

ಇತ್ತೀಚಿನ ದಿನಗಳಲ್ಲಿ ಕಂಗನಾ ಅದ್ಯಾರ್ಯಾರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೋ ಹೇಳುವುದು ಕಷ್ಟ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೇ ಅವರಿಂದ ಶುರು ಮಾಡಿ, ಹಲವು ಗಣ್ಯರ ವಿರುದ್ಧ ಒಂದಲ್ಲಾ ಒಮದು ಕಾರಣಕ್ಕೆ ಅವರು ಹರಿಹಾಯ್ದಿದ್ದಾರೆ.
ಈಗ ಅವರ ದೃಷ್ಟಿ ಮುಂಬೈ ಪೊಲೀಸ್ ಕಮೀಷನರ್ ಪರಂ ಬೀರ್ ಸಿಂಗ್ ಅವರ ಮೇಲೂ ಬಿದ್ದಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಕಂಗನಾ, ತಮ್ಮ ಟೀಮ್ ಕಂಗನಾ ಅಕೌಂಟ್ ಮೂಲಕ ಟ್ವೀಟ್ ಮಾಡಿದ್ದಾರೆ. ಯಾರೋ ಅದಕ್ಕೆ ಸರಿಯಾಗಿ ಕಾಲೆಳೆದಿದ್ದಾರೆ. ಅದಕ್ಕೆ ಮುಂಬೈ ಪೊಲೀಸ್ ಕಮೀಷನರ್ ಖಾತೆಯಿಂದ ಲೈಕ್ ಒತ್ತಲಾಗಿದೆ.
ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಟ್ವಿಟರ್ ನೋಡಿಕೊಳ್ಳುವುದಕ್ಕೆಂದೇ ಜನ ಇರುತ್ತಾರೆ. ಬಹುಶಃ ಅವರಿಂದ ಹೀಗಾಯಿತೋ ಅಥವಾ ಮುಂಬೈ ಕಮಿಷನರ್ ಅವರೇ ಲೈಕ್ ಒತ್ತಿದರೋ ಗೊತ್ತಿಲ್ಲ. ಈ ವಿಷಯ ಕಂಗನಾ ಅವರನ್ನು ಸಿಕ್ಕಾಪಟ್ಟೆ ಕೆರಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಸುಶಾಂತ್ ಪರವಾಗಿ ನಾನು ಫೈಟ್ ಮಾಡಿ, ನ್ಯಾಯ ಕೇಳುವುದು ಹಲವರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಅದೇ ಕಾರಣಕ್ಕೆ ನನ್ನ ಬಗ್ಗೆ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ. ವಿಚಿತ್ರ ಎಂದರೆ ಕಮಿಷನರ್ ಅವರೇ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಾಚಿಕೆ ಆಗಬೇಕು' ಎಂದು ಕಂಗನಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕಮಿಷನರ್ ಲೈಕ್ ಮಾಡಿದ ಸ್ಕ್ರೀನ್ಶಾಟ್ಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಮುಂಬೈ ಕಮಿಷನರ್ ಅವರೇ, ಅವಹೇಳನಕಾರಿಯಾಗಿ ಮಾತನಾಡುವವರನ್ನು ಪ್ರೋತ್ಸಾಹಿಸುತ್ತಿದ್ದರೆ, ತಮಗೆ ಭದ್ರತೆ ಎಲ್ಲಿ ಎಂದು ಪ್ರಶ್ನಿಸಿರುವ ಅವರು, 'ಕಮಷಿನರ್ ಅವರೇ ಇಂಥದ್ದಕ್ಕೆಲ್ಲಾ ಪ್ರೋತ್ಸಾಹ ಕೊಡುತ್ತಿದ್ದರೆ, ನಾನು ಮುಂಬೈನಲ್ಲಿ ಸುರಕ್ಷಿತವಾಗಿ ಇರುವುದಕ್ಕೆ ಸಾಧ್ಯವಾ? ನನ್ನ ರಕ್ಷಣೆಗೆ ಯಾರು ಜವಾಬ್ದಾರಿ' ಎಂದು ಅವರು ಪ್ರಶ್ನಿಸಿದ್ದಾರೆ.