

ಅವಿನಾಶ ಮೂಡಂಬಿಕಾನ ಬೆಂಗಳೂರು
ರಾಜಧಾನಿಯಲ್ಲಿ ಬಯಲಾಗಿರುವ ಡ್ರಗ್ಸ್ ಮಾಫಿಯಾದ ಕಮಟು ಸ್ಯಾಂಡಲ್ವುಡ್ಗೆ ವಿಸ್ತರಿಸಿದ ಬೆನ್ನಲ್ಲೇ ಈ ಕರಾಳ ದಂಧೆ ಕರೊನಾ ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ಸಕ್ರಿಯವಾಗಿತ್ತೆಂಬ ಮತ್ತೊಂದು ಅಂಶ ಬೆಳಕಿಗೆ ಬಂದಿದೆ.
ಕರೊನಾ ಲಾಕ್ಡೌನ್ ಅವಧಿಯಲ್ಲಿ ಡ್ರಗ್ಸ್ ಮತ್ತು ಆಲ್ಕೋಹಾಲ್ ಸ್ಮಗ್ಲಿಂಗ್ ದಂಧೆಯಡಿ ಕರ್ನಾಟಕ ಸೇರಿ ದೇಶಾದ್ಯಂತ ಸಾವಿರಾರು ಕೋಟಿ ರೂ. ವಹಿವಾಟು ನಡೆದಿರುವ ವಿಚಾರ ಮಾದಕ ವಸ್ತು ನಿಗ್ರಹ ದಳ (ನಾಕೋಟಿಕ್ ಕಂಟ್ರೋಲ್ ಬ್ಯೂರೋ) ಹಾಗೂ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಮಾಫಿಯಾ ಜತೆಗೆ ಸ್ಯಾಂಡಲ್ವುಡ್ ನಟ, ನಟಿಯರ ನಂಟಿತ್ತೆಂಬ ಸ್ಪೋಟಕ ಸಂಗತಿಯೂ ಮೇಲ್ನೋಟಕ್ಕೆ ಸಾಬೀತಾಗಿದೆ.
ಕರ್ನಾಟಕ, ಒಡಿಶಾ, ಗುಜರಾತ್, ಉತ್ತರ ಪ್ರದೇಶ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್ನಲ್ಲಿ ದಂಧೆ ಹೆಚ್ಚಾಗಿ ನಡೆದಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಲಾಕ್ಡೌನ್ ಸಂದರ್ಭದಲ್ಲಿ (ಏಪ್ರಿಲ್ನಿಂದ ಮೇವರೆಗೆ) ಎನ್ಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಲಾಕ್ಡೌನ್ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ಅಂತಾರಾಜ್ಯವಾಗಿ ವಾಹನಗಳ ಓಡಾಟಕ್ಕೆ ಕೊಟ್ಟಿದ್ದ ವಿನಾಯಿತಿಯನ್ನು ಸ್ಮಗ್ಲರ್ಗಳು ದುರ್ಬಳಕೆ ಮಾಡಿಕೊಂಡು, ಈ ವಾಹನಗಳಲ್ಲಿ ಮಾದಕ ವಸ್ತುಗಳು ಹಾಗೂ ಮದ್ಯ ಕಳ್ಳಸಾಗಣೆ ಮಾಡಿರುವುದು ಎನ್ಸಿಬಿ ತನಿಖೆಯಲ್ಲಿ ದೃಢಪಟ್ಟಿದೆ.
20-30 ಪಟ್ಟು ಹೆಚ್ಚು ಬೆಲೆ: ಲಾಕ್ಡೌನ್ ವೇಳೆ ಸರಕು ವಾಹನಗಳಲ್ಲಿ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದ ವಿವಿಧ ಬಗೆಯ ಡ್ರಗ್ಗಳು ಸ್ಯಾಂಡಲ್ವುಡ್ನ ಕೆಲ ಖ್ಯಾತ ನಟ, ನಟಿಯರು ಹಾಗೂ ಕಿರುತೆರೆಯ ಕೆಲ ಕಲಾವಿದರ ಕೈ ಸೇರಿರುವುದಾಗಿ ಹೇಳಲಾಗುತ್ತಿದೆ. ಇವರು ಹೆಚ್ಚಿನ ಬೆಲೆಗೆ ಡ್ರಗ್ಸ್ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಇವರ ಬೇಡಿಕೆಗೆ ಅನುಗುಣವಾಗಿ ಪೆಡ್ಲರ್ಗಳು ಕೋಟ್ಯಂತರ ರೂ. ಮೌಲ್ಯದ ವಿದೇಶಿ ಡ್ರಗ್ಗಳನ್ನೂ ಪೂರೈಸಿದ್ದರು. ಲಾಕ್ಡೌನ್ ವೇಳೆ, ಡ್ರಗ್ಸ್ ಹಾಗೂ ಆಲ್ಕೋಹಾಲ್ಗೆ ದಾಸರಾಗಿದ್ದವರನ್ನು ಟಾರ್ಗೆಟ್ ಮಾಡಿದ್ದ ಪೆಡ್ಲರ್ಗಳು ಹೊರ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿದ್ದರು. ಇವರಿಗೆ 20 ರಿಂದ 30 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿ ಕೋಟ್ಯಂತರ ರೂ. ಸಂಪಾದಿಸಿದ್ದಾರೆಂದು ಹೇಳಲಾಗುತ್ತಿದೆ.
