

ಪುಣೆ: ದುಷ್ಕರ್ಮಿಗಳು ಕತ್ತಿ ಮತ್ತು ಕುಡಗೋಲುಗಳನ್ನು ಹಿಡಿದು ನರ್ತಿಸುತ್ತಿದ್ದಾರೆ, ಸ್ಥಳೀಯರನ್ನು ಹೆದರಿಸುತ್ತಿದ್ದಾರೆ. ಅಂಗಡಿಮುಂಗಟ್ಟುಗಳನ್ನು ಮುಚ್ಚುವಂತೆ ಒತ್ತಾಯಿಸಿ, ಒಬ್ಬ ವ್ಯಕ್ತಿಯಿಂದ ಸುಲಿಗೆ ಕೂಡ ಮಾಡಿದ್ದಾರೆ. ಆದರೆ ಇದೆಲ್ಲ ನಡೆಯುತ್ತಿದ್ದರೂ ಕ್ರಮ ತೆಗೆದುಕೊಳ್ಳುವುದಿರಲಿ, ಹಿರಿಯ ಅಧಿಕಾರಿಗಳಿಗೆ ತಿಳಿಸದೆ ಗಪ್ಚಿಪ್ ಆಗಿದ್ದ ಇಬ್ಬರು ಪೊಲೀಸ್ ಪೇದೆಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಪುಣೆಯ ನಾರ್ಹೆ ಪ್ರದೇಶದಲ್ಲಿ ಫೆಬ್ರವರಿ 18 ರಂದು ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ. ರೋಷನ್ ಲೋಖಂಡೆ ಎಂಬ ದುಷ್ಕರ್ಮಿಯು, ಪುಣೆಯಿಂದ ಗಡೀಪಾರು ಆದೇಶವಿದ್ದರೂ, ತನ್ನ 15 ಜನ ಸಹಚರರೊಂದಿಗೆ ನಗರದೊಳಗೆ ಬಂದು ಹುಲ್ಲೆಬ್ಬಿಸಿದ್ದಾನೆ. ಅವರು ಶಸ್ತ್ರಗಳನ್ನು ಹಿಡಿದು ನರ್ತಿಸಿದ್ದಾರೆ, ಸ್ಥಳೀಯ ನಿವಾಸಿಗಳನ್ನು ಭಯಭೀತರಾಗಿಸಿದ್ದಾರೆ. ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ, ಒಬ್ಬ ವ್ಯಕ್ತಿಯನ್ನು ಲೂಟಿ ಕೂಡ ಮಾಡಿದ್ದಾರೆ. ಈ ಎಲ್ಲವನ್ನೂ ಚಿತ್ರಿಸಿದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಹಬ್ಬಿತು.
ಈ ಬಗ್ಗೆ ಪುಣೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದಾಗ, ಘಟನೆ ನಡೆದ ಸಂದರ್ಭದಲ್ಲಿ ನಾರ್ಹೆ ಠಾಣೆಯ ಇಬ್ಬರು ಪೊಲೀಸ್ ಪೇದೆಗಳಾದ ಮಹೇಂದ್ರ ರೌತ್ ಮತ್ತು ಸುಶಾಂತ್ ಯಾದವ್ ಸ್ಥಳದಲ್ಲೇ ಇದ್ದರು. ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಅಥವಾ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ವರದಿಯೂ ನೀಡಿಲ್ಲ ಎಂಬುದು ತಿಳಿದುಬಂದಿದೆ. ಆದ್ದರಿಂದ ರೌತ್ ಮತ್ತು ಯಾದವ್ರನ್ನು ನಿಷ್ಕ್ರಿಯತೆ, ಕರ್ತವ್ಯಲೋಪ ಮತ್ತು ಪೊಲೀಸ್ ಇಲಾಖೆಯ ವರ್ಚಸ್ಸನ್ನು ಹಾಳು ಮಾಡುವ ರೀತಿ ವರ್ತಿಸಿರುವುದಕ್ಕೆ ಸಸ್ಪೆಂಡ್ ಮಾಡಲಾಗಿದೆ ಎಂದು ಡಿಸಿಪಿ ಪೌರ್ಣಿಮಾ ಗಾಯಕ್ವಾಡ್ ತಿಳಿಸಿದ್ದಾರೆ. ಲೋಖಂಡೆ ಮತ್ತು ಅವನ 7 ಜನ ಸಹಚರರನ್ನು ಪೊಲೀಸರು ವಿವಿಧ ಆರೋಪಗಳ ಮೇಲೆ ಬಂಧಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