Video | ಸ್ಟೈಲ್​ಕಿಂಗ್​ ಚಾಯ್​ವಾಲಾ: ವೈರಲ್​ ಆಗಿದೆ ಈತನ ಕೈಚಳಕದ ಝಲಕ್​; ಈ ವಿಡಿಯೋ ನೋಡಿದ್ರೆ ಇಲ್ಲೊಮ್ಮೆ ಟೀ ಕುಡಿಯಬೇಕು ಅನಿಸಬಹುದು!

Fea
Published on

ನಾಗ್ಪುರ: ದೇಶದ ಒಂದಲ್ಲ ಒಂದು ಕಡೆಯಿಂದ ಬಾಣಸಿಗರ ಕೈಚಳಕ ವಿಡಿಯೋಗಳು ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಕೆಲವರು ತಯಾರಿಸುವ ತಿಂಡಿ-ತಿನಿಸುಗಳ ರುಚಿಗಿಂತ ಅವರು ಅದನ್ನು ಮಾಡುವ ಪರಿಗೇ ಜನರು ಮಾರುಹೋಗುತ್ತಾರೆ. ಇಲ್ಲೊಬ್ಬ ಚಾಯ್​ವಾಲಾ​ ಅದೇ ರೀತಿ ತನ್ನ ಕೈಚಳಕದಿಂದಲೇ ಹಲವರ ಗಮನ ಸೆಳೆಯುತ್ತಿದ್ದು, ಅದರ ಝಲಕ್​ನ ವಿಡಿಯೋ ತುಣುಕು ವೈರಲ್ ಆಗಲಾರಂಭಿಸಿದೆ.

ಡಾಲಿ ಎಂಬ ಹೆಸರಿನ ಈತ 'ಡಾಲಿ ಕಿ ಟಪ್ರಿ' ಎಂಬ ಟೀ ಅಂಗಡಿ ನಡೆಸುತ್ತಿದ್ದು, ಈತ ಟೀ ಮಾಡುವ ಸ್ಟೈಲ್​ ಮಾತ್ರವಲ್ಲ, ಗ್ರಾಹಕರ ಕೈಗೆ ಚಿಲ್ಲರೆ ಕೊಡುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾನೆ. ಚಹಾ ಮಾಡಲು ಸಲುವಾಗಿ ಪಾತ್ರೆಗೆ ಹಾಲನ್ನು ಹಾಕುವುದಿರಲಿ, ಬಳಿಕ ಚಹಾವನ್ನು ಹಾಲಿಗೆ ಸುರಿಯುವುದಷ್ಟೇ ಅಲ್ಲ, ಚಿಲ್ಲರೆ ಮರಳಿಸುವುದರಲ್ಲೂ ಕೂಡ್ ಫುಲ್​ ಸ್ಟೈಲ್​.

ಗ್ರಾಹಕರಿಂದ ಹಣ ಪಡೆಯುವ ಮೊದಲೇ ಚಿಲ್ಲರೆ ಎಣಿಸಿಟ್ಟುಕೊಂಡು ಥಟ್ ಅಂತ ಅವರ ಕೈಗಿಟ್ಟು, ಹಣ ಸ್ವೀಕರಿಸುವ ಮೂಲಕವೂ ಈತ ತನ್ನ ಕೈಚಳಕ ಮೆರೆಯುತ್ತಿದ್ದಾನೆ. ಅಂದಹಾಗೆ ಈತನ ಕೈಚಳಕ, ಚಹಾ ಮಾಡುವ, ಕೊಡುವ ಸ್ಟೈಲ್​ ಬಗ್ಗೆ ಕೇಳಿದರೆ, ದಕ್ಷಿಣಭಾರತದ ಸಿನಿಮಾಗಳನ್ನು ನೋಡಿ ನೋಡಿಯೇ ಹೀಗಾಗಿದ್ದೇನೆ ಎನ್ನುತ್ತಾನೆ. ಜತೆಗೆ ತಾನು ಸ್ಟೈಲ್​ಕಿಂಗ್ ರಜನಿಕಾಂತ್​ ಅಭಿಮಾನಿ ಎಂದೂ ಹೇಳುತ್ತಾನೆ.

ನಾಗ್ಪುರದ ಸದರ್​ನ ರವೀಂದ್ರನಾಥ್​ ಠಾಗೋರ್​ ಮಾರ್ಗದಲ್ಲಿ ಈತ 'ಡಾಲಿ ಕಿ ಟಪ್ರಿ' ಎಂಬ ಚಹಾದಂಗಡಿಯನ್ನು 20 ವರ್ಷಗಳಿಂದ ನಡೆಸುತ್ತಿದ್ದಾನೆ. ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ತೆರೆದಿರುವ ಈ ಟೀ ಅಂಗಡಿಯಲ್ಲಿ ಈತನ ಚಹಾ ತಯಾರಿಯ ಕೌಶಲ ಹಾಗೂ ಕೈಚಳಕವೇ ಗ್ರಾಹಕರನ್ನು ಸೆಳೆಯುವ ಪ್ರಮುಖ ಆಕರ್ಷಣೆ. (ಏಜೆನ್ಸೀಸ್)

ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್​ ಕ್ಲಿಕ್ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net