

ರಬಕವಿ/ಬನಹಟ್ಟಿ: ರಬಕವಿ ಬಸವ ನಗರ ಬಡಾವಣೆಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇಬ್ಬರು ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದು, ಇದರಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ.
ರಬಕವಿ ನಗರದ ನಿವಾಸಿ ಬಾಂಡ್ ರೈಟರ್ ಶಿವಾನಂದ ಕೋಲಿ ದೈನಂದಿನ ಕಾಯಕದಂತೆ ತೇರದಾಳ ನಗರಕ್ಕೆ ತೆರಳಿದ್ದಾರೆ. ಆಗ ಬಾಗಿಲು ತೆರೆದಿದ್ದನ್ನು ನೋಡಿದ ಡಕಾಯಿತರು ಮುಖ ಮುಚ್ಚಿಕೊಂಡು ಮನೆಯೊಳಗೆ ನುಗ್ಗಿದ್ದಾರೆ. ಮನೆ ಯಜಮಾನಿಗೆ ಆಯುಧ ತೋರಿಸಿ ಹೆದರಿಸಿ ಮೈಮೇಲಿನ ಆಭರಣ ಕಿತ್ತುಕೊಂಡು ಪರಾರಿಯಾಗುವಷ್ಟರಲಿ ಮಗಳು ತಕ್ಷಣ ತಂದೆಗೆ ಫೋನ್ ಮಾಡಿ ಚಾಲು ಇಟ್ಟು ಜನರನ್ನು ಕೂಗಿದ್ದಾಳೆ. ಆಗ ಸಾರ್ವಜನಿಕರು ಸೇರಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಕೂಡಲೇ ಆಗಮಿಸಿದ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.
ತಾಲೂಕಿನ ರಾಂಪುರ ನಗರದ ಅರ್ಜುನ ಗಾಡಿವಡ್ಡರ, ಅವರ ಅಳಿಯ ಅಥಣಿ ನಗರದ ಸುನೀಲ ಗಾಡಿವಡ್ಡರ ಬಂಧಿತರು. ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರಿಂದ ವಶಪಡಿಸಿಕೊಂಡ ಆಭರಣಗಳನ್ನು ಮನೆ ಮಾಲೀಕರಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ. ತೇರದಾಳ ಪಿಎಸ್‌ಐ ಅಪ್ಪು ಐಗಳಿ ತನಿಖೆ ಮುಂದುವರಿಸಿದ್ದಾರೆ.