸ್ತಕ ಎಂದು ನಿರ್ದೇಶಿಸುವುದನ್ನೂ ಪ್ರಿಸ್ಕ್ರೈಬ್ ಮಾಡುವುದು ಎಂದೇ ಹೇಳುವುದು. ಆದರೆ 16ನೆಯ ಶತಮಾನದಿಂದೀಚೆಗೆ, ರೋಗನಿವಾರಣೆಗೆ ವೈದ್ಯರಿಂದ ಸೂಚಿಸಲ್ಪಡುವ ನಿರ್ದೇಶನ ಎಂಬರ್ಥದಲ್ಲೇ ಹೆಚ್ಚಾಗಿ ಪ್ರಿಸ್ಕ್ರಿಪ್ಷನ್ ಬಳಕೆಯಾಗುತ್ತಿದೆ. ಸಾಮಾನ್ಯವಾಗಿ ಔಷಧದ ಬಗೆಗಿನ ಸೂಚನೆಯೇ ಆದರೂ ಪಥ್ಯ, ವ್ಯಾಯಾಮ, ಜೀವನಕ್ರಮ ಮತ್ತಿತರ ಸಲಹೆಗಳನ್ನೂ ಒಳಗೊಳ್ಳಬಹುದು.
ಆ ದೃಷ್ಟಿಯಿಂದ ‘ವೈದ್ಯಾದೇಶ’ ಹೆಚ್ಚು ಅರ್ಥಪೂರ್ಣ. ಸೂಚಿಸಿದವರು: ಡಾ.ವಿ.ಬಿ.ಹೊಸಪೇಟಿ ಮತ್ತು ವಸಂತಕುಮಾರ್ ಕಲ್ಯಾಣಿ. ‘ವೈದ್ಯಸೂಚಿ’ (ಅನಘಾ ಪುರಾಣಿಕ್, ನಿತ್ಯಾನಂದ ಬ್ರಹ್ಮಾವರ, ಎಂ.ಕೆ.ಬದರಿನಾಥ್, ಯಮನಪ್ಪ ಕೊಟ್ನಿಕಲ್, ಭೀಮರಾವ್ ಸುಬೇದಾರ್, ವತ್ಸಲಾ ವಿಶ್ವನಾಥ್, ಯು.ಪರಮೇಶ್ವರ ಭಟ್) ಸಹ ಯೋಗ್ಯವೇ. ಸೀಮಿತ ಅರ್ಥದಲ್ಲಿ ‘ಪಥ್ಯಸೂಚಿ’, ‘ಚಿಕಿತ್ಸಾಸೂಚಿ’, ‘ನೇಮಸೂಚಿ’, ‘ಔಷಧಾದೇಶ’, ‘ಔಷಧಸೂಚಿ’ (ಅನಿಲ್ ಕುಸುಗಲ್, ರಂಗನಾಥ ಟಿ.ಕೆ, ಶಿವಶಂಕರ ಪ್ರಭು, ಸ.ಮ.ಜಿರ್ಲಿಮಠ, ಸುಜಯಾ ಬೆಂಗಳೂರು, ಎಂ.ಕೆ.ರಮೇಶ್, ಭ.ನಿಂ.ಗೋಪಿನಾಥ್, ಅನಸೂಯಾ ಜಗದೀಶ್, ಡಾ.ಸಂಗಮೇಶ ಸುರಭಿ, ಗಿರಿಜಾ ಲಕ್ಷ್ಮೀಕಾಂತ್, ಮೀನಾಕ್ಷಿ ಟಕ್ಕಳಕಿ, ಡಾ.ರವಿ ಕುಲಕರ್ಣಿ, ಸಂಜೀವ ಜೋಷಿ ಮುಂತಾದವರು) ಸಹ ಮಾನ್ಯವೇ. ವಿಶಾಲ ಅರ್ಥದಲ್ಲಿ ‘ಅನುಶಾಸನ’ (ವಿಲಾಸಿನಿ ಭಟ್, ಶಾಂತಿನಿ ಮಂಜುನಾಥ್, ಎನ್.