

Gold Rates: 'ಚಿನ್ನ'ದ ಗ್ರಾಹಕರಿಗೆ ಅದ್ಯಾಕೋ ಖರೀದಿ ಭಾಗ್ಯ ದಿನದಿಂದ ದಿನಕ್ಕೆ ದೂರ ಸರಿಯುತ್ತಿದೆ. ಮದುವೆ, ಶುಭ ಸಮಾರಂಭಗಳ ಸೀಸನ್ನಲ್ಲೇ ಗೋಲ್ಡ್ ಬೆಲೆ ಆಕಾಶಕ್ಕೆ ಜಿಗಿಯುತ್ತಿರುವುದು ಸದ್ಯ ಗ್ರಾಹಕರಲ್ಲಿ ತಲೆಬಿಸಿ ತಂದೊಡ್ಡಿದೆ. ಹಿಂದಿನ ದಾಖಲೆಗಳು ಮುರಿಯುತ್ತಿರುವ ಪ್ರಸ್ತುತ ಚಿನ್ನದ ದರ, ಕಳೆದ ಎರಡು ವಾರಗಳಲ್ಲಿ, ಸುಮಾರು 7 ಸಾವಿರ ರೂ. ಹೆಚ್ಚಾಗಿದೆ. ಇದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿನ ಏರಿಕೆ ಎಂಬುದು ಇಲ್ಲಿ ಗಮನಾರ್ಹ.
ಶನಿವಾರ (ಸೆ.06) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 870 ರೂ. ಹೆಚ್ಚಾಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 800 ರೂ. ಏರಿಕೆಯಾಗಿದೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರವೂ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಒಂದು ಔನ್ಸ್ ಚಿನ್ನದ ಬೆಲೆ 38 ಡಾಲರ್ ಏರಿದೆ. ಇದರೊಂದಿಗೆ, ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ 3,586 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿಯ ಬೆಲೆಯೂ ಗಮನಾರ್ಹವಾಗಿ ಹೆಚ್ಚಳ ಕಂಡಿದೆ. ಒಂದು ಕೆಜಿ ಬೆಳ್ಳಿ 2,000 ರೂ. ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವುದರಿಂದ, ಇದು ಮಧ್ಯಮ ವರ್ಗದ ಜನತೆಗೆ ಭಾರೀ ನಿರಾಶೆ ಉಂಟುಮಾಡಿದೆ. ದಸರಾ ಮತ್ತು ದೀಪಾವಳಿಗೆ ಬಲು ದುಬಾರಿಯಾಗುತ್ತಿರುವ ಚಿನ್ನದ ಬೆಲೆಗಳು, ಸತತವಾಗಿ ಏರಿಕೆ ಕಾಣಲು ಅಂತಾರಾಷ್ಟ್ರೀಯ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಯುಎಸ್ ಸುಂಕಗಳು ಸಹ ಕಾರಣ ಎಂದು ತಜ್ಞರು ಅಂದಾಜಿಸಿದ್ದಾರೆ,(ಏಜೆನ್ಸೀಸ್).