

ಬಳಿಕ ತಟ್ಟೆಯ ಜತೆಗೆ ಬಂದ ಆತ, ‘ಮೇಡಂ, ನೀವು ಒಬ್ಬರೇ ಬಂದಿದ್ದೀರಾ’ ಎಂದು ಸಂಭಾಷಣೆ ಆರಂಭಿಸಿದ. ಪ್ರಾರಂಭದಲ್ಲಿ ಅರುಣಾ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸಿದರೂ ಕೆಲವೇ ನಿಮಿಷಗಳಲ್ಲಿ ಅವನ ಮಾತುಗಾರಿಕೆಗೆ ಮರುಳಾಗಿ ಅವನಲ್ಲಿ ಏನೋ ಆಕರ್ಷಣೆ ಇದೆ ಎಂದು ತಿಳಿದು ಸಂಕೋಚವಿಲ್ಲದೆ ಮಾತು ಮುಂದುವರಿಸಿದಳು. ಪಟಪಟನೆ ಇಂಗ್ಲೀಷ್ ಮಾತನಾಡುತ್ತಿದ್ದ ಆ ಯುವಕ ತನ್ನ ಹೆಸರು ಕಿರಣ್ ರೆಡ್ಡಿ ಎಂದು ಹೇಳಿ ತಾನು ಹೈದರಾಬಾದ್ ನಿವಾಸಿಯಾಗಿದ್ದು ತನಗಿನ್ನೂ ಲಗ್ನವಾಗಿರದೇ ಸೂಕ್ತ ವಧುವಿಗಾಗಿ ಹುಡುಕುತ್ತಿರುವೆ ಎಂದ. ತನ್ನ ತಂದೆ ಆಂಧ್ರಪ್ರದೇಶದಲ್ಲಿ ಎಂಎಲ್ಎ ಆಗಿದ್ದು ತಾಯಿ ಪ್ರಸೂತಿ ತಜ್ಞೆಯಾಗಿದ್ದು 50 ಹಾಸಿಗೆಯ ಆಸ್ಪತ್ರೆಯನ್ನು ಹೊಂದಿದ್ದಾರೆ ಎಂದ. ತಾನು ಈಗಾಗಲೇ ಹೈದರಾಬಾದ್, ಮದ್ರಾಸ್ ಮತ್ತಿತರ ನಗರಗಳಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಿದ್ದೇನೆ ಎಂದ ಆತ ಅವಳಿಗೆ ತನ್ನ ವಿಸಿಟಿಂಗ್ ಕಾರ್ಡನ್ನು ಕೊಟ್ಟ. ಅವನ ಜತೆಗಿನ ಸಂಭಾಷಣೆ ಅರುಣಾಳಿಗೆ ಎಷ್ಟು ಆಪ್ಯಾಯಮಾನವಾಗಿತ್ತೆಂದರೆ ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ತಾನು ಒಂದು ಸಾಫ್ಟ್ವೇರ್ ಕಂಪನಿಯನ್ನು ತೆರೆಯಲು ಇಚ್ಛಿಸುವುದಾಗಿ ಹೇಳಿದ ಆತ ನೀವೇ ನಮ್ಮ ಹೊಸ ಕಂಪನಿಗೆ ಎಂ.ಡಿಯಾಗಿ ಬರಬಹುದಲ್ಲವೇ ಎಂದಾಗ ಅರುಣಾಳಿಗೆ ಮಾತೇ ಹೊರಡಲಿಲ್ಲ.
