

ಯಾರಾದರೂ ರಸ್ತೆ ಮೇಲೆ ಇರುವ ಮ್ಯಾನ್ಹೋಲ್ಗಳ ಮುಚ್ಚಳವನ್ನು ಕದ್ದರೆ ಅಥವಾ ಅದಕ್ಕೆ ಹಾನಿಮಾಡಿದರೆ ಅಂಥವರಿಗೆ ಮರಣ ದಂಡನೆ ಶಿಕ್ಷೆ ಫಿಕ್ಸ್ ಆಗಿದೆ...!
ಮ್ಯಾನ್ಹೋಲ್ ಮುಚ್ಚಳ ಕದ್ದರೆ ಅಥವಾ ಅದಕ್ಕೆ ಹಾನಿ ಮಾಡುವುದರಿಂದ ಇತರರಿಗೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತೆರೆದ ಗುಂಡಿಗಳಲ್ಲಿ ಬಿದ್ದವರು ಜೀವ ಕಳೆದುಕೊಳ್ಳಬಹುದು ಅಥವಾ ಗಂಭೀರವಾಗಿ ಗಾಯಗೊಳ್ಳಬಹುದು. ಮಳೆಗಾಲದಲ್ಲಿ ಈ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಗಂಭೀರ ಪ್ರಮಾಣದ ಶಿಕ್ಷೆ ಜಾರಿ ಮಾಡಲಾಗಿದೆ ಎಂದು ಅಲ್ಲಿನ ಪ್ರಮುಖ ನ್ಯಾಯಾಲಯದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆದರೆ ಹೆದರಬೇಡಿ..ಈಗ ನಾವು ಹೇಳುತ್ತಿರುವ ಶಿಕ್ಷೆ ಭಾರತದಲ್ಲಿ ಜಾರಿಯಾಗಿದ್ದಲ್ಲ. ಚೀನಾ ದೇಶದ ಹೊಸ ಕಾನೂನು. ಇನ್ನು ಮುಂದೆ ಚೀನಾದಲ್ಲಿ ಮ್ಯಾನ್ಹೋಲ್ಗಳ ಕಳವು ಮಾಡಿದವರಿಗೆ ಗರಿಷ್ಠ ಶಿಕ್ಷೆ ಮರಣದಂಡನೆ.
ಚೀನಾದಲ್ಲಿ 2017ರಿಂದ 2019ರವರೆಗೆ ಒಟ್ಟು 70 ಮ್ಯಾನ್ಹೋಲ್ ದುರಂತಗಳು ನಡೆದಿವೆ. ಈ ಮ್ಯಾನ್ಹೋಲ್ಗಳ ಮುಚ್ಚಳವನ್ನು ಕದಿಯುವ ಪ್ರಮಾಣಗಳು ಹೆಚ್ಚಿದ ಕಾರಣ ಅನೇಕರು ಗುಂಡಿಯೊಳಗೆ ಬೀಳುತ್ತಿದ್ದಾರೆ. ಹಲವರು ಜೀವ ಬಿಟ್ಟಿದ್ದರೆ, ಮತ್ತೊಂದಷ್ಟು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಹಾಗಾಗಿ ನ್ಯಾಯಾಲವೂ ಅದನ್ನು ಗಂಭೀರವಾಗಿ ಪರಿಗಣಿಸಿ, ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡಿದೆ.
2012ರಲ್ಲಿ ಒಂದು ಘಟನೆ ನಡೆದಿತ್ತು. ಯಾರೋ ಒಬ್ಬರು ಮ್ಯಾನ್ಹೋಲ್ ಮುಚ್ಚಳ ತೆಗೆದು, ಅದನ್ನು ಹಾಕದೆ ಹೋಗಿದ್ದರು. ಅದು ಮಳೆಗಾಲವಾಗಿತ್ತು. ಗುಂಡಿ ತುಂಬ ನೀರುತುಂಬಿಕೊಂಡ ಪರಿಣಾಮ ಮಹಿಳೆಯೋರ್ವರಿಗೆ ಅಲ್ಲಿ ಮ್ಯಾನ್ಹೋಲ್ ಇರುವುದು ಗೊತ್ತಾಗದೆ ಅದರಲ್ಲಿ ಬಿದ್ದು ಸಾವನ್ನಪ್ಪಿದ್ದರು. ಇಂಥ ಅನೇಕ ಪ್ರಕರಣಗಳು ನಡೆಯುತ್ತಿವೆ. ಹಾಗಾಗಿ ಅದನ್ನಿನ್ನು ಯಾರೂ ತೆಗೆಯಬಾರದು ಎಂಬ ಕಟ್ಟುನಿಟ್ಟಿನ ಆದೇಶವನ್ನು ಚೀನಾದಲ್ಲಿ ತರಲಾಗಿದೆ.
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕಾನೂನು ಜಾರಿ ಮಾಡಲಾಗಿದೆ ಎಂದು ಬೀಜಿಂಗ್ ವಕೀಲರಾದ ಕ್ಸು ಹಾವೊ ತಿಳಿಸಿದ್ದಾರೆ.
ಚೀನಾದಲ್ಲಿ ಮ್ಯಾನ್ಹೋಲ್ ಮುಚ್ಚಳವನ್ನು ಕದ್ದು, ಅದನ್ನು ಮಾರುವ ಪ್ರಮಾಣ ಹೆಚ್ಚಾಗಿದೆಯಂತೆ. ನೀರು ಇರುವ ಗುಂಡಿಗಳ ಮುಚ್ಚಳಗಳನ್ನು ಟ್ಯಾಕ್ಸಿ ಡ್ರೈವರ್ಗಳು ಹೆಚ್ಚಾಗಿ ತೆಗೆಯುತ್ತಾರಂತೆ. ಅದನ್ನು ತೆಗೆದು ತಮ್ಮ ಕಾರುಗಳನ್ನು ತೊಳೆದುಕೊಂಡು, ಮತ್ತೆ ಮುಚ್ಚದೆ ಹೋಗುತ್ತಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)