ನಿಮ್ಮ ಸರ್ಕಾರದ ಭದ್ರತೆ ಬಗ್ಗೆ ಯೋಚಿಸಿ: ಸಿದ್ದರಾಮಯ್ಯಗೆ ವಿಜಯೇಂದ್ರ ಅಣಕ

B Y Vijayendra
Published on

ಬೆಂಗಳೂರು: ''ನರೇಂದ್ರ ಮೋದಿ ಸರ್ಕಾರದ ಅವಧಿಯ ಬಗ್ಗೆ ಚಿಂತಿಸುವ ಮೊದಲು ನಿಮ್ಮ ಸ್ಥಾನ ಹಾಗೂ ನಿಮ್ಮ ಸರ್ಕಾರದ ಭದ್ರತೆಯ ಬಗ್ಗೆ ಯೋಚಿಸಿ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಣಕವಾಡಿದ್ದಾರೆ.

ಮೋದಿ ಸರ್ಕಾರ ಐದು ವರ್ಷಗಳ ಅವಧಿ ಪೂರೈಸುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ, ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು,  ಮೋದಿಯವರ ಸರ್ಕಾರದ ಸುಭದ್ರತೆ ಕುರಿತ ನಿಮ್ಮ ಗ್ರಹಿಕೆ ಹಾಗೂ ವ್ಯಾಖ್ಯಾನ "ನವಿಲು ಕುಣಿಯಿತೆಂದು ಕೆಂಭೂತ ಪುಕ್ಕ ತರೆದುಕೊಂಡಿದಂತಾಗಿದೆ" ಎಂದು ಛೇಡಿಸಿದ್ದಾರೆ.

ಅಸ್ಥಿರಗೊಳ್ಳುತ್ತಿರುವ ನಿಮ್ಮ ಸ್ಥಾನದ ಸ್ಥಿತಿಯ ಲೆಕ್ಕಾಚಾರದಲ್ಲಿ ಮುಳುಗಿರುವ ನಿಮ್ಮ ಪಕ್ಷದ ಹಿತೈಷಿಗಳು "BioData" ಸಿದ್ಧಪಡಿಸಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ನಿಮ್ಮ ವರಿಷ್ಠ ಮಂಡಳಿಯ ಕದ ತಟ್ಟುತ್ತಿರುವುದು ನಿತ್ಯ ಚರ್ಚೆಯಲ್ಲಿರುವ  ಸುದ್ದಿಯಾಗಿದೆ, ಕೆಲವರು ಈ ಕುರಿತು ಮಾಧ್ಯಮಗಳ ಮೂಲಕ ಹಕ್ಕು ಮಂಡಿಸಿದ್ದಾರೆ.

ಇದರಿಂದ ವಿಚಲಿತಗೊಂಡಿರುವ ನೀವು ಮೇಲಿಂದ ಮೇಲೆ ನನ್ನ ಸ್ಥಾನ ಅಬಾಧಿತ, ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡುತ್ತಲೇ ಇದ್ದೀರಿ, ಈ ಹೇಳಿಕೆ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಿರುವ ಅಸ್ಥಿರ ಸ್ಥಿತಿಯನ್ನು ಬಿಂಬಿಸುತ್ತದೆ.

ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ಅವಧಿಯೂ ಪೂರೈಸುತ್ತದೆ, ಮತ್ತೊಂದು ಅವಧಿಗೂ ಚಾರಿತ್ರಿಕ ಗೆಲುವು ಸಾಧಿಸಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ನಂ1 ಸ್ಥಾನಕ್ಕೆ ತಂದು ನಿಲ್ಲಿಸಲಿದೆ. ಇದು ಶತಕೋಟಿ ಭಾರತೀಯರ ಆಶೋತ್ತರ ಹಾಗೂ ಸೂರ್ಯನ ಪ್ರಖರ ಬೆಳಕಿನಷ್ಟೇ ಸುಸ್ಪಷ್ಟ ಎಂದು‌ ಬಿ.ವೈ.ವಿಜಯೇಂದ್ರ ಪ್ರತಿಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net