

Red Fort: ಭದ್ರತೆಯ ಕೋಟೆಯಂತಿರುವ ದೆಹಲಿಯ ಕೆಂಪುಕೋಟೆಯ ಆವರಣದಲ್ಲಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸುಮಾರು 1.5 ಕೋಟಿ ಮೌಲ್ಯದ ಎರಡು ಚಿನ್ನದ ಕಳಶ ಮತ್ತು ಇತರೆ ಬೆಲೆಬಾಳುವ ವಸ್ತುಗಳ ಕಳ್ಳತನ ನಡೆದಿದ್ದು, ಸಿಸಿಟವಿ ದೃಶ್ಯದಲ್ಲಿ ಸೆರೆಯಾಗಿದೆ ಎಂದು ಶನಿವಾರ (ಸೆ. 06) ವರದಿಯಾಗಿದೆ.
ಬುಧವಾರ (ಸೆ. 03) ಕೆಂಪು ಕೋಟೆ ಆವರಣದಲ್ಲಿರುವ 15 ಆಗಸ್ಟ್ ಪಾರ್ಕ್‌ನಲ್ಲಿ 10 ದಿನಗಳ ಜೈನ ಧಾರ್ಮಿಕ ಕಾರ್ಯಕ್ರಮವಾದ 'ದಶಲಕ್ಷಣ ಮಹಾಪರ್ವ'ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಜೈನ ಅರ್ಚಕನ ವೇಷದಲ್ಲಿ ಬಂದು ಕಳ್ಳ ತನ್ನ ಕೈಚಳಕವನ್ನು ತೋರಿಸಿದ್ದು, ಸಿಸಿಟಿವಿಯಲ್ಲಿ ದಾಖಲಾಗಿದೆ. ಆಯೋಜಕರು ಗಣ್ಯರನ್ನು ಸ್ವಾಗತಿಸಲು ವ್ಯವಸ್ಥೆಗಳಲ್ಲಿ ನಿರತರಾಗಿದ್ದಾಗ ಘಟನೆ ನಡೆದಿದೆ. ವಿಧ್ಯುಕ್ತ ಚಟುವಟಿಕೆಗಳು ಆರಂಭವಾದಾಗ ವೇದಿಕೆಲ್ಲಿರಬೇಕಾದ ವಸ್ತುಗಳು ಕಾಣೆಯಾಗಿವೆ.
ಕಳುವಾದ ವಸ್ತುಗಳಲ್ಲಿ ಚಿನ್ನದ ' ಝರಿ ' (ಚಿತಾಭಸ್ಮ) ಮತ್ತು ಸುಮಾರು 760 ಗ್ರಾಂ ತೂಕದ ಚಿನ್ನದ ತೆಂಗಿನಕಾಯಿ, ವಜ್ರಗಳು, ಪಚ್ಚೆಗಳು ಮತ್ತು ಮಾಣಿಕ್ಯಗಳಿಂದ ಕೂಡಿದ 115 ಗ್ರಾಂ ಚಿನ್ನದ 'ಝರಿ' ಸೇರಿವೆ ಎನ್ನಲಾಗಿದೆ. ಈ ವಸ್ತುಗಳನ್ನು ಜೈನ ಆಚರಣೆಗಳಲ್ಲಿ ಬಳಸಲಾಗುತ್ತದೆ, ಆದ್ದರಿಂದ ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇವು ಉದ್ಯಮಿ ಸುಧೀರ್ ಜೈನ್ ಅವರ ಒಡೆತನದಲ್ಲಿದ್ದವು, ಅವರು ಪ್ರತಿದಿನ ಧಾರ್ಮಿಕ ಕಾರ್ಯಗಳಿಗಾಗಿ ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದರು.
ಈ ಕುರಿತು ದೂರು ನೀಡಿರುವ ಸುಧೀರ್ ಕುಮಾರ್ ಜೈನ್ ಮಾತನಾಡಿ, "ಕಳ್ಳನು ಜನಸಂದಣಿಯ ಲಾಭ ಪಡೆದುಕೊಂಡಿದ್ದಾನೆ. ರತ್ನಗಳು ಕೇವಲ ಸೌಂದರ್ಯಕ್ಕಾಗಿ. ಆದರೆ 'ಕಲಶ' ನಮ್ಮ ಭಾವನೆಗಳಿಗೆ ಸಂಬಂಧಿಸಿದೆ. ಅಂತಹ ವಸ್ತುವಿನ ಮೇಲೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಕಳ್ಳ ಜೈನ ಅರ್ಚಕನ ವೇಷದಲ್ಲಿ ಬಂದು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾನೆ. ಸಿಸಿಟಿವಿ ದೃಶ್ಯಗಳು ತೋರಿಸಿವೆ. ಶಂಕಿತನನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. (ಏಜೆನ್ಸೀಸ್)