

ವಾಷಿಂಗ್ಟನ್: ಜಾಗತಿಕವಾಗಿ ಭಾರೀ ಕುತೂಹಲ ಕೆರಳಿಸಿರುವ ಅಮೆರಿಕ ಚುನಾವಣೆ ಅಂತಿಮ ಹಂತಕ್ಕೆ ಬಂದಿದೆ. ಅಧಿಕೃತ ಫಲಿತಾಂಶ ಹೊರಬೀಳದೇ ಇದ್ದರೂ ಸದ್ಯದ ಟ್ರೆಂಡ್ ಪ್ರಕಾರ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಗೆಲುವು ಖಚಿತವಾದಂತಿದೆ. ಆದರೆ, ಈ ಚುನಾವಣೆ ಇಲ್ಲಿಗೆ ಮುಗಿಯುವುದಿಲ್ಲ ಎಂದು ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಾರ ಸಲಹೆಗಾರ ಹೇಳಿಕೆ ನೀರುವುದು ಕುತೂಹಲ ಕೆರಳಿಸಿದೆ.
ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ರನ್ನು ಹಿಂದಿಕ್ಕಿ ಜೋ ಬಿಡೆನ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಬಿಡೆನ್ ಜಯಗಳಿಸಿದ್ದೇ ಆದಲ್ಲಿ ವೈಟ್ಹೌಸ್ ಗದ್ದುಗೆ ಏರಲು ಬೇಕಾಗಿರುವ ಬಹುಮತವನ್ನು ಪಡೆಯಲಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಬಿಡೆನ್ ಮುನ್ನಡೆ ಕಾಯ್ದುಕೊಂಡ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟ್ರಂಪ್ ಪ್ರಚಾರ ಸಾಮಾನ್ಯ ಸಲಹೆಗಾರ ಮ್ಯಾಟ್ ಮಾರ್ಗನ್, ಇಷ್ಟಕ್ಕೆ ಚುನಾವಣೆ ಮುಗಿಯುವುದಿಲ್ಲ ಎನ್ನುವ ಮೂಲಕ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅಕ್ರಮಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸೂಚನೆಯನ್ನು ನೀಡಿದ್ದಾರೆ.
ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ಟ್ರಂಪ್ ಮತಎಣಿಕೆ ನಿಲ್ಲಿಸಿ ಎಂದಿದ್ದರು. ಚುನಾವಣಾ ದಿನದ ಬಳಿಕ ಬಂದ ಯಾವುದೇ ಮತಗಳನ್ನು ಎಣಿಸಲಾಗುವುದಿಲ್ಲ ಎಂದು ಹೇಳುವ ಮೂಲಕ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬುಧವಾರವೂ ಸಹ ಟ್ರಂಪ್ ಅಸಮಾಧಾನ ಹೊರಹಾಕಿದ್ದರು. ಶ್ವೇತಭವನದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದರು. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವೇ ಗೆಲ್ಲುವುದು. ಆದರೆ ಎಲ್ಲಿಯೋ ಮೋಸದ ಸುಳಿವು ಸಿಗುತ್ತಿಲ್ಲ, ಹೀಗಾಗಲು ತಾವು ಬಿಡುವುದಿಲ್ಲ ಎಂದಿದ್ದರು. ಚುನಾವಣೆಯಲ್ಲಿ ಮೋಸ ನಡೆದಿದ್ದು, ಅಮೆರಿಕ ಜನತೆಗೆ ವಂಚನೆ ಎಸಗಲಾಗಿದೆ. ನಾವು ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಎಚ್ಚರಿಸಿದ್ದರು.
ಸದ್ಯದ ಟ್ರೆಂಡ್ ಪ್ರಕಾರ ಬಿಡೆನ್ ಅವರು 253 ಎಲೆಕ್ಟ್ರೋಲ್ ಮತಗಳೊಂದಿಗೆ ಭಾರಿ ಮುನ್ನಡೆ ಪಡೆದರೆ, ಟ್ರಂಪ್ 214 ಮತಗಳೊಂದಿಗೆ ಹಿನ್ನೆಡೆ ಅನುಭವಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 538 ಮತಗಳ ಪೈಕಿ ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯ ಇದೆ. ಜೋ ಬಿಡೆನ್ಗೆ ಇನ್ನು ಆರು ಮತಗಳಷ್ಟೇ ಬಾಕಿ ಇದ್ದು, ಮುಂದಿನ ಅಧ್ಯಕ್ಷ ಗಾದಿಗೆ ಏರುವುದು ಬಹುತೇಕ ಖಚಿತವಾಗಿದೆ. (ಏಜೆನ್ಸೀಸ್)