ಈ ಬಿಸ್ಕತ್​ ತಿನ್ನುವಾಗ ಇರಬೇಕಂತೆ ಎಚ್ಚರ! ಗ್ರಾಹಕರಿಗೆ ಬೇಕರಿ ಮಾಲೀಕರು ಮಾಡಿದ ಮನವಿ ಇದು

WhatsApp Image 2024-04-18 at 11.30.18 AM
Published on

ನ್ಯೂಯಾರ್ಕ್​: ಬೇಕರಿ ತಿಂಡಿ-ತಿನಿಸುಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬಹುತೇಕರು ಆಸೆಪಟ್ಟು ತಿನ್ನುವ ಕುರುಕಲು ಪದಾರ್ಥಗಳು ಸಿಗುವುದೇ ಬೇಕರಿಯಲ್ಲಿ. ಹೀಗಿರುವಾಗ ಸಂಜೆಯ ಚಹಾ ಅಥವಾ ಕಾಫಿ ಸಮಯಕ್ಕೆ ಸರಿಯಾಗಿ ಒಂದು ಬಿಸಿ ಬಿಸಿ ಪಪ್ಸ್, ಚಿಪ್ಸ್, ಬೇಕರಿಯ ಸ್ಪೆಷಲ್ ಬಿಸ್ಕತ್​ಗಳನ್ನು ಸೇವಿಸುವ ಅಭ್ಯಾಸ ಅನೇಕರಿಗೆ ಇರುತ್ತದೆ. ಹೀಗಿರುವಾಗ ಇಲ್ಲೊಂದು ಬೇಕರಿಯ ಮಾಲೀಕರು ತಾವು ತಯಾರಿಸುವ ವಿಶೇಷ ಕುಕೀಗಳನ್ನು ತಿನ್ನುವ ಮುನ್ನ ಇರಲಿ ಎಚ್ಚರ ಎಂಬ ಸಂದೇಶವನ್ನು ಗ್ರಾಹಕರಿಗೆ ರವಾನಿಸಿದೆ. ಅಸಲಿಗೆ ಇದರ ಹಿಂದಿರುವ ಕಾರಣವೇನು? ಎಂಬುದು ಹೀಗಿದೆ.

ಅಮೆರಿಕಾದಲ್ಲಿನ ಬೇಕರಿಯು ತನ್ನ ಗ್ರಾಹಕರಿಗೆ ತಮ್ಮ ಕುಕೀಗಳನ್ನು ಎಚ್ಚರಿಕೆಯಿಂದ ತಿನ್ನಲು ಮನವಿ ಮಾಡಿದೆ. ಏಕೆಂದರೆ ತಮ್ಮ ಉತ್ಪನ್ನದ ರುಚಿಯನ್ನು ಉತ್ತಮವಾಗಿ ಆನಂದಿಸಬಹುದು ಆದರೆ, ಅದರೊಳಗೊಂದು ಅಮೂಲ್ಯ ವಸ್ತು ಸಿಲುಕಿದೆ. ಹಾಗಾಗಿ ಎಚ್ಚರಿಕೆಯಿಂದ ಸೇವಿಸಿ ಎಂದು ಹೇಳಿದರು. ಅಷ್ಟಕ್ಕೂ ಅಂತಹ ಮೌಲ್ಯವಾದ, ಬೆಲೆಬಾಳುವ ವಸ್ತು ಬಿಸ್ಕತ್ ಒಳಗೆ ಹೇಗೆ ಬಂತು ಎಂಬ ಪ್ರಶ್ನೆಗೆ ಮಾಲೀಕರು ಕೊಟ್ಟ ಉತ್ತರವಿದು.

ಮಹಿಳೆ ಬೇಕರಿಯಲ್ಲಿ ಅಂದು ಕುಕೀಗಳನ್ನು ತಯಾರಿಸುವಾಗ ಬೆರಳಿನಲ್ಲಿದ್ದ ಬೆಲೆಬಾಳುವ ಉಂಗುರದ ವಜ್ರದ ತುಂಡು ಬಿಸ್ಕತ್​ನ ತಯಾರಿಕೆಯ ವೇಳೆ ಹಿಟ್ಟಿನೊಳಗೆ ಆಕಸ್ಮಿಕವಾಗಿ ಜಾರಿ ಬಿದ್ದಿದೆ. ಇದರಿಂದ ಮಾಡಿರುವ ಬಿಸ್ಕತ್​ ಅನ್ನು ನೀವು ಸೇವಿಸುವಾಗ ಎಚ್ಚರಿಕೆಯಿಂದ ಸೇವಿಸಿ, ಅಕಸ್ಮಾತ್ ಡೈಮಂಡ್​ ಸಿಕ್ಕರೆ, ದಯಮಾಡಿ ನನಗೆ ಹಿಂತಿರುಗಿಸಿ ಎಂದು ತಮ್ಮ ಗ್ರಾಹಕರಲ್ಲಿ ಫೋಟೋ ಸಮೇತ ಮನವಿ ಮಾಡಿದ್ದಾರೆ. ಸದ್ಯ ಈ ವಿಷಯ ಅನೇಕರಲ್ಲಿ ಭಾರೀ ಗೊಂದಲ ಹುಟ್ಟುಹಾಕಿದೆ.

ಲೀವೆನ್‌ವರ್ತ್‌ನಲ್ಲಿರುವ ಸಿಸ್ ಸ್ವೀಟ್ಸ್ ಕುಕೀಸ್ ಮತ್ತು ಕೆಫೆಯ ಮಾಲೀಕರಾದ 'ಡಾನ್ ಸಿಸ್ ಮನ್ರೋ' ಎಂಬ ಮಹಿಳೆ, 36 ವರ್ಷಗಳಿಂದ ಧರಿಸಿದ್ದ ಉಂಗುರದಿಂದ ವಜ್ರವನ್ನು ಕಳೆದುಕೊಂಡಿರುವ ಬಗ್ಗೆ ಅಲ್ಲಿನ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಉಂಗುರದ ಫೋಟೋವನ್ನು ಹಂಚಿಕೊಂಡ ಅವರು, ಘಟನೆಯ ಬಗ್ಗೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಗ್ರಾಹಕರಿಗೆ ಎಚ್ಚರಿಸಿದ್ದಾರೆ.

ಬಿಸ್ಕತ್​ ತಯಾರಿಸುವಾಗ ಉಂಗುರದಲ್ಲಿನ ಡೈಮಂಡ್ ಕೆಳಗೆ ಬಿದ್ದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಬಳಿಕ ಕೈಬೆರಳು ನೋಡಿದಾಗ ತಿಳಿದದ್ದು, ಅದರಲ್ಲಿದ್ದ ಡೈಮೆಂಡ್​ ಹಿಟ್ಟಿನೊಳಗೆ ಬಿದ್ದಿರಬಹುದು ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅಸಲಿಗೆ ಡೈಮೆಂಡ್​ನ ನಿಖರ ಬೆಲೆ 4,000 ಡಾಲರ್ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net