ಶನಿವಾರಸಂತೆ ವ್ಯಾಪ್ತಿಯಲ್ಲಿ ತಿರು ಓಣಂ ಆಚರಣೆ

5ss2
ಶನಿವಾರಸಂತೆ ಸಮಿಪದ ಚಿಕ್ಕಕೊಳತ್ತೂರು ಗ್ರಾಮದ ಮಲೆಯಾಳಿ ನಿವಾಸಿ ಸುಕುಮಾರ್ ಕುಟುಂಬದವರು ಓಣಂ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.
Published on

ಶನಿವಾರಸಂತೆ: ಕೇರಳದ ಮಲಯಾಳಿ ಬಾಂಧವರ ದೇಸಿ ಮತ್ತು ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ತಿರು ಓಣಂ ಹಬ್ಬವನ್ನು ಶುಕ್ರವಾರ ಶನಿವಾರಸಂತೆ ವ್ಯಾಪ್ತಿಯಲ್ಲಿರುವ ಮಲೆಯಾಳಿ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

ಶನಿವಾರಸಂತೆ ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಗೋಪಾಲಪುರ, ಒಡೆಯನಪುರ, ಮುಳ್ಳೂರು, ಜಾಗೇನಹಳ್ಳಿ, ನಿಡ್ತ, ಮಾಲಂಬಿ, ಕಣಿವೆ ಬಸವನಹಳ್ಳಿ, ಆಲೂರುಸಿದ್ದಾಪುರ, ಹೊಸಗುತ್ತಿ ಮುಂತಾದ ಗ್ರಾಮಗಳಲ್ಲಿ ಹಲವಾರು ದಶಕಗಳಿಂದ ಕೇರಳ ಮೂಲದ ಮಲೆಯಾಳಿಗರು ನೆಲೆಸಿದ್ದಾರೆ.

ಪುರಾಣದಲ್ಲಿ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ವಾಮನ ಅವತಾರ ಒಂದಾಗಿದ್ದು ಬಲಿ ಚಕ್ರವರ್ತಿಯ ತ್ಯಾಗದ ನೆನಪಿಗಾಗಿ ಕೇರಳದ ಹಿಂದು ಮಲೆಯಾಳಿಗರು ಬಲಿ ಚಕ್ರವರ್ತಿಯ ಸಂಕೇತವಾಗಿ ಒಣಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಹತ್ತು ದಿನಗಳವರೆಗೆ ಆಚರಿಸುತ್ತಾರೆ. ಓಣಂ ಕೊನೆಯ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಓಣಂ ಹಬ್ಬದ ಅಂಗವಾಗಿ ಮಲೆಯಾಳಿ ಬಾಂಧವರು ತಮ್ಮ ಮನೆಯ ಅಂಗಳದಲ್ಲಿ ಬಣ್ಣಬಣ್ಣದ ಹೂವಿನ ಎಸಳಿನಿಂದ ರಂಗೋಲಿ ಪೂಕಳಂ ಹಾಕುತ್ತಾರೆ. ರಂಗೋಲಿ ಮಧ್ಯದಲ್ಲಿ ಹಣತೆಯನ್ನಿಡುತ್ತಾರೆ. ಓಣಂ ಹಬ್ಬದ ದಿನ ಮಲೆಯಾಳಿಗರು ಮನೆಗಳಲ್ಲಿ ವಿಶೇಷ ಪೂಜೆ ನೆರವೇರಿಸುತ್ತಾರೆ. ತದನಂತರ ಮನೆಯಲ್ಲಿ ಬಗೆಬಗೆಯ ಸಿಹಿ ಅಡುಗೆ ಮಾಡಿ ಮನೆ ಸದಸ್ಯರಲ್ಲದೆ ಅಕ್ಕಪಕ್ಕದವರನ್ನು ಕರೆದು ಸಿಹಿ ಭೋಜನ ಸವಿಯುತ್ತಾರೆ. ಅದರಂತೆ ಶುಕ್ರವಾರ ಶನಿವಾರಸಂತೆ ವ್ಯಾಪ್ತಿಯಲ್ಲಿ ಮಲೆಯಾಳಿಗರು ಓಣಂ ಹಬ್ಬವನ್ನು ತಮ್ಮ ಮನೆಗಳಲ್ಲಿ ಸದಸ್ಯರು ಸೇರಿದಂತೆ ಅಕ್ಕಪಕ್ಕದವರನ್ನು ಕರೆದು ಸಡಗರ ಸಂಭ್ರಮದಿಂದ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net