

ಬೆಂಗಳೂರು: ಆತ ಉದ್ಯೋಗ ಅರಸಿ ದೂರದ ಪಶ್ಚಿಮ ಬಂಗಾಳದಿಂದ ಉದ್ಯಾನ ನಗರಿಗೆ ಬಂದಿದ್ದಾನೆ. ಆದರೆ ಆತ ಬೆಂಗಳೂರಿನಿಲ್ಲಿ ಆರಿಸಿಕೊಂಡ ಉದ್ಯೋಗ ಮಾತ್ರ ಕಳ್ಳತನ! ಇದನ್ನೂ ಓದಿ: ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ
ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದು ಕಳ್ಳತನ ಮಾಡುತ್ತಿದ್ದ ಮತ್ತು ಕಳ್ಳತನ ಮಾಡಿದ್ದ ಆಭರಣಗಳನ್ನು ಗುಜರಿಗೆ ಹಾಕಿದ್ದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸುಬ್ರತೋಮಂಡಲ್(23) ಬಂಧಿತ. ಆರೋಪಿಯಿಂದ ಸುಮಾರು 7 ಲಕ್ಷ ಮೌಲ್ಯದ 130 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪಶ್ಚಿಮ ಬಂಗಾಳದಿಂದ ಆರು ತಿಂಗಳ ಹಿಂದೆ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ. ತಕ್ಷಣಕ್ಕೆ ಉದ್ಯೋಗ ಸಿಗದಿದ್ದರಿಂದ ಜೀವನ ನಿರ್ವಹಣೆಗಾಗಿ ಮನೆಗಳ ಮುಂದೆ ಮತ್ತು ಬೀದಿಗಳಲ್ಲಿ ಅಳವಡಿಸಿದ್ದ ಕಬ್ಬಿಣದ ನಲ್ಲಿಗಳನ್ನು ಕಳ್ಳತನ ಮಾಡಿ ಅವುಗಳನ್ನು ಗುಜರಿಗೆ ಹಾಕಿ ಹಣ ಪಡೆದು ತನ್ನ ಹೊಟ್ಟೆ ತುಂಬಿಸಿಕೊಂಡಿದ್ದ. ಇದೇ ರೀತಿ ಮಾ. 13 ರಂದು ಯಶವಂತಪುರದ ಮತ್ತಿಕೆರೆಯ ಎಚ್‌ಎಂಟಿ ಲೇಔಟ್‌ನ ಮನೆ ಬಳಿ ಕಬ್ಬಿಣದ ನಲ್ಲಿ(ಕೊಳಾಯಿ) ಕಳ್ಳತನ ಮಾಡಲು ಹೋದಾಗ ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ನುಗ್ಗಿ ಬೀರು ಮತ್ತು ವಾಲ್ಡ್‌ರೂಬ್‌ನಲ್ಲಿ ಇಟ್ಟಿದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ಬಂಗಾರ ಸಿಕ್ಕ ಖುಷಿಯಲ್ಲಿ ಆರೋಪಿ ರಸ್ತೆಯಲ್ಲೇ ನಿಂತು ತನ್ನ ಕೈನಲ್ಲಿಯೇ ಎಷ್ಟಿರಬಹುದೆಂದು ತೂಕ ಮಾಡುತ್ತಿದ್ದ. ಬಳಿಕ ಕದ್ದ ಆಭರಣಗಳನ್ನು ಎಲ್ಲಿ ಮಾರಾಟ ಮಾಡಬೇಕೆಂಬುದು ಗೊತ್ತಾಗದೇ ಆ ಆಭರಣಗಳನ್ನು ಪರಿಚಿಯವಿದ್ದ ಗುಜರಿ ಅಂಗಡಿಗೆ ಹಾಕಿದ್ದಾನೆ. ಗುಜರಿ ಮಾಲೀಕ 13 ಗ್ರಾಂ ಚಿನ್ನಾಭರಣವನ್ನು ಪಡೆದು ಕೇವಲ 30 ಸಾವಿರ ಹಣ ಕೊಟ್ಟು ಕಳುಹಿಸಿದ್ದಾನೆ.
ಮನೆ ಕಳ್ಳತನವಾಗಿರುವ ಬಗ್ಗೆ ನಿಜೇಶ್ ಎಂಬುವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಸ್ಥಳೀಯ ಸಿಸಿ ಕ್ಯಾಮರಾ ದೃಶ್ಯವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಕದ್ದ ಚಿನ್ನಾಭರಣಗಳನ್ನು ಜಾಲಹಳ್ಳಿ ಕ್ರಾಸ್ ಬಳಿಯ ಗುಜರಿ ಅಂಗಡಿಗೆ ಹಾಕಿರುವುದಾಗಿ ತಿಳಿಸಿದ್ದಾನೆ. ಈತನ ಮಾಹಿತಿಯ ಮೇರೆಗೆ ಗುಜರಿ ಮಾಲೀಕನಿಂದ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಆರೋಪಿಯನ್ನು ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.