1 ತಿಂಗಳು 100 ಕೆಜಿ ವಶ!: ಕರ್ನಾಟಕ ಸೇರಿ ದೇಶದ ವಿವಿಧೆಡೆ ಒಂದು ತಿಂಗಳಲ್ಲಿ 60 ಕೆ.ಜಿ ಅಫೀಮು, 6 ಸಾವಿರಕ್ಕೂ ಅಧಿಕ (ಮಾರಾಟ ನಿಷೇಧಿತ) ಟ್ಯಾಬ್ಲೆಟ್, 840 ಕೊಡೆನ್ ಬಾಟಲಿ (ಕೆಮ್ಮಿನ ಸಿರಪ್)ಗಳು ಸೇರಿ 100 ಕೆ.ಜಿಗೂ ಅಧಿಕ ವಿವಿಧ ಬಗೆಯ ಮಾದಕ ವಸ್ತುಗಳನ್ನು ಎನ್ಸಿಬಿ ಜಪ್ತಿ ಮಾಡಿದೆ. ಆಯಾ ರಾಜ್ಯಗಳ ಸ್ಥಳೀಯ ಪೊಲೀಸರು ಕೂಡ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಲಾಕ್ಡೌನ್ ವೇಳೆ ಬಿಗಿ ಪೊಲೀಸ್ ಪಹರೆ ನಡುವೆಯೂ ಸುಮಾರು 2 ಸಾವಿರ ಕೋಟಿ ರೂ. ಡ್ರಗ್ಸ್ ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಗತ್ಯ ವಸ್ತುಗಳ ಸಾಗಾಟ ವಾಹನಗಳಲ್ಲೇ ಮದ್ಯವನ್ನು ಸರಬರಾಜು ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಟ್ ಕಾಯಿನ್ ದಂಧೆ: ಇತ್ತೀಚೆಗೆ ಬೆಂಗಳೂರಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ ನಾಲ್ವರು ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರರಿಂದ 1.25 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಇವರು ಅಂತಾರಾಷ್ಟ್ರೀಯ ಜಾಲದ ಸಂಪರ್ಕದಿಂದ ಡಾರ್ಕ್ ವೆಬ್ಸೈಟ್ನಲ್ಲಿ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ಖರೀದಿಸುತ್ತಿದ್ದರು. ವಿದೇಶಗಳಿಂದ ಕೊರಿಯರ್ ಮುಖಾಂತರ ಡ್ರಗ್ಸ್ ಬರುತ್ತಿತ್ತು. ಲಾಕ್ಡೌನ್ ವೇಳೆ ಕಾಗೋ ವಿಮಾನಗಳ ಸಂಚಾರಕ್ಕೆ ಅಡ್ಡಿಯಿರಲಿಲ್ಲ. ಈ ಅವಧಿಯಲ್ಲೇ ಆರೋಪಿಗಳು 2 ಸಾವಿರ ಎಲ್ಎಸ್ಡಿ ಇನ್ನಿತರ ಡ್ರಗ್ಸ್ಗಳನ್ನು ನೆದರ್ಲ್ಯಾಂಡ್ನಿಂದ ಖರೀದಿಸಿದ್ದರು. ಅದನ್ನು ಚಿಕ್ಕಬಾಣಾವರದ ಮನೆಯಲ್ಲಿ ದಾಸ್ತಾನು ಮಾಡಿ ನಗರದ ಗ್ರಾಹಕರಿಗೆ ಮಾರಾಟ ಮಾಡಲು ಸಜ್ಜಾಗಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಗೋವಾ, ಮುಂಬೈ, ಕೇರಳ ಇನ್ನಿತರ ರಾಜ್ಯಗಳಿಗೂ ಸರಬರಾಜು ಆಗುತ್ತಿತ್ತು. ಸ್ಯಾಂಡಲ್ವುಡ್ಗೂ ಬಿಟ್ಕಾಯಿನ್ ದಂಧೆಗೂ ನಂಟಿದೆಯೇ ಎಂಬ ಬಗ್ಗೆ ಎನ್ಸಿಬಿ ತನಿಖೆ ನಡೆಸುತ್ತಿದೆ.
