'ನನಗೆ ಈ ನಟ ಅಂದ್ರೆ ತುಂಬ ಇಷ್ಟ'! '12th ಫೇಲ್‌' ನಟಿ ಮೇಧಾ ಶಂಕರ್​ ಹೆಸರಿಸಿದ ಸ್ಟಾರ್​ ಇವರೇ ನೋಡಿ

ವಿಜಯವಾಣಿ - 2024-01-15T115443.511
Published on

ಮುಂಬೈ: ಕಳೆದ ವರ್ಷ ಅಕ್ಟೋಬರ್​ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆದ ವಿದು ವಿನೋದ್​ ಚೋಪ್ರಾ ನಿರ್ದೇಶನದ '12 ಫೇಲ್'​ ಚಿತ್ರವು ಸದ್ದಿಲ್ಲದೇ ಸಿನಿಪ್ರೇಕ್ಷಕರ ಮನಗೆದ್ದು, ತದನಂತರದಲ್ಲಿ ಸಿನಿಪ್ರೇಕ್ಷಕರಿಂದಲೇ ಸ್ವಪ್ರಚಾರ ಪಡೆಯುತ್ತ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿತು. ಇದರೊಟ್ಟಿಗೆ ವಿಮರ್ಶಕರಿಂದ ಕೂಡ ಭಾರೀ ಪ್ರಶಂಸೆ ಪಡೆದುಕೊಂಡ ಚಿತ್ರವು, ಊರು ಬಿಟ್ಟು ಐಎಎಸ್​, ಐಪಿಎಸ್​ ಕನಸೊತ್ತು ಬರುವ ಅದೆಷ್ಟೋ ಅಭ್ಯರ್ಥಿಗಳ ಜೀವನಕ್ಕೆ ಸ್ಪೂರ್ತಿ ನೀಡುವ ಚಿತ್ರವಾಗಿ ಹೊರಹೊಮ್ಮಿದೆ.

ಐಪಿಎಸ್​ ಅಧಿಕಾರಿಯಾದ ಮನೋಜ್​ ಶರ್ಮಾ ಅವರ ಜೀವನಗಾಥೆ ಆಧರಿತ '12 ಫೇಲ್'​ ಚಿತ್ರಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆಗಳು ಹರಿದುಬಂದಿದ್ದು, ಜಗತ್ತಿನ ಅತೀ ಕಷ್ಟಕರವಾದ ಪರೀಕ್ಷೆ ಎಂದೇ ಕರೆಯಲ್ಪಟ್ಟ ಯುಪಿಎಸ್​ಸಿ ಎಕ್ಸಮ್​ ಕುರಿತಾದ ವಿಷಯಗಳನ್ನು ಪರೆದೆಯ ಮೇಲೆ ಕಟ್ಟಿಕೊಟ್ಟ ರೀತಿ ಸಿನಿಮಾದ ಯಶಸ್ಸಿಗೆ ಬಲವಾದ ಕಾರಣವಾಯಿತು.

ಐಪಿಎಸ್​ ಮನೋಜ್ ಶರ್ಮಾ ಮತ್ತು ಅವರ ಪತ್ನಿ ಶ್ರದ್ಧಾ ಜೋಶಿ ಪಾತ್ರದಲ್ಲಿ ನಟಿಸಿದ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್​ ಜೋಡಿ ಪ್ರೇಕ್ಷಕರ ಮನಸೂರೆಗೊಳಿಸಿದ್ದು, ಪ್ರೀತಿ ಮಾಡಿದರೆ ಹೀಗಿರಬೇಕು, ಇವರ ರೀತಿ ಬದುಕಿ ಬಾಳಬೇಕು ಎಂಬ ಅಭಿಪ್ರಾಯವನ್ನು ಮೂಡಿಸಿದ್ದಂತು ನಿಜ.

ಸದ್ಯ ಈ ಸಿನಿಮಾ ಹಿಟ್​ ಆದ ಬೆನ್ನಲ್ಲೇ ನಟಿ ಮೇಧಾಗೆ ಸಾಕಷ್ಟು ಆಫರ್​ಗಳು ಒಲಿದು ಬರುತ್ತಿದ್ದು, ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಟ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಮೇಧಾ, "ನನಗೆ ಶಾರುಖ್ ಖಾನ್​ ಅವರು ಬಹಳ ಇಷ್ಟವಾಗುತ್ತಾರೆ" ಎಂದರು.

"ನನಗೆ ಎಸ್​ಆರ್​ಕೆ ತುಂಬ ಇಷ್ಟವಾಗ್ತಾರೆ. ನಾನು ಅವರ ದೊಡ್ಡ ಅಭಿಮಾನಿ. ನನ್ನ ಬಳಿ ಅವರು ನಟಿಸಿದ ಹಲವಾರು ಸಿನಿಮಾಗಳ ಲಿಸ್ಟ್​ ಇವೆ. ಅದರಲ್ಲಿ ನೆಚ್ಚಿನ ಚಿತ್ರಗಳು ಎಂದರೆ 'ಕುಚ್ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಮ್', 'ಕಲ್ ಹೋ ನಾ ಹೋ' ಸೇರಿದಂತೆ ಮುಂತಾದ ಸಿನಿಮಾಗಳು ನನ್ನ ಫೇವರೇಟ್"​ ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net