

ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ವೊಂದರಿಂದ ಬೆಂಗಳೂರಿನ 2-3 ಪ್ರದೇಶಗಳು ಹೊತ್ತಿ ಉರಿಯುವಂತಾಯಿತು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ವ್ಯಾಪಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಯಿತಲ್ಲದೆ, ಆತಂಕದ ಸ್ಥಿತಿಯನ್ನೂ ಸೃಷ್ಟಿಸಿತು. ಪೊಲೀಸರ ಬಿಗಿ ಪಹರೆಯಿಂದಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ. ಸಾಮಾಜಿಕ ಜಾಲತಾಣಗಳನ್ನು ವಿವೇಚನೆ, ವಿವೇಕ ಇಲ್ಲದೆ ಬೇಕಾಬಿಟ್ಟಿಯಾಗಿ ಬಳಸಿಕೊಂಡರೆ, ಪೋಸ್ಟ್ಗಳಿಗೆ ಅತಿರೇಕವಾಗಿ ಪ್ರತಿಕ್ರಿಯಿಸಿದರೆ ಸಮಾಜದ ಸ್ವಾಸ್ಥ್ಯಕ್ಕೆ ಎಷ್ಟು ಮಾರಕವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಬೆಂಗಳೂರು ಗಲಭೆಯೇ ಜ್ವಲಂತ ನಿದರ್ಶನವಾಗಿದೆ. ಗಲಭೆ ನಡೆದು ಕೆಲ ದಿನಗಳು ಕಳೆದರೂ, ಜಾಲತಾಣಗಳಲ್ಲಿ ಮಾತ್ರ ಇನ್ನೂ ಪ್ರಚೋದನಾಕಾರಿ ಪೋಸ್ಟ್ಗಳು ಹರಿದಾಡುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ಖಾಕಿ ಪಡೆಯ ಕಣ್ಗಾವಲು ಇರಿಸಲು ನಿರ್ಧರಿಸಿದೆ. ಅಂದರೆ, ಸಮಾಜದ ಸ್ವಾಸ್ಥ್ಯ ಕೆಡಿಸುವಂಥ ಅಥವಾ ಪ್ರಚೋದಿಸುವಂಥ ಬರಹ, ಚಿತ್ರ ಸೇರಿ ಯಾವುದೇ ಪೋಸ್ಟ್ ಹಾಕಿದರೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಇದನ್ನೂ ಓದಿ: ಸಂಪಾದಕೀಯ: ಆದರ್ಶದ ಅನುಸರಣೆ
ಇಂಥದ್ದೊಂದು ನಿಗಾ ವ್ಯವಸ್ಥೆ ರೂಪುಗೊಳ್ಳಬೇಕು ಎಂಬ ಆಗ್ರಹ, ಚರ್ಚೆ ರಾಷ್ಟ್ರಮಟ್ಟದಲ್ಲೂ ನಡೆದಿದೆ. ಏಕೆಂದರೆ, ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಎಲ್ಲೆಡೆ ಅಧ್ವಾನಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಹಾಕುವ ಸಂದೇಶಗಳ ಪರಾಮರ್ಶೆ ನಡೆಯುವುದಿಲ್ಲವಾದ್ದರಿಂದ ಕೆಲ ಶಕ್ತಿಗಳಿಗೆ ಅದೇ ಅನುಕೂಲವಾಗಿ ಪರಿಣಮಿಸಿದೆ. ವಾಸ್ತವದಲ್ಲಿ, ಸಾಮಾಜಿಕ ಮಾಧ್ಯಮಗಳು ಅಭಿವ್ಯಕ್ತಿಗೆ ಸಮರ್ಥ ವೇದಿಕೆಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅದನ್ನು ರಚನಾತ್ಮಕವಾಗಿ ಬಳಸಿಕೊಂಡು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ, ಶಕ್ತಿಗಳಿಗೂ ಕೊರತೆಯೇನಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ದುರ್ಬಳಕೆ ಪ್ರಮಾಣವೇ ಹೆಚ್ಚುತ್ತಿರುವುದು ಕಳವಳದ ವಿಷಯ. ಇದರ ನಿಯಂತ್ರಣ, ನಿಗಾ ವ್ಯವಸ್ಥೆ ರೂಪಿಸುವಿಕೆ ಬಗ್ಗೆ ರಾಷ್ಟ್ರಮಟ್ಟದಲ್ಲೇ ಸ್ಪಷ್ಟ ನೀತಿ ರೂಪುಗೊಂಡರೆ ಉತ್ತಮ.
ಬೆಂಗಳೂರು ಗಲಭೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ವಿಷ ಬಿತ್ತುವ ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವುದು ಅವಶ್ಯಕ ಮತ್ತು ಅನಿವಾರ್ಯ ಕ್ರಮವಾಗಿದೆ. ಈ ನಿಟ್ಟಿನಲ್ಲಿ ಸೈಬರ್ ಸುರಕ್ಷೆ ನೀತಿಯನ್ನು ಬಲ ಪಡಿಸಲು ಮುಂದಾಗಿರುವ ಸರ್ಕಾರ ಸಾಮಾಜಿಕ ಜಾಲತಾಣ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಚರ್ಚಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸಂಪಾದಕೀಯ: ಸ್ವಾವಲಂಬನೆಗಾಗಿ ದಿಟ್ಟ ಹೆಜ್ಜೆ
ಸರ್ಕಾರದ ಪ್ರಯತ್ನಗಳೇನೋ ಸರಿಯೇ. ಇಲ್ಲಿ ಜನರ ಪಾತ್ರವೂ ಅಷ್ಟೇ ಮುಖ್ಯ. ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳುವ ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ವಿವೇಚನೆಯಿಂದ ಬಳಸಿ, ಉತ್ತಮ ಚಿಂತನೆಗಳನ್ನು ಹರಡಬೇಕೆ ಹೊರತು ದ್ವೇಷ, ಅಸೂಯೆ, ನಿಂದೆ, ತಂಟೆಗಳನ್ನಲ್ಲ. ಸೂಕ್ತ ಬಳಕೆಯಿಂದ ಸಾಮಾಜಿಕ ಜಾಲತಾಣಗಳು ವರವಾಗಿ ಪರಿಣಮಿಸಬಲ್ಲವು. ಆದರೆ, ವಿವೇಕ ಕಳೆದುಕೊಂಡು ಮನಸ್ಸಿನ ವಿಕಾರವನ್ನು ತೋರ್ಪಡಿಸಿದರೆ ಇಡೀ ಸಮಾಜಕ್ಕೆ ದೊಡ್ಡ ಶಾಪವಾಗಿ ಕಾಡಬಲ್ಲವು ಎಂಬುದನ್ನು ಮರೆಯುವಂತಿಲ್ಲ.