ಸಾಗಾಟಕ್ಕೆ ಹೊಸ ಮಾರ್ಗ: ಹಿಂದೆ ರೈಲು, ಬಸ್ಸು, ವಿಮಾನ, ಹಡಗುಗಳ ಮೂಲಕ ರಾಜ್ಯಗಳಿಗೆ ಡ್ರಗ್ಸ್ ಸಾಗಿಸಲಾಗುತ್ತಿತ್ತು. ಲಾಕ್ಡೌನ್ನಿಂದಾಗಿ ಈ ಸೇವೆ ನಿಲ್ಲಿಸಿದ್ದ ಪರಿಣಾಮ ಡ್ರಗ್ ಪೆಡ್ಲರ್ಗಳು ಗಾಂಜಾ, ಅಶಿಶ್, ಬ್ರೌನ್ಶುಗರ್, ಅಫೀಮು, ಹೆರಾಯಿನ್, ಕೆಟಾಮಿನ್, ಚರಸ್, ಎಂಡಿಎಂಎ ಮಾತ್ರೆ, ಎಲ್ಎಸ್ಡಿಗಳಂತಹ ಮಾದಕ ವಸ್ತುಗಳನ್ನು ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳಲ್ಲಿ ಕಳ್ಳಸಾಗಣೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟ್ರಕ್ಗಳಲ್ಲಿ ಸಿಕ್ತು ಡ್ರಗ್ಸು!: ಎನ್ಸಿಬಿ ಅಧಿಕಾರಿಗಳು ರಾಜ್ಯದ ಗಡಿಗಳಲ್ಲಿ ಸರಕು ವಾಹನ ತಪಾಸಣೆ ಮಾಡಲು ಆರಂಭಿಸಿದಾಗ ಡ್ರಗ್ಸ್ ಮಾಫಿಯಾ ಜಾಲ ಪತ್ತೆಯಾಗಿದೆ. ಇತ್ತೀಚೆಗೆ ಕರ್ನಾಟಕಕ್ಕೆ ಹೊರ ರಾಜ್ಯದಿಂದ ಬಂದಿದ್ದ ಟ್ರಕ್ವೊಂದನ್ನು ಪರಿಶೀಲಿಸಿದಾಗ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಪತ್ತೆಯಾಗಿತ್ತು.
ಬೆಂಗ್ಳೂರಲ್ಲಿ ಪತ್ತೆಯಾದ ಕೇಸ್ಗಳು 1. ವಿದೇಶಿ ಪ್ರಜೆ ಸೆರೆ: ಲಾಕ್ಡೌನ್ ವೇಳೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಚಿಬುಕಿ(20)ಎಂಬಾತನನ್ನು ಕೆ.ಆರ್.ಪುರ ಪೊಲೀಸರು ಭಟ್ಟರಹಳ್ಳಿಯಲ್ಲಿ ಬಂಧಿಸಿದ್ದರು.
2. ಪರಿಚಿತರಿಗಷ್ಟೇ ಸೇಲ್: ಐವರಿನ್ ದೇಶದ ಅಸ್ಸಿ ಅಯಾ ಬಸಿಲೆ (31) ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದ. ಆರೋಪಿಯಿಂದ 50 ಗ್ರಾಂ ಕೊಕೇನ್, 13 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು.
3.ಡೋರ್ ಡೆಲಿವರಿ ಆಮಿಷ: ಲಾಕ್ಡೌನ್ ವೇಳೆ ಮನೆ ಬಾಗಿಲಿಗೇ ಡ್ರಗ್ಸ್ ತಲುಪಿಸುವ ದಂಧೆ ನಡೆಸುತ್ತಿದ್ದ 15 ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದರು. ಮೊದಲಿಗೆ ಬಾಣಸವಾಡಿಯಲ್ಲಿ ನೈಜೀರಿಯಾ ಪ್ರಜೆಯನ್ನು ಬಂಧಿಸಿ ಆತನಿಂದ 5 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಹೆಣ್ಣೂರು ಪೊಲೀಸರು ಆನಂದ ಎಂಬುವನನ್ನು ಬಂಧಿಸಿ 600 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಕೆಜೆ ಹಳ್ಳಿ ಪೊಲೀಸರು ಸೈಯದ್ ನಾಜೀಮ್ ಎಂಬಾತನಿಂದ 1 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
4. 1.25 ಕೋಟಿ ರೂ. ಮೌಲ್ಯದ ಡ್ರಗ್ಸ್: ಡಾರ್ಕ್ವೆಬ್ ಮುಖಾಂತರ ವಿದೇಶಗಳಿಂದ ಮಾದಕವಸ್ತು ತರಿಸಿಕೊಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರು ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರ ಗ್ಯಾಂಗ್ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿತ್ತು. 1.25 ಕೋಟಿ ರೂ. ಮೌಲ್ಯದ 2000 ಎಲ್ಎಸ್ಡಿ ಸ್ಟಿಪ್ಸ್, 110 ಗ್ರಾಂ ಎಂಡಿಎಂಎ, 10 ಎಕ್ಸ್ಟಸಿ ಮಾತ್ರೆ, 5 ಕೆಜಿ ಸಿಂಥೆಟಿಕ್ ಗಾಂಜಾ ಇನ್ನಿತರ ವಸ್ತುಗಳು ಜಪ್ತಿಯಾಗಿದ್ದವು.
