

ತಿರುವನಂತಪುರಂ: ಲೋಕ ಕೇರಳ ಸಭಾ(ಎಲ್ಕೆಎಸ್) ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೌಜನ್ಯಪೂರ್ವಕವಾಗಿ ವಯನಾಡಿನ ಸಂಸದ ರಾಹುಲ್ ಗಾಂಧಿ ಬರೆದಿದ್ದ ಪತ್ರವನ್ನು ಟ್ವೀಟ್ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಕಾಂಗ್ರೆಸ್ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಕೇರಳ ಸಿಎಂ ಅವರ ಟ್ವೀಟ್ನಲ್ಲಿ ಏನಿದೆ?: ಲೋಕ ಕೇರಳ ಸಭಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪತ್ರಕ್ಕೆ ಧನ್ಯವಾದ ಸೂಚಿಸಿರುವ ಪಿಣರಾಯಿ ವಿಜಯನ್, ರಾಹುಲ್ ಅವರ ನಡೆಯನ್ನು ಪ್ರಶಂಸಿಸಿದ್ದಾರೆ. ಆ ಪತ್ರದಲ್ಲಿ ಇಂತಹ ಕಾರ್ಯಕ್ರಮ ಹೊರದೇಶದಲ್ಲಿರುವ ದೇಶವಾಸಿಗಳನ್ನು ಸಂಪರ್ಕಿಸುವುದಕ್ಕೆ ಉತ್ತಮ ವೇದಿಕೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಆ ಪತ್ರವನ್ನೂ ಸೇರಿಸಿ ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ನಾಯಕರ ಟೀಕೆ ಯಾಕೆ?: ವಾಸ್ತವದಲ್ಲಿ ಅನಿವಾಸಿ ಕೇರಳೀಯರನ್ನು ಒಂದೆಡೆ ಸೇರಿಸುವ ಎಲ್ಕೆಎಸ್ ಕಾರ್ಯಕ್ರಮವನ್ನು ಕೇರಳದ ಕಾಂಗ್ರೆಸ್ ನೇತೃತ್ವದ ವಿಪಕ್ಷ ಬಹಿಷ್ಕರಿಸಿತ್ತು. ಸಿಬ್ಬಂದಿಗೆ ವೇತನ ಕೊಡುವುದಕ್ಕೇ ಸರ್ಕಾರ ಕಷ್ಟಪಡುತ್ತಿರುವಾಗ ಇಂತಹ ದುಂದುವೆಚ್ಚದ ಕಾರ್ಯಕ್ರಮ ಬೇಡ ಎಂಬ ಕಾರಣವನ್ನೂ ಅದಕ್ಕೆ ಕೊಟ್ಟಿತ್ತು. ಆದರೆ, ರಾಹುಲ್ ಗಾಂಧಿ ಅವರ ಪತ್ರವನ್ನು ಒಳಗೊಂಡ ಈ ಟ್ವೀಟ್ ಕೇರಳ ಕಾಂಗ್ರೆಸ್ ನಾಯಕರಿಗೆ ಭಾರಿ ಇರಿಸುಮುರಿಸು ಉಂಟುಮಾಡಿತ್ತು.
ಹೀಗಾಗಿ ಎಐಸಿಸಿ ಜನರಲ್ ಸೆಕ್ರೆಟರಿ ಕೆ.ಸಿ.ವೇಣುಗೋಪಾಲ್, ಕೇರಳ ವಿಧಾನಸಭೆಯ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿದ್ದು, ವಿಜಯನ್ ಪೊಲಿಟಿಕಲ್ ಮೈಲೇಜ್ಗೋಸ್ಕರ ಹೀಗೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ವಯನಾಡಿನ ಸಂಸದರಾಗಿರುವ ಕಾರಣ ಅವರು ಸೌಜನ್ಯಕ್ಕೋಸ್ಕರ ಕಳುಹಿಸಿದ ಪತ್ರ ಅದು. ಅದನ್ನು ಮುಖ್ಯಮಂತ್ರಿ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.