ಪಾನಮತ್ತರಿಂದ ಕಿರುಕುಳ: ನಮ್ಮ ಮುಂದೆಯೇ ಹಸ್ತಮೈಥುನ ಮಾಡಿಕೊಂಡರು ಎಂದು ವಿದ್ಯಾರ್ಥಿನಿಯರ ಆರೋಪ

Gargi College
Published on

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾರ್ಗಿ ಕಾಲೇಜಿನಲ್ಲಿ ಫೆ. 6ರಂದು ನಡೆದ ಉತ್ಸವದ ವೇಳೆ ಪಾನಮತ್ತ ವ್ಯಕ್ತಿಗಳ ದೊಡ್ಡ ಗುಂಪೊಂದು ಕಾಲೇಜು ಆವರಣವನ್ನು ಅಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ತಡವಾಗಿ ಕೇಳಿಬಂದಿದೆ.

ಕಾಲೇಜು ಅತಿಕ್ರಮ ಪ್ರವೇಶ ಮಾಡಿದವರು ಹೊರಗಿನವರಾಗಿದ್ದು, ಶೌಚಗೃಹದಲ್ಲಿ ವಿದ್ಯಾರ್ಥಿನಿಯರನ್ನು ಲಾಕ್​ ಮಾಡಿ ಅನುಚಿತ ವರ್ತನೆ ಮಾಡಿದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮೂರು ದಿನಗಳ ಕಾಲ ನಡೆದ ಕಾಲೇಜು ಉತ್ಸವದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಾಲೇಜು ಪ್ರವೇಶಿಸುವ ಮುನ್ನ ಅಲ್ಲೇ ಹತ್ತಿರದಲ್ಲಿ ನಡೆದ ಸಿಎಎ ಪರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಏಕಾಏಕಿ ಕಾಲೇಜು ಪ್ರವೇಶಿಸಿ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಈ ಸಂಬಂಧ ಗಾರ್ಗಿ ಕಾಲೇಜಿನ ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​ ವೈರಲ್​ ಆಗಿವೆ.

ವಿದ್ಯಾರ್ಥಿನಿಯೊಬ್ಬಳು ಹೇಳಿರುವಂತೆ ಅವರೆಲ್ಲ ಪಾನಮತ್ತ ಮಧ್ಯವಯಸ್ಕ ವ್ಯಕ್ತಿಗಳು. ನಮಗೆ ಕಿರುಕುಳ ನೀಡಿದರು. ಅಲ್ಲದೆ, ನಮ್ಮ ಮುಂದೆಯೇ ಹಸ್ತಮೈಥುನ ಮಾಡಿದರು. ನನ್ನೊಂದಿಗೆ ಮೂರು ಬಾರಿ ಒರಟಾಗಿ ನಡೆದುಕೊಂಡರು. ನಾನು ಕಿರುಚಾಡಿದಾಗ ಅವರು ನೋಡಿ ನಗುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್​ನಲ್ಲಿ ವಿದ್ಯಾರ್ಥಿನಿಯರನ್ನು ಶೌಚಗೃಹದಲ್ಲಿ ಲಾಕ್​ ಮಾಡಿ ಅನುಚಿತವಾಗಿ ವರ್ತನೆ ಮಾಡಲಾಯಿತು ಎಂದು ಆರೋಪಿಸಿದ್ದಾರೆ.

ಗಾರ್ಗಿ ಕಾಲೇಜು ಆಡಳಿತ ಮಂಡಳಿ ಇನ್ನೂ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾತನಾಡಿರುವ ಪ್ರಭಾರ ಪ್ರಾಂಶುಪಾಲರಾದ ಪ್ರೊಮಿಳಾ ಕುಮಾರ್​, ಈ ಉತ್ಸವವು ದೆಹಲಿ ವಿಶ್ವವಿದ್ಯಾಲಯದ ಇತರೆ ಕಾಲೇಜಿನಲ್ಲಿ ಓದುವ ಪುರುಷರಿಗು ಮುಕ್ತವಾಗಿತ್ತು. ಉತ್ಸವ ವೇಳೆ ಪೊಲೀಸ್​, ಕಮ್ಯಾಂಡೋಸ್​ ಮತ್ತು ಬೌನ್ಸರ್​ಗಳು ಕ್ಯಾಂಪಸ್​ನಲ್ಲಿದ್ದರು, ಕಾಲೇಜು ಸಿಬ್ಬಂದಿಯೂ ಕೂಡ ಕರ್ತವ್ಯದಲ್ಲಿದ್ದರು. ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿಯೇ ಪ್ರತ್ಯೇಕ ರಂಗಸ್ಥಳವು ಇತ್ತು. ಒಂದು ವೇಳೆ ಹೊರಗಿನವರು ಆಗಿದ್ದರೆ, ಅದು ಅವರು ವೈಯಕ್ತಿಕ ಆಯ್ಕೆಯೇ ಆಗಿರಬಹುದು ಎಂದು ವಿದ್ಯಾರ್ಥಿನಿಯರ ಕಡೆಯೇ ಕಾಲೇಜು ಆಡಳಿತ ಮಂಡಳಿ ಬೊಟ್ಟು ಮಾಡಿದೆ.

ಇದೇ ವೇಳೆ ಗೌಪ್ಯತೆ ಕಾಪಾಡಲು ಮನವಿ ಮಾಡಿಕೊಂಡ ವಿದ್ಯಾರ್ಥಿನಿಯೊಬ್ಬಳು ಕಿರುಕುಳದ ಆರೋಪವನ್ನು ಖಚಿತ ಪಡಿಸಲು ಸಾಧ್ಯವಿಲ್ಲ. ಆದರೆ, ಪಾನಮತ್ತ ಒಂದು ದೊಡ್ಡ ಗುಂಪು ಒಳ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದರು. ಈ ಬಗ್ಗೆ ನಾವು ಚರ್ಚೆ ನಡೆಸಿ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net