ಕೊಡಗಲ್ಲೂ ಡ್ರಗ್ಸ್ ದಂಧೆ!: ಕೊಡಗು ಜಿಲ್ಲೆಯಲ್ಲಿ 300 ಗ್ರಾಂ ಮಾದಕ ವಸ್ತು ಸಹಿತ ಮೂವರು ದಂಧೆಕೋರರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಡಿಕೇರಿ ತಾಲೂಕು ಅಯ್ಯಂಗೇರಿ ಗ್ರಾಮದ ಮಜೀದ್ ಸೂಫಿ (35), ಶಿಯಾಬುದ್ದೀನ್ (32), ಬೆಂಗಳೂರಿನ ಶಿವಾಜಿನಗರದ ಮುಜಾಮಿಲ್ (31) ಬಂಧಿತರು. ಜಿಲ್ಲೆಯ ವಿವಿಧ ಭಾಗಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಮುಂದಾಗಿದ್ದರು. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ 2 ಕಾರುಗಳಲ್ಲಿ ಡ್ರಗ್ಸ್ನೊಂದಿಗೆ ಆರೋಪಿಗಳು ತೆರಳುತ್ತಿದ್ದರು. ತಮ್ಮನ್ನು ಕಂಡು ಪರಾರಿಯಾಗಲು ಯತ್ನಿಸಿದಾಗ ಬೆನ್ನತ್ತಿದ ಪೊಲೀಸರು ಒಂದು ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದರೆ, ಮತ್ತೊಂದು ಕಾರಿನಲ್ಲಿದ್ದವರು ಪರಾರಿಯಾದರು. ಬಂಧಿತರನ್ನು ವಿಚಾರಣೆ ನಡೆಸಿದಾಗ ಡ್ರಗ್ಸ್ ಸಾಗಣೆ ಮಾಡá-ತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಬಂಧಿತರಿಂದ 300 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಟಾಟಾ ಇಂಡಿಕಾ ಕಾರು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ಇತರ ಐವರು ಆರೋಪಿಗಳು ತಪ್ಪಿಸಿಕೊಂಡಿದ್ದು, ಪತ್ತೆಗೆ ಪೊಲೀಸ್ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.
ಸಿಸಿಬಿ ಹಾಗೂ ಎನ್ಸಿಬಿಯವರು ಒಂದೇ ದಿನ 200 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅವರಿಗೆ ಕೆಲವೊಂದು ಸುಳಿವು ಸಿಕ್ಕಿವೆ. ಈ ಪ್ರಕರಣದಲ್ಲಿ ಯಾರೇ ಇರಲಿ, ಡ್ರಗ್ಸ್ ಮಾರಾಟ, ಸೇವನೆಯ ಕಾನೂನು ಬಾಹಿರ ಕೆಲಸ ಮಾಡಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ನಿಶ್ಚಿತ. ವಿಶೇಷ ಕಾನೂನಿನಂತೆ ಜೈಲು ಶಿಕ್ಷೆ ಕೊಡಿಸುತ್ತೇವೆ. | ಬಸವರಾಜ ಬೊಮ್ಮಾಯಿ ಗೃಹಸಚಿವ ಬೆಂಗಳೂರಿನ ಡ್ರಗ್ಸ್ ಜಾಲ ಬಯಲಿಗೆಳೆಯಲು ಸಹಕರಿಸುವುದಾದರೆ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಪೊಲೀಸ್ ಇಲಾಖೆ ಎಲ್ಲ ರೀತಿಯ ರಕ್ಷಣೆ ನೀಡಲಿದೆ. ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ರಾಜ್ಯ ಪೊಲೀಸರು ಡ್ರಗ್ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ದಂಧೆಯಲ್ಲಿ ತೊಡಗಿರುವ ವಿದೇಶಿಯರನ್ನು ಮಟ್ಟ ಹಾಕುತ್ತೇವೆ. ಬೇರೆ ರಾಜ್ಯಗಳಿಂದ ಪೂರೈಕೆಯಾಗುವ ಡ್ರಗ್ಸ್ಗೆ ಕಡಿವಾಣ ಹಾಕುತ್ತೇವೆ. | ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ https://www.vijayavani.net/centre-annonced-unlock-4-guidelines/