

ನವದೆಹಲಿ: ಕೂಡುವುದು, ಕಳೆಯುವುದು, ಗುಣಿಸುವುದು ಇಲ್ಲವೇ ಭಾಗಿಸುವುದಾಗಿರಲಿ, ಯಾವುದೇ ಲೆಕ್ಕ ಮಾಡಬೇಕೆಂದರೂ ನಮಗೆ ಕೆಲವು ನಿಮಿಷಗಳಷ್ಟು ಸಮಯ ಬೇಕಾಗುತ್ತದೆ. ಆದರೆ, ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿ ಅಂಥವರು ಮನಸ್ಸಿನಲ್ಲೇ ತುಂಬಾ ವೇಗವಾಗಿ ಹಲವು ಲೆಕ್ಕಗಳನ್ನು ಮಾಡಬಲ್ಲವರಾಗಿರುತ್ತಾರೆ. ಇಂಥವರ ಸಾಲಿಗೆ ಸೇರುತ್ತಾನೆ 10ರ ಈ ಪೋರ.
ಮೂಲತಃ ಪಾಕಿಸ್ತಾನವನಾಗಿದ್ದು, ಇಂಗ್ಲೆಂಡ್ನಲ್ಲಿ ವಾಸವಾಗಿರುವ ನದೌಬ್ ಗಿಲ್ ಎಂಬ 10 ವರ್ಷದ ಬಾಲಕ ಒಂದು ನಿಮಿಷದಲ್ಲಿ 196 ಲೆಕ್ಕಗಳನ್ನು ಮಾಡಿ, ಗಿನ್ನೆಸ್ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾನೆ.
ಆನ್ಲೈನ್ ಗಣಿತ ಕಲಿಕೆಯ ಟೈಮ್ಸ್ ಟೇಬಲ್ಸ್ ರಾಕ್ ಸ್ಟಾರ್ಸ್ ಎಂಬ ಆ್ಯಪ್ನಲ್ಲಿ ಈತ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವ 196 ಲೆಕ್ಕಗಳನ್ನು ಮಾಡಿ ವಿಶ್ವದಾಖಲೆಯ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾನೆ. ಈತನ ಈ ದಾಖಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ತನ್ನ ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನದೌಬ್ ಗಿಲ್, ಇದೊಂದು ರೋಮಾಂಚಕಾರಿ ಅನುಭವ ನೀಡಿತು. ಗಿನ್ನೆಸ್ ದಾಖಲೆ ಮಾಡಿದ್ದು ಸಂತಸ ಕೊಟ್ಟಿತು. ಒಂದು ರೀತಿಯಲ್ಲಿ ನನಗೆ ಎಲ್ಲವೂ ಕನಸಿನಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ.