

ನವದೆಹಲಿ: ಉದ್ಯೋಗ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ತಾಳಿದ್ದು, 300ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದ್ದು, ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಇಡೀ ದೇಶ ಮಿಲಿಟರಿ ಆಡಳಿತದಲ್ಲಿದ್ದು, ಮಧ್ಯಂತರ ಅಥವಾ ಪ್ರಜಾಸತ್ತಾತ್ಮಕವಲ್ಲದ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಸದ್ಯ ರಚನೆಯಾಗುವ ಸರ್ಕಾರ ಆರ್ಮಿ ಚೀಫ್ ಜನರಲ್ ವಾಕರ್-ಉಜ್-ಜಮಾನ್ ನಿರ್ದೇಶನದಂತೆ ನಡೆಯಲಿದೆ.
15 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ ಬಲಿಷ್ಠ ನಾಯಕರಲ್ಲಿ ಒಬ್ಬರೆನ್ನಿಸಿಕೊಂಡಿದ್ದ ಶೇಖ್ ಹಸೀನಾ ಅವರ ಬಗ್ಗೆ ಈ ಹಿಂದೆ ಖ್ಯಾತ ಜ್ಯೋತಿಷಿ ಒಬ್ಬರು ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಇವರು ಹೇಳಿರುವಂತೆ ನಡೆದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು 2023ರಲ್ಲಿ ಶೇಖ್ ಹಸೀನಾ ಅವರಿಗೆ ಮುಂದಿನ ವರ್ಷ ಮೇ ತಿಂಗಳಿನಿಂದ ಆಗಸ್ಟ್ವರೆಗೆ ಎಚ್ಚರಿಕೆಯಿಂದಿರಬೇಕು. ಈ ಅವಧಿಯಲ್ಲಿ ನಿಮ್ಮ ಹತ್ಯೆಯಾಗಬಹುದು ಎಂದು ಎಚ್ಚರಿಸಿದ್ದರು. ಇದೀಗ ಇವರು ಆಡಿರುವ ಮಾತುಗಳು ನಿಜವಾಗಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಶಾಂತ್ ಕಿಣಿ, 2024ರಲ್ಲಿ ಶೇಖ್ ಹಸೀನಾ ಅವರು ತೊಂದರೆಗೀಡಾಗುತ್ತಾರೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅದರಂತೆ ಅವರು ಈಗ ದೇಶದಿಂದ ಪಲಾಯನ ಮಾಡಿದರೆ ಎಂದು ಬರೆದುಕೊಂಡಿದ್ದಾರೆ. ಇವರ ಪೋಸ್ಟ್ಗೆ ಅನೇಕರು ಕಮೆಂಟ್ ಮಾಡಿದ್ದು, ಬಾಂಗ್ಲಾದೇಶದ ಮುಂದಿನ ಪರಿಸ್ಥಿತಿಯ ಬಗ್ಗೆ ಹೇಳುವಂತೆ ಕೇಳಿದ್ದಾರೆ. ಇದಲ್ಲದೆ ಭಾರತ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹಿಂದೂ ರಾಷ್ಟ್ರ ಆಗುತ್ತದ ಎಂಬುದರ ಬಗ್ಗೆ ಭವಿಷ್ಯ ನುಡಿಯುವಂತೆ ಆಗ್ರಹಿಸಿದ್ದಾರೆ.
ಬಾಂಗ್ಲಾದೇಶಕ್ಕೆ ಬರುವ ಸರ್ಕಾರವು ಭಾರತದೊಂದಿಗೆ ಸ್ನೇಹಪರವಾಗಿರಬಹುದು, ಆದರೆ ಬಾಂಗ್ಲಾದೇಶದ ಜನರು ಭಾರತವನ್ನು ದ್ವೇಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ಒಂದು ರಾಷ್ಟ್ರವಾಗಿ ಬದುಕಲು ಬಾಂಗ್ಲಾದೇಶಕ್ಕೆ ಭಾರತದ ಅಗತ್ಯವಿದೆ. ಇದರಿಂದಾಗಿ ಯಾರೇ ಅಧಿಕಾರದಲ್ಲಿದ್ದರೂ ಭಾರತದೊಂದಿಗೆ ಸ್ನೇಹದಿಂದ ಇರುತ್ತಾರೆ. ಬಾಂಗ್ಲಾದೇಶದ ಜನರ ಬಗ್ಗೆ ಭಾರತ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದ್ಧಾರೆ.
ಉದ್ಯೋಗ ಮೀಸಲಾತಿಯನ್ನು ವಿರೋಧಿಸಿ ಕರೆ ನೀಡಿದ್ದ ಪ್ರತಿಭಟನೆ ಬಳಿಕ ಹಿಂಸಾರೂಪಕ್ಕೆ ತಿರುಗಿತ್ತು. ಘಟನೆಯಲ್ಲಿ ಅನೇಕ ಸಾವು ನೋವುಗಳು ಸಂಭವಿಸಿತ್ತು. ದೇಶದಲ್ಲಿ ಮಿಲಿಟರಿ ಆಡಳಿತ ಹೇರಲಾಗಿದ್ದು, ಅನಿರ್ದಾಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ದೇಶ ಸಹಜ ಸ್ಥಿತಿಗೆ ಮರಳುತ್ತಿದ್ದು, ಎಂದಿನಂತೆ ಸಾರ್ವಜನಿಕ ಸಾರಿಗೆ ಹಾಗೂ ಸರ್ಕಾರಿ ಕಚೇರಿಗಳು ಕೆಲಸ ಮಾಡುತ್ತಿವೆ. ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರಾತ ಕ್ರಮ ವಹಿಸಿದ್ದಾರೆ.