

ಕೋಟಿ ಕೋಟಿ ಜನರ ಶತಮಾನಗಳ ಹೆಬ್ಬಯಕೆಯಾದ ರಾಮಮಂದಿರಕ್ಕೆ ಬುಧವಾರ ಶಿಲಾನ್ಯಾಸ ನೆರವೇರುವುದರೊಂದಿಗೆ ಭಾರತದ ಇತಿಹಾಸದಲ್ಲಿ ಮತ್ತೊಂದು ವಿಶಿಷ್ಟ ಅಧ್ಯಾಯ ಸೇರ್ಪಡೆಯಾದಂತಾಗಿದೆ. ಈ ಮೂಲಕ ಸುದೀರ್ಘ ಹೋರಾಟವೊಂದು ರ್ತಾಕ ಅಂತ್ಯಕ್ಕೆ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂದಿರದ ಭೂಮಿಪೂಜೆ ನೆರವೇರಿಸಿ, ರಾಮನ ಆದರ್ಶಗಳನ್ನು ಅನುಸರಿಸಬೇಕಾದ ಅಗತ್ಯದ ಬಗ್ಗೆ ಒತ್ತುನೀಡಿ ಮಾತನಾಡಿದ್ದು ಯಥೋಚಿತವಾಗಿಯೇ ಇದೆ. ಮಂದಿರ ನಿರ್ವಣದ ಜವಾಬ್ದಾರಿ ಹೊತ್ತಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂರರಿಂದ ಮೂರೂವರೆ ವರ್ಷದ ಅವಧಿಯಲ್ಲಿ ದೇಗುಲ ಕಟ್ಟಿ ಮುಗಿಸುವ ಉದ್ದೇಶ ಹೊಂದಿದೆ. ಟ್ರಸ್ಟ್ ಬಿಡುಗಡೆ ಮಾಡಿರುವ ನೀಲಿನಕ್ಷೆ ಪ್ರಕಾರ, ಮಂದಿರವು ಭವ್ಯವಾಗಿ ತಲೆಯೆತ್ತಲಿದೆ. ಅಯೋಧ್ಯೆಯು ಮುಂದಿನ ದಿನಗಳಲ್ಲಿ ಪ್ರಸಿದ್ಧ ತಾಣವಾಗಿ ರೂಪುಗೊಳ್ಳಲಿದೆ. ಹೀಗಾಗಿ ಮಂದಿರವೂ ಭವ್ಯವಾಗಿರಬೇಕಾಗುತ್ತದೆ. ಮಂದಿರಕ್ಕಾಗಿ ಜನರಿಂದಲೂ ದೇಣಿಗೆ ಅಪೇಕ್ಷಿಸಿದ್ದು, ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹವಾಗುವುದರಲ್ಲಿ ಸಂಶಯವಿಲ್ಲ.
‘ರಾಮ ಈ ವಿಶಾಲ ದೇಶವನ್ನು ಏಕಸೂತ್ರದಲ್ಲಿ ಬೆಸೆಯುವ ಭಾವಸೇತುವಾಗಿದ್ದಾನೆ. ಈ ಭವ್ಯ ದೇಗುಲವು ಆಧುನಿಕ ಭಾರತದ ಸಾಂಸ್ಕೃತಿಕ ಹೆಗ್ಗುರುತಾಗಲಿದೆ. ಮತ್ತು ಸಾಮೂಹಿಕ ಸಂಕಲ್ಪವು ಸಾಕಾರವಾದುದಕ್ಕೆ ಇದು ಸಂಕೇತವೂ ಹೌದು. ಇದು ಮುಂದಿನ ಪೀಳಿಗೆಗಳನ್ನೂ ಪ್ರಭಾವಿಸಲಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ರಾಮ ಎಲ್ಲರಲ್ಲಿಯೂ ಇದ್ದಾನೆ. ರಾಮ ಎಲ್ಲರಿಗೂ ಸೇರಿದವ’ ಎಂದು ಹೇಳುವ ಮೂಲಕ ಅವರು ರಾಮನ ಮಹತ್ವವನ್ನು ಸಾರಿದರು. ಪ್ರಧಾನಿಯವರು ಹೇಳಿದಂತೆ, ಈ ಮಂದಿರ ಆಧುನಿಕ ಭಾರತದ ಸಾಂಸ್ಕೃತಿಕ ಹಿರಿಮೆಯನ್ನು, ಜನರ ಆಶೋತ್ತರಗಳನ್ನು ಬಿಂಬಿಸಲಿದೆ. ಏಕೆಂದರೆ, ಈ ದೇಗುಲ ನಿರ್ವಣದ ಕನಸು ನನಸಾಗುವುದರ ಹಿಂದೆ ದೀರ್ಘ ಪ್ರಯತ್ನವಿದೆ, ಸಾವಿರಾರು ಜನರ ಬಲಿದಾನವಿದೆ ಮತ್ತು ಲಕ್ಷಾಂತರ ಜನರ ಹೋರಾಟವಿದೆ. ಜಗತ್ತಿನ ಬೇರೆ ದೇಶಗಳಲ್ಲಿ ಬಹುಶಃ ಇಂಥದೊಂದು ವಿದ್ಯಮಾನ ಕಾಣಸಿಗಲಿಕ್ಕಿಲ್ಲ. ಹೀಗಾಗಿ ರಾಮಮಂದಿರವು ಧಾರ್ವಿುಕ ಪ್ರಭಾವಳಿ ಜತೆಗೆ ಸಾಮಾಜಿಕ ಮತ್ತಿತರ ಅನೇಕ ಸಂಗತಿಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದೆ. ಆದ್ದರಿಂದ ರಾಮಮಂದಿರವನ್ನು ನಾವು ಆದರ್ಶದ ಪ್ರತಿರೂಪವಾಗಿಯೂ ಕಾಣಬೇಕಾಗುತ್ತದೆ. ಅಂದರೆ, ವರ್ತಮಾನ ಮತ್ತು ಭವಿಷ್ಯದಲ್ಲಿ ಭಾರತ, ಭಾರತವಾಸಿಗಳು ಹಾಗೂ ಆಡಳಿತಗಾರರು ಸಾಗಬೇಕಾದ ಹಾದಿಯ ಬಗ್ಗೆ ಇಲ್ಲಿ ಹೊಳಹುಗಳು ಸಿಗುತ್ತವೆ. ರಾಮನ ಆದರ್ಶ ದೇಶಕ್ಕೆ ತೋರುಗಂಬವಾಗಬೇಕು. ಆಗ ಭಾರತ ಇನ್ನಷ್ಟು ಮೇಲೇರಲು ಸಾಧ್ಯ. ರಾಮ ತನ್ನ ರಾಜ್ಯದ ಎಲ್ಲ ಪ್ರಜೆಗಳನ್ನೂ ಸರಿಸಮಾನವಾಗಿ ಪರಿಭಾವಿಸುತ್ತಿದ್ದ. ಬಡವರು, ದೀನರಿಗೆ ರಾಮನ ಆಡಳಿತದಲ್ಲಿ ಸಾಂತ್ವನ ಸಿಗುತ್ತಿತ್ತು. ರಾಮ ಧರ್ಮದ ಪ್ರತಿರೂಪ. ನಮ್ಮ ಆಡಳಿತಗಾರರು- ಉನ್ನತ ಹಂತದಿಂದ ಹಿಡಿದು ಪಂಚಾಯಿತಿ ಮಟ್ಟದವರೆಗೆ- ರಾಮನ ಜೀವನ ಮತ್ತು ತತ್ತ್ವವನ್ನು ಸರಿಯಾಗಿ ಅಭ್ಯಸಿಸಿ, ಅಲ್ಲಿನ ಉತ್ತಮಾಂಶಗಳನ್ನು ತಾವೂ ಅಳವಡಿಸಿಕೊಳ್ಳಲು ಯತ್ನಿಸಬೇಕು. ಜನರು ಕೂಡ ರಾಮರಾಜ್ಯದ ಆದರ್ಶದ ಸ್ಥಾಪನೆಯ ಹಾದಿಯಲ್ಲಿ ತಂತಮ್ಮ ಕೊಡುಗೆೆ ನೀಡಬೇಕು. ಅಂದಾಗ ಭಾರತ ಶಕ್ತಿ್ತಾಲಿ ಮಾತ್ರವಲ್ಲದೆ, ಜಾಗತಿಕವಾಗಿ ಮಾರ್ಗದರ್ಶಿ ಸ್ಥಾನದಲ್ಲಿಯೂ ಮೆರೆಯಬಹುದು. ಅಂಥದೊಂದು ಸಂಕಲ್ಪ ತೊಡುವುದಕ್ಕೆ ರಾಮಮಂದಿರ ಶಿಲಾನ್ಯಾಸ ಸಂದರ್ಭವು ನಿಮಿತ್ತವಾಗಲಿ ಎಂಬುದು ಈ ಹೊತ್ತಿನ ಆಶಯ.