ವಿ.ಶಂಕರ್) ಎಂದರೂ ತಪ್ಪೇನಿಲ್ಲ. ‘ಔಷಧಿ ಚೀಟಿ’, ‘ಮದ್ದು ಚೀಟಿ’, ‘ಮಾತ್ರೆ ಚೀಟಿ’, ‘ದವಾ ಚೀಟಿ’, ‘ಸಲಹಾ ಚೀಟಿ’, ‘ಚಿಕಿತ್ಸಾ ಚೀಟಿ’, ‘ಶುಶ್ರೂಷೆ ಚೀಟಿ’ ಮುಂತಾದ ಪ್ರವೇಶಿಕೆಗಳೂ ಬಂದಿವೆ. ‘ಚೀಟಿ’ ಕನ್ನಡದಲ್ಲಿ ಹಾಸುಹೊಕ್ಕಿದ್ದರೂ, ಮೂಲತಃ ಅದು ಇಂಗ್ಲಿಷ್ನ chit! ಅದಕ್ಕಿಂತ, ವಿಶೇಷವಾಗಿ ಕಂಡುಬಂದದ್ದು ಅಚ್ಚಕನ್ನಡದ ‘ಮದ್ದೋಲೆ’ (ಸತ್ಯ ಹರಿಹಳ್ಳಿ).
ಎರಡನೆಯ ಪದ Routine.. ಇದರ ಮೂಲ route ಎಂಬುದೇ, "usual course of action, beaten path' ಅಂದರೆ ಸದಾ ತುಳಿದ ಹಾದಿ ಎಂದರ್ಥ. ಈಗಲೂ ಹೆಚ್ಚಾಗಿ " customary course of action; more or less mechanical performance of certain acts or duties' ಎಂಬರ್ಥದಲ್ಲೇ ಬಳಕೆ. ವಾಹನವನ್ನು ಸುಸ್ಥಿತಿಯಲ್ಲಿಡಲಿಕ್ಕೆ ಕಾಲಕಾಲಕ್ಕೆ ಮಾಡುವ ನಿರ್ವಹಣೆ, ಆಸ್ಪತ್ರೆಯಲ್ಲಿ ವೈದ್ಯರು ವಿವಿಧ ವಿಭಾಗಗಳಿಗೆ ನಿಯತವಾಗಿ ಭೇಟಿಕೊಟ್ಟು ಮಾಡುವ ರೋಗಿಗಳ ತಪಾಸಣೆ, ನೃತ್ಯ-ನಾಟಕಗಳ ಅಭ್ಯಾಸವೂ ಸೇರಿದಂತೆ ಪದೇ ಪದೇ ಮಾಡುವ ಚಟುವಟಿಕೆಗಳೆಲ್ಲ routine ಎಂದೆನಿಸಿಕೊಳ್ಳುತ್ತವೆ. ಇಲ್ಲಿ ಆವರ್ತನವು ದೈನಿಕವಾಗಿರಬೇಕೆಂದಿಲ್ಲ, ಆದ್ದರಿಂದ ದಿನಚರಿ, ನಿತ್ಯಕ್ರಮ, ಅಥವಾ ನಿತ್ಯವಿಧಿ ಎನ್ನುವುದು ಅಷ್ಟು ಸಮಂಜಸವಲ್ಲ. ಅದಕ್ಕಿಂತ ‘ನಿಯತಕ್ರಮ’ ಒಳ್ಳೆಯ ಪದ.
