90 ಸೆಕೆಂಡ್​, 26 ಬಾರಿ ಕಪಾಳಮೋಕ್ಷ! ಕ್ಯಾಂಪಸ್​ನಲ್ಲಿ ಸಹಪಾಠಿ ಮೇಲೆ ಹಲ್ಲೆ, ವಿಡಿಯೋ ವೈರಲ್​ | Student Slapped

ವಿಜಯವಾಣಿ (32)
Published on

Student Slapped: ಕಳೆದ ತಿಂಗಳು ಅಮಿಟಿ ಯೂನಿವರ್ಸಿಟಿಯ ಕಾಲೇಜು ಕ್ಯಾಂಪಸ್​ನಲ್ಲಿ ತಮ್ಮ ಸಹಪಾಠಿಗೆ ಕಪಾಳಮೋಕ್ಷ ಮಾಡಿದ ಯುವತಿ ಮತ್ತು ಆತನ ಸ್ನೇಹಿತನ ವಿಡಿಯೋ ಇದೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಉತ್ತರ ಪ್ರದೇಶದ ಲಖನೌದಲ್ಲಿರುವ ಅಮಿಟಿ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ, ಆಗಸ್ಟ್​ 26ರಂದು ಕ್ಯಾಂಪಸ್​ನ ಪಾರ್ಕಿಂಗ್ ಸ್ಥಳದಲ್ಲಿ ಕಾರಿನೊಳಗೆ ತನ್ನ ಸಹಪಾಠಿಯ ಮೇಲೆ ಸುಮಾರು 50ರಿಂದ 60 ಬಾರಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ.

'ಎನ್​ಡಿಟಿವಿ' ವರದಿ ಪ್ರಕಾರ, 90 ಸೆಕೆಂಡ್​ಗಳಲ್ಲಿ 26 ಬಾರಿ ಕಪಾಳಮೋಕ್ಷ ಮಾಡಲಾಗಿದೆ. ಆ.26ರಂದು ಸಂತ್ರಸ್ತ ಶಿಖರ್ ಮುಖೇಶ್ ಕೇಸರ್ವಾನಿ, ತನ್ನ ಸ್ನೇಹಿತರೊಂದಿಗೆ ತರಗತಿಗೆ ಹಾಜರಾಗಲು ಬಂದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿಖರ್​ನನ್ನು ಎಳೆದೊಯ್ದ ಮೂರರಿಂದ ನಾಲ್ವರು ಸಹಪಾಠಿಗಳು, ಕಾರಿನೊಳಗೆ ಆತನ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಕಾರಿನ ಮುಂಭಾಗದಲ್ಲಿ ಕುಳಿತ ಯುವತಿ ಮತ್ತು ಶಿಖರ್​ ಬಲದಲ್ಲಿದ್ದ ವ್ಯಕ್ತಿ ಕಪಾಳಕ್ಕೆ ಹೊಡೆದವರು ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಸಂತ್ರಸ್ತ ಶಿಖರ್​ನನ್ನು ಕಾರಿನಲ್ಲಿ ಕೂಡಿಕೊಂಡು ಕಪಾಳಮೋಕ್ಷ ಮಾಡಿದ್ದೇಕೆ? ಅದರ ಹಿಂದಿರುವ ಕಾರಣವನ್ನು ಎಂಬುದು ಸದ್ಯದ ಮಟ್ಟಿಗೆ ತಿಳಿದುಬಂದಿಲ್ಲ. ಈ ಕುರಿತಾಗಿ ಅಮಿಟಿ ಯೂನಿವರ್ಸಿಟಿಯಿಂದಲೂ ಯಾವುದೇ ಉತ್ತರ ಸಿಕ್ಕಿಲ್ಲ. ಶಿಖರ್ ತಂದೆ ಮುಖೇಶ್ ಕೇಸರ್ವಾನಿ ನೀಡಿದ ದೂರಿನ ಆಧಾರದ ಮೇಲೆ ಆಯುಷ್ ಯಾದವ್, ಜಾಹ್ನವಿ ಮಿಶ್ರಾ, ಮಿಲಯ್ ಬ್ಯಾನರ್ಜಿ, ವಿವೇಕ್ ಸಿಂಗ್ ಮತ್ತು ಆರ್ಯಮಾನ್ ಶುಕ್ಲಾ ಎಂಬ ಐವರು ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಮಗ ಕಾಲೇಜಿಗೆ ಹೋಗ್ತಿಲ್ಲ

ಘಟನೆ ಬಗ್ಗೆ ಶಿಖರ್​ ತಂದೆ ಪ್ರತಿಕ್ರಿಯಿಸಿ, "ಈ ಘಟನೆ ನನ್ನ ಮಗನನ್ನು ಭಾರೀ ಆಘಾತಕ್ಕೆ ದೂಡಿದೆ. ಇನ್ನು ಮುಂದೆ ಅವನು ಕಾಲೇಜಿಗೆ ಹೋಗುವುದಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿದ್ದೇವೆ. ಪ್ರಸ್ತುತ, ಕೋಲಿನ ಸಹಾಯದಿಂದ ನಡೆಯುತ್ತಿದ್ದಾನೆ. ಪುತ್ರನಿಗೆ ಕನಿಷ್ಠ 50ರಿಂದ 60 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆ. ದಯವಿಟ್ಟು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ" ಎಂದು ಪೊಲೀಸರಲ್ಲಿ ಮನವಿ ಮಾಡಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net