ಬೇಸರ ಇದ್ರೆ ಕೆಲಸಕ್ಕೆ ಬರಬೇಡಿ! ರಜೆ ತೆಗೆದುಕೊಳ್ಳಿ;​ ಇಂಥ ಬಾಸ್ ಎಲ್ಲಿ ಸಿಗ್ತಾರೆ?​ ನೀವೇ ಪುಣ್ಯವಂತರು ಎಂದ್ರು ನೆಟ್ಟಿಗರು

WhatsApp Image 2024-04-18 at 10.48.55 AM
Published on

ದಿನನಿತ್ಯ ಜನರು ತಮ್ಮ ವೃತ್ತಿಗೆ ಹೋಗಲೇಬೇಕು, ಕೆಲಸ ಮಾಡಲೇಬೇಕು, ಹಲವು ವರ್ಗಗಳ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಅತೀ ಮುಖ್ಯವಾಗಿ ಬೇಕಾದದ್ದು ರಜೆ. ವಾರದ ಆರು ದಿನಗಳು ದುಡಿದು, ಒಂದು ದಿನ ವೀಕ್​-ಆಫ್​ ಪಡೆಯುವುದೇ ಎಲ್ಲಿಲ್ಲದ ಸಂತಸ. ಇದೊಂದು ದಿನ ಎಲ್ಲರಿಗೂ ಪೂರ್ಣ ಪ್ರಮಾಣದಲ್ಲಿ ವಿಶ್ರಾಂತಿಸುವ ದಿನವಾಗಿರುತ್ತದೆ. ಆದರೆ, ಇದನ್ನು ಹೊರತುಪಡಿಸಿದರೆ, ಹಬ್ಬ ಹಾಗೂ ಇತರೆ ದಿನಗಳಲ್ಲಿ ರಜೆ ಸಿಗಬಹುದೇ ವಿನಃ ಉಳಿದ ಇನ್ಯಾವುದೇ ಸುಖಾಸುಮ್ಮನೆ ಕಾರಣಗಳಿಗೆ ಲೀವ್ ಸಿಗೋದಿಲ್ಲ. ಇದು ಪ್ರತಿ ಸಂಸ್ಥೆಯ ಉದ್ಯೋಗಿಗಳಿಗೆ ತಿಳಿದಿರುವ ಸಾಮಾನ್ಯ ಸಂಗತಿ.

ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಉತ್ತಮ ವರ್ಕ್​-ಲೈಫ್ ಸಮತೋಲನವನ್ನು ಕಾಪಾಡಿಕೊಳ್ಳಲು ಹಾಗೂ ಅದಕ್ಕೆ ಹೆಚ್ಚು ಸಹಾಯ ತನ್ನಿಂದ ಆಗಬೇಕು ಎಂಬ ಹಿತದೃಷ್ಟಿಯಿಂದ ಉದ್ಯೋಗಿಗಳು ಬೇಸರವಾಗಿದ್ದರೆ ಅಥವಾ ಸಂತೋಷದಿಂದ ಕೆಲಸ ಮಾಡಲು ಸಾಧ್ಯವಿಲ್ಲ ಅಂದರೆ, ಆ ದಿನ ಅವರು ಸ್ವಯಂ ಘೋಷಿತ ರಜೆ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರೆ.

ಚೀನಾದ ಹೆನಾನ್ ಪ್ರಾಂತ್ಯದ ಪ್ಯಾಂಗ್ ಡಾಂಗ್ ಲೈನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಯು ಡಾಂಗ್ಲೈ ಎಂಬ ಮಾಲೀಕ, ತನ್ನ ಉದ್ಯೋಗಿಗಳು ತಮ್ಮ ಅನುಕೂಲಕ್ಕಾಗಿ ಹೆಚ್ಚುವರಿ 10 ದಿನಗಳ ರಜೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. "ಕಂಪೆನಿಯ ಪ್ರತಿಯೊಬ್ಬ ಸಿಬ್ಬಂದಿಗೆ ಸ್ವಾತಂತ್ರ್ಯ ಇರಬೇಕೆಂದು ನಾನು ಬಯಸುತ್ತೇನೆ. ಎಲ್ಲರಿಗೂ ಒಂದೊಂದು ನೋವು ಇರುತ್ತದೆ. ಅವರೆಲ್ಲಾ ಸಂತೋಷದಿಂದ ಇರಬೇಕು, ಆದ್ದರಿಂದ ಸಂತೋಷವಾಗಿರದಿದ್ದರೆ, ಅಂದು ಉದ್ಯೋಗಿಗಳು ಕೆಲಸಕ್ಕೆ ಬರಬೇಡಿ ಎಂದು ತಿಳಿಸಿದ್ದೇನೆ" ಎಂದು ಯು ಡಾಂಗ್ಲೈ ಹೇಳಿದ್ದಾರೆ.

"ನಾನು ಇದನ್ನು ಅನ್​ಹ್ಯಾಪಿ ಲೀವ್ ಎಂದು ಕರೆಯುತ್ತೇನೆ. ಉದ್ಯೋಗಿಗಳಿಗೆ ಸಮಯಬೇಕಿದೆ, ಅವರಿಗೆ ಸಂತೋಷ ಕಾಣುತ್ತಿಲ್ಲ ಅಂದರೆ ರಜೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗೆ ಕೊಟ್ಟಿದ್ದೇನೆ. ಇದನ್ನು ನಿರಾಕರಿಸಲಾಗುವುದಿಲ್ಲ. ಈ ಯೋಜನೆಯಡಿ ನೌಕರರು ಸಂತೋಷವಾಗದಿದ್ದರೆ ಕೆಲಸದಿಂದ ದೂರ ಉಳಿಯಬಹುದು ಎಂಬುದನ್ನು ಸ್ಪಷ್ಟಪಡಿಸಿದ್ದೇನೆ" ಎಂದು ಹೇಳಿದ್ದಾರೆ.

ಸದ್ಯ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಇವರಂತಹ ಉತ್ತಮ ಬಾಸ್ ಎಲ್ಲಿ ಸಿಗ್ತಾರೆ? ನೀವೇ ಪುಣ್ಯವಂತರು ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದು, ಈ ಸುದ್ದಿ ಈಗ ಎಲ್ಲರ ಗಮನಸೆಳೆಯುವಲ್ಲಿ ಪ್ರಮುಖವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net