ಎಐಎಡಿಎಂಕೆ ಪಕ್ಷದಲ್ಲಿ ಮತ್ತಷ್ಟು ಬಿರುಕು; ಪಕ್ಷದ ಹಿರಿಯ ನಾಯಕ ಸೆಂಗೊಟ್ಟೈಯನ್​ರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಿದ ಪಳನಿಸ್ವಾಮಿ| AIADMK

AIADMK
Published on

AIADMK: ತಮಿಳುನಾಡಿದ ಪ್ರಮುಖ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೆತ್ರಾ ಕಳಗಂ ಪಕ್ಷದಲ್ಲಿ ಮತ್ತಷ್ಟು ಬಿರುಕು ಹೆಚ್ಚಾಗಿದ್ದು, ಪಕ್ಷ ಬಿಟ್ಟು ಹೋದ ನಾಯಕರನ್ನು ಮರಳಿ ಸೇರಿಸಿಕೊಳ್ಳುವಂತೆ ಕರೆ ನೀಡಿದ್ದ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಕೆ.ಎ.ಸೆಂಗೊಟ್ಟೈಯನ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿ ಶನಿವಾರ (ಸೆ. 06) ಮಾಜಿ ಸಿಎಂ ಮತ್ತು ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಆದೇಶ ಹೊರಡಿಸಿದ್ದಾರೆ.

ಈರೋಡ್ ಉಪನಗರ ಪಶ್ಚಿಮ ಜಿಲ್ಲೆಯ ಎಐಎಡಿಎಂಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಜಿಲ್ಲಾ ಕಾರ್ಯದರ್ಶಿಯ ಜವಾಬ್ದಾರಿಗಳನ್ನು ಹೊತ್ತಿದ್ದ ಶಾಸಕ ತಿರು. ಕೆಎ ಸೆಂಗೊಟ್ಟೈಯನ್ ಅವರನ್ನು ಇಂದಿನಿಂದ ಜಾರಿಗೆ ಬರುವಂತೆ ಎಲ್ಲಾ ಈ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಎಐಎಡಿಎಂಕೆ ಪ್ರಕಟಣೆ ಹೊರಡಿಸಿದೆ.

ಇಂದು ಮುಂಜಾನೆ ದಿಂಡಿಗಲ್​ನ ಹೋಟೆಲ್​ನಲ್ಲಿ ಪಕ್ಷದ ಏಳು ಹಿರಿಯ ನಾಯಕರು ಮತ್ತು ಮಾಜಿ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಕೆ.ಎ.ಸೆಂಗೊಟ್ಟೈಯನ್ ಮತ್ತು ಅವರ ಬೆಂಬಲಿಗರನ್ನು ಪಕ್ಷದಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸೆಂಗೋಟ್ಟೈಯನ್, ಎಐಎಡಿಎಂಕೆ ಹೈಕಮಾಂಡ್ ತಮ್ಮ ವಿರುದ್ಧ ತೆಗೆದುಕೊಂಡ ನಿರ್ಧಾರದ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ, ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೆ.ಎ.ಸೆಂಗೋಟ್ಟೈಯನ್, ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ, ಒ. ಪನ್ನೀರ್‌ಸೆಲ್ವಂ ಹಾಗೂ ಟಿಟಿವಿ ದಿನಕರನ್ ಸೇರಿದಂತೆ ಉಚ್ಚಾಟಿತ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಕರೆ ನೀಡಿದ್ದರು. ಪಕ್ಷವು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಇದು ಅಗತ್ಯ. ಇದನ್ನ ಮಾಡದಿದ್ದರೆ ನಾವೇ ಪಕ್ಷದ 10 ಜನ ಸೇರಿಕೊಂಡು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು.

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಪಕ್ಷದ ಹಿರಿಯ ನಾಯಕರು ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಪಕ್ಷ ತೊರೆದ ನಾಯಕರನ್ನು ಮರಳಿ ಕರೆತರುವಂತೆ ಕೇಳಿಕೊಂಡಿದ್ದೆವು. ಆದರೆ ಇಪಿಎಸ್ ಈ ಸಲಹೆಯನ್ನು ಗಮನಿಸಲಿಲ್ಲ. ನಾನು ಒಗ್ಗಟ್ಟಿನ ಎಐಎಡಿಎಂಕೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ. 2016 ರಿಂದ ಚುನಾವಣಾ ಫಲಿತಾಂಶಗಳು ನಮ್ಮ ಪರವಾಗಿಲ್ಲ. ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೆ, ಸಂಸತ್ ಚುನಾವಣೆಯಲ್ಲಿ 30 ಸ್ಥಾನಗಳನ್ನು ಗೆಲ್ಲುತ್ತಿದ್ದೆವು. ಉಚ್ಚಾಟಿತ ನಾಯಕರನ್ನು ಮರಳಿ ಕರೆತಂದರೆ ಮಾತ್ರ ಎಐಎಡಿಎಂಕೆ ಚುನಾವಣೆ ಗೆಲ್ಲಲು ಸಾಧ್ಯ ಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net