ರಾತ್ರಿ ಹನ್ನೊಂದೂವರೆಯಾದಾಗಲೇ ಅರುಣಳಿಗೆ ಸಮಯದ ಅರಿವಾದದ್ದು. ತನ್ನ ಜೀವನದಲ್ಲಿ ಮೊದಲ ಬಾರಿಗೆ ಅಪರಿಚಿತ ಪುರುಷನೊಬ್ಬನ ಜತೆಗೆ ಅಷ್ಟೊಂದು ಸಮಯ ಕಳೆದಿದ್ದ ಅವಳಿಗೆ ಇನ್ನಷ್ಟು ಸಮಯ ಅವನೊಂದಿಗೇ ಕಳೆಯುವ ಮನಸ್ಸಾಗಿತ್ತು. ಫುಡ್ ಕೋರ್ಟ್ ಮುಚ್ಚತೊಡಗಿದಾಗ ಇಬ್ಬರೂ ಮೇಲೇಳಬೇಕಾಯಿತು. ‘ಈ ಸಮಯದಲ್ಲಿ ನಿನ್ನನ್ನು ಒಬ್ಬಂಟಿಯಾಗಿ ಮನೆಗೆ ಹೋಗಲು ಬಿಡುವುದಿಲ್ಲ. ನನ್ನ ಕಾರಿನಲ್ಲಿ ಮನೆಗೆ ಬಿಡುತ್ತೇನೆ’ ಎಂದಾಗ ಆಕೆ ಒಪ್ಪಿದಳು. ಆತನದು ಬೆಲೆಬಾಳುವ ಕಾರು ಎನ್ನುವುದನ್ನು ಗಮನಿಸಿದಳು. ‘ಇದು ನಾನು ಬೆಂಗಳೂರಿನಲ್ಲಿ ಮಾತ್ರ ಉಪಯೋಗಿಸುವ ಕಾರು, ಮದ್ರಾಸಿನಲ್ಲಿ ಹಾಗೂ ಹೈದರಾಬಾದಿನಲ್ಲಿ ಬೆಂಜ್ ಕಾರುಗಳನ್ನೇ ಬಳಸುವುದು’ ಎಂದು ಹೇಳಿದ ಆತ ಅರುಣಳ ಮನೆಯ ವಿಳಾಸವನ್ನು ಕೇಳಿದ. ಅದನ್ನು ಕಾರಿನ ಜಿ.ಪಿ.ಎಸ್ನಲ್ಲಿ ಹಾಕಿ, ‘ಅಯ್ಯೋ ನಿನ್ನ ಮನೆ ಇಲ್ಲಿಗೆ ಹತ್ತಿರದಲ್ಲಿಯೇ ಇದೆ’ ಎಂದು ಉದ್ಗರಿಸಿದ. ‘ಕಳೆದ ಕೆಲವು ಗಂಟೆಗಳಲ್ಲಿ ನೀನು ನನಗೆ ತೀರಾ ಇಷ್ಟವಾಗಿಬಿಟ್ಟೆ, ನಾನು ನಿನ್ನಂತಹ ಬುದ್ಧಿವಂತ ಹಾಗೂ ಸುಂದರ ಯುವತಿಯ ಜತೆಗೆ ಇನ್ನಷ್ಟು ಸಮಯ ಕಳೆಯಲು ಬಯಸುತ್ತೇನೆ, ನಿನಗೇನೂ ಅಭ್ಯಂತರವಿಲ್ಲದಿದ್ದರೆ ಏರ್ಪೋರ್ಟಿನವರೆಗೆ ಒಂದು ಡ್ರೖೆವ್ ಹೋಗೋಣವೇ’ ಎಂದ. ಅರುಣಾ ತಲೆಯಲ್ಲಾಡಿಸಿದಳು.
ಕಾರಿನಲ್ಲಿ ಸ್ವಲ್ಪ ದೂರ ಹೋದ ನಂತರ ಕಿರಣ್ ‘ನನಗೆ ತುಂಬಾ ಬಾಯಾರಿಕೆಯಾಗುತ್ತಿದೆ, ಹೋಟೆಲ್ಗೆ ಹೋಗೋಣ’ ಎಂದ. ಅರುಣ ಒಪ್ಪಿದಾಗ ಹತ್ತಿರದ ಪಂಚತಾರಾ ಹೋಟೆಲ್ನ ಬಾರ್ಗೆ ಹೋದರು. ತನಗಾಗಿ ಒಂದು ವಿಸ್ಕಿ ಆರ್ಡರ್ ಮಾಡಿದ ಆತ, ಅರುಣಳಿಗೆ ತಂಪು ಪಾನೀಯ ಕೊಡಿಸಿದ. ಇಬ್ಬರ ಮಾತುಕತೆ ಮುಂದುವರಿಯಿತು. ‘ನನ್ನನ್ನು ಮದುವೆಯಾಗುವೆಯಾ’ ಎಂದು ಇದ್ದಕ್ಕಿದ್ದಂತೆ ಕಿರಣ್ ಕೇಳಿದಾಗ ಅರುಣಳಿಗೆ ಸ್ವರ್ಗಕ್ಕೆ ಎರಡೇ ಗೇಣಿರುವಂತೆ ಅನಿಸಿ ಒಪ್ಪಿಯೇ ಬಿಟ್ಟಳು.