ಸೂಚಿಸಿದವರು: ದಿವ್ಯಾ ಭಟ್, ರೇವತಿ ಜೋಶಿ, ಜ್ಯೋತಿ ಕೃಷ್ಣ, ವಸುಮತಿ ಮೈಸೂರು, ದಾಮೋದರ ಭಟ್, ಸೂರ್ಯನಾರಾಯಣ ಎಲ್.ವಿ, ಸಂಧ್ಯಾ ಅಡಿಗ, ಅಪ್ಪು ಮುತ್ಯ, ಮುರಳೀಧರ ತುಂಬಳ ಮತ್ತು ಎನ್.ಎಚ್.ದೇಶಪಾಂಡೆ. ವಾಡಿಕೆಯಲ್ಲಿರುವ ‘ವಾಡಿಕೆ’ ಪದವೇ ಒಳ್ಳೆಯದೆಂದವರು: ಸುರೇಂದ್ರ ಪೈ, ಕಿರಣಕುಮಾರ್ ಎಚ್.ಎ, ಲಕ್ಷ ್ಮ ಗೋರ್ಲಕಟ್ಟೆ, ದೇವೇಂದ್ರ ಕಡೂರು, ಸುನಯನಾ ಮಾರ್ನಾಡು, ನರೇಂದ್ರನಾಥ್ ಎಚ್.ಎಂ, ಮಂಜುನಾಥ ಡಿ.ಎಸ್ ಮುಂತಾದವರು. ‘ಮಾಮೂಲಿ’ ಸಹ ಆಗಬಹುದೆಂದವರು: ಆರ್.ವಿ.ಮೂರ್ತಿ, ಸುಬ್ಬಣ್ಣ ಎನ್.ಕೆ, ಸತ್ಯ ಚಿತ್ರದುರ್ಗ, ಜಗದಂಬಾ ಬೆಂಗಳೂರು, ಮಂಜುಳಾ ಪ್ರಭು ಮರೋಳ, ಸೀತಾ ವ್ಯಾಸಮುದ್ರಿ, ಎನ್.ಎಸ್. ಚಿದಂಬರ, ಪಂಪಣ್ಣ ಗೌಡ, ಜಿ.ಎಚ್.ಸಂಕಪ್ಪ, ವಿ.ವಿಜಯೇಂದ್ರ ರಾವ್, ಗಿರೀಶ್ ಎ.ವಿ, ಅರುಣ ಎಸ್ ಮತ್ತು ಶ್ರೀಹರ್ಷ ಕೆ.ಎ. ಆದರೆ ಈ ಪದದ ತೊಂದರೆಯೇನೆಂದರೆ ಮುರಲೀನಾಥ ಗುಪ್ತ ಅವರು ಬರೆದಂತೆ ‘ಲಂಚ ಅಲ್ಲ!’ ಎಂದು ಆವರಣದೊಳಗೆ ಬರೆಯಬೇಕಾಗುತ್ತದೆ. ಅಂದಹಾಗೆ ಓದುಗರ ಯೋಚನಾಸರಣಿ ಎಷ್ಟು ಹರಿತವಾಗಿರುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ‘ಮತ್ತದೇ’ ಎಂಬ ಪದ. ‘ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ... ಕೆ.ಎಸ್. ನಿಸಾರ್ ಅಹಮದ್ರ ಕವನದಿಂದ ಹೊಳೆದದ್ದು’ ಎಂದು ಬರೆದಿದ್ದಾರೆ ಗಿರಿಜಾ ಲಕ್ಷ್ಮೀಕಾಂತ್.
