

ತಿರುಪತಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವಿರುದ್ಧ ಆಗಾಗ ಚಿತಾವಣೆಗಳು ನಡೆಯುವುದು ಹೊಸದೇನಲ್ಲ. ಅದು ಹಿಂದುಪರ ನಿಲುವುಗಳನ್ನು ಹೊಂದಿದೆ ಎಂಬ ಕಾರಣಕ್ಕೆ, ಅದು ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂಬ ವಿಷಯಕ್ಕೆ ಆಗಾಗ ಕೆಲ ವಿರೋಧಿಗಳ ಅಸಮಾಧಾನಕ್ಕೆ ಗುರಿಯಾಗುತ್ತಿರುವುದೂ ಹೊಸದೇನಲ್ಲ.
ಇಷ್ಟು ದಿನ ಆರ್ಎಸ್ಎಸ್ ವಿರುದ್ಧ, ಅದರ ಸ್ವಯಂಸೇವಕರ ವಿರುದ್ಧ ವ್ಯಕ್ತವಾಗುತ್ತಿದ್ದ ವಿರೋಧ ಇದೀಗ ಅದರ ಸ್ಟಿಕ್ಕರ್ನವರೆಗೂ ಬಂದುಬಿಟ್ಟಿದೆಯಾ ಎಂಬ ಅನುಮಾನ ಮೂಡಲಾರಂಭಿಸಿದೆ. ಏಕೆಂದರೆ ವಾಹನದ ಮೇಲೆ ಆರ್ಎಸ್ಎಸ್ ಕುರಿತ ಸ್ಟಿಕ್ಕರ್ ಇದೆ ಎಂಬ ಕಾರಣಕ್ಕೇ ತಿರುಮಲಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ತಿರುಪತಿಯ ಅಲಿಪಿರಿ ನಿಲ್ದಾಣದಲ್ಲಿ ತಾವು ಹೋಗುತ್ತಿದ್ದ ವಾಹನವನ್ನು ತಡೆದು, ಅದರಲ್ಲಿದ್ದ ಆರ್ಎಸ್ಎಸ್ ಸ್ಟಿಕ್ಕರ್ ತೆಗೆದರಷ್ಟೇ ತಿರುಮಲಕ್ಕೆ ಪ್ರವೇಶಿಸಲು ಬಿಡುವುದಾಗಿ ಹೇಳಿದ್ದಾರೆ ಎಂದು ವ್ಯಕ್ತಿಯೊಬ್ಬರು ವಿಡಿಯೋ ಮೂಲಕ ನೋವು ತೋಡಿಕೊಂಡಿದ್ದಾರೆ. ಆರ್ಎಸ್ಎಸ್ ಕ್ರಿಶ್ಚಿಯನ್ ಅಥವಾ ಮುಸ್ಲಿಂ ಸಂಘಟನೆಯಲ್ಲ. ಆರ್ಎಸ್ಎಸ್ ಬಿಜೆಪಿ ಥರ ರಾಜಕೀಯ ಪಕ್ಷವೂ ಅಲ್ಲ. ಹೀಗಿದ್ದೂ ಯಾಕೆ ಪ್ರವೇಶಿಸಲು ಬಿಡುತ್ತಿಲ್ಲ, ಯಾಕೆ ತಿರುಮಲದಲ್ಲಿ ಹಿಂದೂಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಅಸಮಾಧಾನ ಹೊರಹಾಕಿರುವ ವಿಡಿಯೋ ದೃಶ್ಯಾವಳಿ ಇದೀಗ ವೈರಲ್ ಆಗಿದೆ.