ಎರಡು ಪೆಗ್ ವಿಸ್ಕಿ ಸೇವಿಸಿದ ನಂತರ ಕಿರಣ್, ‘ನಾನು ಮದ್ಯಪಾನ ಮಾಡಿರುವುದರಿಂದ ವಾಹನ ಚಲಾಯಿಸಿದರೆ ಪೊಲೀಸರು ಹಿಡಿಯುತ್ತಾರೆ, ನಾನು ಈ ರಾತ್ರಿ ಇಲ್ಲಿಯೇ ತಂಗುವೆ, ನಾಳೆ ಬೆಳಗೆದ್ದು ಮದ್ರಾಸಿಗೆ ಹೋಗುತ್ತೇನೆ’ ಎಂದು ಹೇಳಿ ರೂಮ್ ಬುಕ್ ಮಾಡಲು ಹೊರಟ. ಐದೇ ನಿಮಿಷದ ನಂತರ ಬಂದು, ‘ಇಲ್ಲಿ ರೂಂ ಬುಕ್ ಮಾಡಬೇಕಾದರೆ ಕ್ರೆಡಿಟ್ ಕಾರ್ಡ್ ಕೊಡಬೇಕು, ನನ್ನ ಕ್ರೆಡಿಟ್ ಕಾರ್ಡ್ ತರುವುದನ್ನು ಮರೆತಿದ್ದೇನೆ, ನಿನ್ನ ಕಾರ್ಡ್ ಸ್ವಲ್ಪ ಕೊಡು, ಇದರಿಂದ ನಿನಗೆ ಹಣವೇನೂ ಖರ್ಚಾಗುವುದಿಲ್ಲ, ನಾನು ರೂಂ ಖಾಲಿ ಮಾಡುವಾಗ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಹಣ ಸಂದಾಯಿಸುವೆ’ ಎಂದ. ಅರುಣ ಯಾವುದೇ ತಕರಾರು ಮಾಡದೆ ತನ್ನ ಕ್ರೆಡಿಟ್ಕಾರ್ಡ್ ಕೊಟ್ಟಳು. ಅದೇ ಕಾರ್ಡಿನ ಮೂಲಕ ಆತ ಆ ಹೋಟೆಲ್ನಲ್ಲಿ ಕೋಣೆ ಬುಕ್ ಮಾಡಿದ. ‘ಈಗ ನಾನು ವಾಹನ ನಡೆಸಲಾಗದ ಕಾರಣ ನಾವಿಬ್ಬರೂ ನನ್ನ ಕೋಣೆಯಲ್ಲಿಯೇ ಇರೋಣ. ಇನ್ನೇನು ನಾಲ್ಕೈದು ತಾಸುಗಳಲ್ಲಿ ಬೆಳಕು ಹರಿಯುತ್ತದೆ, ನಂತರ ನಿನ್ನನ್ನು ಮನೆಗೆ ಬಿಡುತ್ತೇನೆ’ ಎಂದ. ಅರುಣಾ ವಿಧಿಯಿಲ್ಲದೆ ಒಪ್ಪಿದಳು. ರೂಮಿನಲ್ಲಿ ಕಿರಣ್ ಅರುಣಳನ್ನು ಅಪ್ಪಿಕೊಂಡು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದಾಗ ಆಕೆ ತಿರಸ್ಕರಿಸಿದಳು. ‘ಹೇಗಿದ್ದರೂ ನಾವು ಮದುವೆ ಮಾಡಿಕೊಳ್ಳುವುದರಿಂದ ನೀನೇಕೆ ಹಿಂಜರಿಯುವೆ, ಇದರಲ್ಲಿ ಏನೂ ತಪ್ಪಿಲ್ಲ’ ಎಂದು ಅರುಣಾಳನ್ನು ಒಪ್ಪಿಸಿದ. ಮಾರನೆಯ ಬೆಳಗ್ಗೆ ಹೋಟೆಲ್ ಖಾಲಿ ಮಾಡುವಾಗ ತನ್ನ ಬ್ಯಾಂಕಿನಿಂದ ಹೋಟೆಲ್ಲಿಗೆ ಹಣ ವರ್ಗಾವಣೆಯಾಗುವಲ್ಲಿ ಏನೋ ತೊಂದರೆಯಾಗಿದೆ ಎಂದು ಹೇಳಿದ ಕಿರಣ್ ಅರುಣಳ ಕ್ರೆಡಿಟ್ ಕಾರ್ಡಿನಿಂದಲೇ ಹೋಟೆಲ್ ಬಿಲ್ ಪಾವತಿಸಿದ. ಆನಂತರ ಅವಳನ್ನು ಮನೆಗೆ ಬಿಡುತ್ತೇನೆಂದು ಪೆಟ್ರೋಲ್ ಬಂಕಿನಲ್ಲಿ ಕಾರಿನ ಟ್ಯಾಂಕನ್ನು ತುಂಬಿಸಿ ಅದರ ಹಣವನ್ನೂ ಅರುಣಳ ಕಾರ್ಡಿನಿಂದಲೇ ಕೊಟ್ಟ.
ನಂತರ ನಿರ್ಜನವಾದ ರಸ್ತೆಯಲ್ಲಿದ್ದ ಎಟಿಎಂ ಬಳಿ ಕಾರನ್ನು ನಿಲ್ಲಿಸಿ ‘ನನಗೆ ಹಣದ ಅವಶ್ಯಕತೆಯಿದೆ, ಒಂದು ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಡು’ ಎಂದ. ಅರುಣಳಿಗೆ ಆಗ ಅವನ ಮೇಲೆ ಅನುಮಾನ ಮೂಡಿತು. ‘ನನ್ನ ಖಾತೆಯಲ್ಲಿ ಅಷ್ಟೊಂದು ಹಣವಿಲ್ಲ’ ಎಂದಾಗ, ಎಷ್ಟಿದೆಯೋ ಅಷ್ಟನ್ನೇ ಡ್ರಾ ಮಾಡು ಎಂದ. ‘ನಾನು ಈಗಾಗಲೇ ಹೋಟೆಲ್ ಬಿಲ್ಲಿಗಾಗಿ ಹಾಗೂ ಪೆಟ್ರೋಲಿಗಾಗಿ 13 ಸಾವಿರ ರೂ ಖರ್ಚುಮಾಡಿದ್ದೇನೆ. ಇನ್ನೂ ಹೆಚ್ಚಿನ ಹಣವನ್ನು ಕೊಡುವುದಿಲ್ಲ’ ಎಂದಾಗ ಆತ ಕಾರಿನಲ್ಲಿ ಅಡಗಿಸಿಟ್ಟಿದ್ದ ಪಿಸ್ತೂಲ್ ಹೊರತೆಗೆದು ಅದನ್ನು ಅವಳ ಎದೆಗೆ ಹಿಡಿದು ಹಣ ಕೊಡದಿದ್ದರೆ ಕೊಲೆ ಮಾಡುವೆ ಎಂದು ಬೆದರಿಸಿ ಎ.ಟಿ.ಎಂಗೆ ಹೋಗಿ ಅವಳಿಂದ 10 ಸಾವಿರ ರೂಗಳನ್ನು ಡ್ರಾ ಮಾಡಿಸಿದ. ಆನಂತರ ಅವಳನ್ನು ಮನೆಯವರೆಗೆ ಬಿಟ್ಟು ಹೊರಟುಹೋದ. ಈ ಘಟನೆಯಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆಘಾತಗೊಂಡಿದ್ದ ಅರುಣಾ ಕೆಲ ಕಾಲ ಮೌನಕ್ಕೆ ಶರಣಾದಳು. ಆದರೆ ಪೊಲೀಸರಿಗೆ ತಿಳಿಸದೆ ಹಾಗೆಯೇ ಬಿಟ್ಟರೆ ತನ್ನಂತಹ ಹಲವಾರು ಅಮಾಯಕರು ಕಿರಣನ ಬಲಿಪಶುಗಳಾಗಬಹುದೆಂದು ರ್ತಸಿ ಪೊಲೀಸರ ಮೊರೆ ಹೋದಳು. ಪೊಲೀಸರು ಅತ್ಯಾಚಾರ ಹಾಗೂ ಸುಲಿಗೆಯ ಪ್ರಕರಣ ದಾಖಲಿಸಿ ಪಂಚತಾರಾ ಹೋಟೆಲ್, ಪೆಟ್ರೋಲ್ ಬಂಕ್ ಮತ್ತು ಎ.