ಕೊನೆಯದಾಗಿ Waiter ಎಂಬ ಪದ. ತುಂಬ ಹಿಂದೆ, 14ನೆಯ ಶತಮಾನದಾಚೆಗೆ, ಇಂಗ್ಲಿಷ್ನಲ್ಲಿ ಈ ಪದ ಕಾವಲುಗಾರ ಅಥವಾ ಗೂಢಚಾರ ಎಂಬರ್ಥದಲ್ಲಿ ಬಳಕೆಯಾಗುತ್ತಿತ್ತಂತೆ. ಆದರೆ 15ನೆಯ ಶತಮಾನದಿಂದೀಚೆಗೆ "attendant at a meal, servant who waits at tables' ಎಂಬರ್ಥದಲ್ಲಿ ಬಳಕೆಯಲ್ಲಿದೆ. ಬಹುಶಃ ರಾಜ-ಮಹಾರಾಜರ, ಸಿರಿವಂತರ ಭೋಜನದ ವೇಳೆ ಅವರ ಆಜ್ಞಾಪಾಲಕನಾಗಿ, ಸಹಾಯಕನಾಗಿ ಒಬ್ಬಿಬ್ಬರು ಇರಬೇಕೆಂಬ ರೂಢಿ. ರಾಜಮಹಾರಾಜರು ತಲೆತಗ್ಗಿಸಿ ನಡೆಯುವಂತಿಲ್ಲ ತಲೆಯೆತ್ತಿಯೇ ನಡೆಯಬೇಕು ಆದ್ದರಿಂದ ದಾರಿಯಲ್ಲಿ ಮೆಟ್ಟಲುಗಳೇನಾದರೂ ಬಂದರೆ ಪಾದದೆಚ್ಚರ ತಿಳಿಸಲಿಕ್ಕೂ ಒಬ್ಬ ಸೇವಕನಿರುತ್ತಿದ್ದನಂತೆ, ಹಾಗೆಯೇ ಈ ಭೋಜನ-ಸಹಾಯಕ. ಈಗ ಉಪಾಹಾರಗೃಹಗಳಲ್ಲಿ ಗ್ರಾಹಕರ ಆದೇಶ ಸ್ವೀಕರಿಸಿ ಪಾಕಶಾಲೆಗೆ ರವಾನಿಸಿ ಅಲ್ಲಿಂದ ತಿಂಡಿತಿನಸು ತಂದು ಗ್ರಾಹಕರೆದುರಿಗೆ ಇಡುವವನು waiter. ಕರ್ನಾಟಕದಲ್ಲಿ ಹಲವೆಡೆ ಈತನನ್ನು ‘ಮಾಣಿ’ ಎನ್ನುವುದು ರೂಢಿಯಾಗಿರುವುದರಿಂದ ಅದೇ ಸೂಕ್ತ ಪದ ಎಂದು ಬಹುಮತದ ಆಯ್ಕೆ.
ಸೂಚಿಸಿದವರು: ಪ್ರಭುಪ್ರಸಾದ್ ನಡುತೋಟ, ಪಿ.ಜೆ.ರಾಘವೇಂದ್ರ, ಬಿ.ಕೆ ಶಿವಕುಮಾರ್, ರಾಜೇಂದ್ರ ಕಳಸಣ್ಣವರ, ಸುಧಾಕರ ನಾಯಕ್, ಸಂಗೀತಾ ಶೆಣೈ, ಶಾಂತಾರಾಮು, ಡಾ.ಗುರುರಾಜ ಕಳ್ಳೀಹಾಳ, ಪಾರ್ವತಿ ರಾಮನ್, ವಸಂತಲಕ್ಷಿ ್ಮ ರಾಮಚಂದ್ರ, ಕಾಡೇಶ ವಿ.ಬಿ, ಅನಿತಾ ಭಟ್, ಸತೀಶ ಕಬೇಕೋಡಿ, ದತ್ತಾತ್ರಿ ಸಾಮಗ, ಶಶಿಕಲಾ ಜಿ.ಕೆ, ಪುಷ್ಪಲತಾ ಸಂಪಂಗಿರಾಮನಗರ, ಸಣ್ಣಪ್ಪ ನಾಯಕ, ಶೋಭಾ ತಿಪಟೂರು ಮುಂತಾದವರು. ‘ಸ್ವಾಮೀಜಿಗಳ ಸಹಾಯಕ ಗಿಂಡಿಮಾಣಿ ಇದ್ದಂತೆ ಈತ ತಿಂಡಿಮಾಣಿ!’ ಎಂದು ಪ್ರಾಸಬದ್ಧ ಪದ ಕಟ್ಟಿದವರು ಮೈಸೂರಿನ ಗಿರೀಶ ಕೆ.ಎಸ್. ಆದರೆ ತಿಂಡಿಗಷ್ಟೇ ಸೀಮಿತಗೊಳಿಸದೆ ಬೇರೆ ಕೆಲಸಗಳಿಗೂ ನೆರವಾಗುವವನು ಎಂಬರ್ಥದಲ್ಲಿ ‘ಪರಿಚಾರಕ’ ಪದ ಸೂಚಿಸಿದ್ದಾರೆ ಬದರೀನಾಥ ಶರ್ಮ, ಭಾವುರಾವ್ ಕುಲಕರ್ಣಿ, ಉಷಾಕಿರಣ ಅತ್ತಾವರ್, ರಂಜಿತಾ ಹಿರೇಮಠ, ರಾಧಾ ಬಾಲಕೃಷ್ಣ, ಕೃಪಾ ಗೋಖಲೆ, ಜಿ.ನಾರಾಯಣ ರಾವ್, ಬಿ.ಎಸ್. ನಟರಾಜು ಮುಂತಾದವರು. ‘ಆಜ್ಞಾಧಾರಕ’ ಆಗಬಹುದೆಂದಿದ್ದಾರೆ ನಾಗೇಶ ಫಾಟಕ್. ಆದೇಶವನ್ನು ಕೇಳಿ ಸೇವೆಯನ್ನು ಈವವನು (ಕೊಡುವವನು) ಆದ್ದರಿಂದ ‘ಕೇಳೀವ’ ಎಂದು ಹೊಚ್ಚಹೊಸ ಪದ ಕಟ್ಟಿದ್ದಾರೆ ಎಂ.ಬಾಲಕೃಷ್ಣ ಭಟ್. ವೇಟರ್ ವೃತ್ತಿಸೂಚಕವಷ್ಟೇ ಆಗಬೇಕಿಲ್ಲ, ಕಾಯುವಿಕೆಯನ್ನು ಜೀವನದಲ್ಲಿ ಪ್ರತಿಯೊಬ್ಬರೂ ಮಾಡಬೇಕಾಗಿ ಬರುತ್ತದೆ- ಪರೀಕ್ಷಾ ಫಲಿತಾಂಶಕ್ಕಾಗಿ, ಉದ್ಯೋಗಾವಕಾಶಕ್ಕಾಗಿ, ಇಷ್ಟ ಪಡುವವರ ಪ್ರೀತಿಗಾಗಿ, ಬದಲಾವಣೆಯ ಬೆಳಕಿಗಾಗಿ... ಆದ್ದರಿಂದ ನಾವೆಲ್ಲರೂ ವೇಟರ್ಗಳೇ. ಒಬ್ಬ ರೈತ, ಒಬ್ಬ ವಿದ್ಯಾರ್ಥಿ, ಒಬ್ಬಳು ತಾಯಿ, ಒಂದು ಮಗು... ಎಲ್ಲರೂ ವೇಟರ್ಗಳೇ, ಪ್ರತೀಕ್ಷೆಯಲ್ಲಿರುವ ‘ಪ್ರತೀಕ್ಷಕ’ರೇ ಎಂದು ಅಧ್ಯಾತ್ಮ ದೃಷ್ಟಿಕೋನದಿಂದ ವ್ಯಾಖ್ಯಾನಿಸಿದ್ದಾರೆ ರಾಘವೇಂದ್ರ ಅಲ್ಲಪ್ಪ ಗೌಡರ. ಎಲ್ಲರಿಗೂ ಅಭಿನಂದನೆಗಳು.
1. Apartment: ಅಮೆರಿಕನ್ ಇಂಗ್ಲಿಷ್ನಲ್ಲಿ ಅಪಾರ್ಟ್ವೆುಂಟ್. ಬ್ರಿಟಿಷ್ ಇಂಗ್ಲಿಷ್ನಲ್ಲಿ ಫ್ಲಾ್ಯಟ್. ಕನ್ನಡದಲ್ಲಿ?
2. Laminate: ಪ್ರಮಾಣಪತ್ರಗಳು, ಅಂಕಪಟ್ಟಿ ಮತ್ತಿತರ ದಾಖಲೆಪತ್ರಗಳಿಗೆ ದೀರ್ಘಬಾಳಿಕೆಗೋಸ್ಕರ ಕವಚ ತೊಡಿಸುವುದನ್ನು ಏನನ್ನೋಣ?
3. Picnic: ಪ್ರತಿವರ್ಷ ಜೂನ್ 18ರಂದು ಅಂತಾರಾಷ್ಟೀಯ ಪಿಕ್ನಿಕ್ ದಿನಾಚರಣೆ. ಪಿಕಿನಿಕ್ ಎನ್ನಲಿಕ್ಕೊಂದು ಕನ್ನಡ ಪದ ಬೇಕಲ್ಲ?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)