ಟಿ.ಎಂಗಳಲ್ಲಿದ್ದ ಸಿಸಿಟಿವಿ ಫುಟೇಜ್ಗಳ ಮುಖಾಂತರ ಆರೋಪಿಯು ಚೆನ್ನೈ ನಿವಾಸಿಯಾದ ಜಹಾಂಗೀರ್ ಎಂಬುದನ್ನು ಪತ್ತೆಮಾಡಿ ಕೆಲವೇ ದಿನಗಳಲ್ಲಿ ಅವನನ್ನು ಬಂಧಿಸಿದರು.
ಜಹಾಂಗೀರ್ ಎಂಬಿಎ ಪಾಸ್ ಮಾಡಿ ಒಂದು ರೆಸಾರ್ಟ್ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು ಹಣ ದುರುಪಯೋಗ ಮಾಡಿ ಕೆಲಸ ಕಳೆದುಕೊಂಡು ವೃತ್ತಿಪರ ಸುಲಿಗೆದಾರನಾಗಿದ್ದ. ಮಾತಿನ ಮೋಡಿಯಿಂದಲೇ ಯಾರನ್ನಾದರೂ ಆಕರ್ಷಿಸಬಲ್ಲವನಾಗಿದ್ದ ಜಹಾಂಗೀರ್ ಒಂಟಿ ಯುವತಿಯರನ್ನೇ ಗುರಿಮಾಡಿಕೊಂಡು ತಾನೊಬ್ಬ ದೊಡ್ಡ ಉದ್ಯಮಿಯೆಂದು ನಂಬಿಸಿ ಅವರ ದೇಹಸುಖ ಅನುಭವಿಸಿ ಸುಲಿಗೆ ಮಾಡುತ್ತಿದ್ದ. ಆತನ ಮೇಲೆ ಎರಡು ರಾಜ್ಯಗಳಲ್ಲಿ ಇಂತಹ ಮೂರು ಪ್ರಕರಣಗಳು ದಾಖಲಾಗಿದ್ದವು. ಅವನಿಗೆ ಏಳು ವರ್ಷಗಳ ಜೈಲು ಶಿಕ್ಷೆ ದೊರೆತಾಗ ಹಲವಾರು ಯುವತಿಯರು ನಿಟ್ಟುಸಿರು ಬಿಟ್ಟರು.
‘ಯಾರೊಬ್ಬರ ಆಕರ್ಷಣೆಗೆ ಒಳಗಾಗುವ ಮೊದಲು ಆತ ತನ್ನ ಮೇಲೆ ಅತ್ಯಾಚಾರ ಮಾಡಬಹುದು’ ಎಂದು ಪ್ರತಿಯೊಬ್ಬ ಹೆಣ್ಣೂ ಯೋಚಿಸಬೇಕು ಎನ್ನುತ್ತಾಳೆ ಅಮೆರಿಕದ ಕಾದಂಬರಿಗಾರ್ತಿ ಮ್ಯಾ ರಾಬರ್ಟ್. ಅಪರಿಚಿತರ ಜತೆ ಒಬ್ಬಂಟಿಯಾಗಿ ಹೋಗುವ ಸ್ತ್ರೀಯರು ಈ ಮಾತುಗಳನ್ನು ನೆನಪಿನಲ್ಲಿಡಲೇಬೇಕು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)