

OpenAI: ಅಮೆರಿಕಾದಲ್ಲಿ ಓಪನ್ಎಐ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದ ಭಾರತೀಯ-ಅಮೆರಿಕನ್ ಮೂಲದ 26 ವರ್ಷ ವಯಸ್ಸಿನ ಸುಚಿರ್ ಬಾಲಾಜಿ ಸಾವಿನ ಪ್ರಕರಣಕ್ಕೆ ಹಲವು ಟ್ವಿಸ್ಟ್ಗಳು ಎದುರಾಗುತ್ತಿವೆ. ಪೊಲೀಸರ ವರದಿಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಲಾಗಿದ್ದೇ ಆದರೂ ಸುಚಿರ್ ತಾಯಿ ಮಾತ್ರ ಇದು ಆತ್ಮಹತ್ಯೆಯೂ ಅಲ್ಲ, ಅನುಮಾನಸ್ಪದ ಸಾವೂ ಅಲ್ಲ. ಬದಲಿಗೆ ಉದ್ದೇಶಪೂರ್ವಕ ಕೊಲೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಹಿಂದೆ ಪುತ್ರನ ಸಾವನ್ನು ಖಂಡಿಸಿ ತನಿಖೆಗೆ ಆಗ್ರಹಿಸಿದ ಸುಚಿರ್ ಬಾಲಾಜಿ ತಾಯಿ, ಇದು ಆತ್ಮಹತ್ಯೆ ಅಲ್ಲ. ನನ್ನ ಮಗನ ಹೇಳಲು ಹೊರಟ ಸತ್ಯವನ್ನು ಅಡಗಿಸಲು ಯಾರೋ ಮಾಡಿರುವ ಕೊಲೆ ಇದಾಗಿದೆ. ಈ ಪ್ರಕರಣದಲ್ಲಿ ಎಫ್ಬಿಐ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ಪೊಲೀಸ್ ಅಧಿಕಾರಿಗಳನ್ನು ನಂಬದ ಪೂರ್ಣಿಮಾ ರಾಮರಾಂ, “ಪುತ್ರನ ಸಾವಿನ ಹಿಂದಿರುವ ಅಸಲಿ ಸಂಗತಿಯನ್ನು ಪತ್ತೆಹಚ್ಚಲು ನಾವು ಖಾಸಗಿ ತನಿಖಾಧಿಕಾರಿಯನ್ನು ನೇಮಿಸಿದ್ದೇವೆ. ಸಾವಿನ ಕಾರಣವನ್ನು ಬೆಳಕಿಗೆ ತರಲು ಎರಡನೇ ಬಾರಿಗೆ ಶವಪರೀಕ್ಷೆ ಮಾಡಿಸಿದ್ದೇವೆ. ಅಚ್ಚರಿ ಎಂದರೆ ನಾವು ಮಾಡಿಸಿದ ಶವಪರೀಕ್ಷೆಯಲ್ಲಿ ಪೊಲೀಸರು ಕೊಟ್ಟ ಕಾರಣ ಇಲ್ಲವೇ ಇಲ್ಲ. ಅದಕ್ಕೆ ವಿರುದ್ಧವಾಗಿದೆ” ಎಂಬ ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದರು. ಈಗ ಮತ್ತೊಂದು ಶಾಕಿಂಗ್ ವಿಚಾರ ಬಯಲಿಗೆಳೆದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿ ಪುತ್ರನ ಸಾವಿನ ಬಗ್ಗೆ ಮಾತನಾಡಿದ ಪೂರ್ಣಿಮಾ ರಾಮರಾಂ, "ನನ್ನ ಮಗನ ಬಳಿ ಓಪನ್ಎಐ ವಿರುದ್ಧದ ಒಂದಷ್ಟು ಡಾಂಕ್ಯೂಮೆಂಟ್ಗಳಿತ್ತು. ಅದನ್ನು ಅವನಿಂದ ವಶಪಡಿಸಿಕೊಳ್ಳಲು ಸಂಸ್ಥೆಯವರು ನಾನಾ ಕಸರತ್ತು ನಡೆಸಿದ್ದಾರೆ. ಆದರೆ. ಇದ್ಯಾವುದಕ್ಕೂ ಬಗ್ಗದ ಸುಚಿರ್ನನ್ನು ಮುಗಿಸಲು ದಾಳಿ ನಡೆಸಿ, ಅವನನ್ನು ಹತ್ಯೆಗೈದಿದ್ದಾರೆ. ಇದಕ್ಕೆ ಬಲವಾದ ಸಾಕ್ಷಿ ಅವನ ಬಳಿಯಿದ್ದ ದಾಖಲಾತಿಗಳು, ಪುತ್ರನ ಸಾವಿನ ಬಳಿಕ ಅದ್ಯಾವುದೂ ಅವನ ಬಳಿ ಇರಲಿಲ್ಲ" ಎಂದು ಸ್ಫೋಟಕ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಸುಚಿರ್ ತಾಯಿ ನೀಡಿದ ಸಂದರ್ಶನವನ್ನು ಎಲೋನ್ ಮಸ್ಕ್ ನೋಡಿ, ಅದನ್ನು ರೀ-ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ನವೆಂಬರ್ 26ರಂದು ಓಪನ್ಎಐ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದ ಭಾರತೀಯ-ಅಮೆರಿಕನ್ ಮೂಲದ 26 ವರ್ಷ ವಯಸ್ಸಿನ ಸುಚಿರ್ ಬಾಲಾಜಿ, ತಾವು ನೆಲೆಸಿದ್ದ ಸ್ಯಾನ್ ಫ್ರಾನ್ಸಿಸ್ಕೊ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಂದಿನಿಂದಲೂ ಈ ಸಾವು ಆತ್ಮಹತ್ಯೆ ಎಂದೇ ಹೇಳಲಾಗಿದ್ದೇ ಆದರೂ ಸುಚಿನ್ ಹೆತ್ತವರು ಮಾತ್ರ ಇದು ಉದ್ದೇಶಪೂರ್ವಕ ಹತ್ಯೆ, ಸಂಚು ಮಾಡಿ ಮಗನನ್ನು ಬಲಿ ಪಡೆದಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಪುತ್ರ ಸಾವಿಗೀಡಾದ ಸ್ಥಳದಲ್ಲಿ ಸಿಕ್ಕ ಒಂದಷ್ಟು ಸುಳಿವುಗಳನ್ನು ಪೋಷಕರು ತಮ್ಮ ಬಳಿ ಇರಿಸಿಕೊಂಡಿರುವುದು ಈ ಪ್ರಕರಣ ಅನುಮಾನಕ್ಕೆ ತಿರುಗಲು ಕಾರಣ.
ಸುಚಿನ್ ಆತ್ಮಹತ್ಯೆ ಎಂದು ಹೇಳಲಾಗಿರುವ ಈ ಪ್ರಕರಣದ ಹಿಂದೆ ಅನುಮಾನಗಳ ಹುತ್ತವೇ ಸೃಷ್ಟಿಯಾಗಿದ್ದು, ಅಧಿಕಾರಿಗಳು ಇದು ಆತ್ಮಹತ್ಯೆ ಬಿಟ್ಟರೆ ಬೇರೇನೂ ಅಲ್ಲ ಎಂದಿದ್ದಾರೆ. ಆದರೆ, ಅವರ ಪೋಷಕರು ಮಾತ್ರ ಇಲ್ಲ ಇದು ಸಂಚಿನ ಕೊಲೆಯೇ ಎಂದು ಬಲವಾಗಿ ಆರೋಪಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧಕರಾಗಿದ್ದ ಸುಚಿರ್ ಬಾಲಾಜಿ, ಓಪನ್ ಎಐ ಬಗ್ಗೆ ಇಡೀ ಜಗತ್ತಿಗೆ ಎಚ್ಚರಿಕೆ ರವಾನಿಸಿದ್ದರು. ಓಪನ್ ಎಐನ ಮಾದರಿಗಳು ಅನುಮತಿಯಿಲ್ಲದೆ ಇಂಟರ್ನೆಟ್‌ನಿಂದ ಸ್ಕ್ರ್ಯಾಪ್ ಮಾಡಲಾದ ಹಕ್ಕುಸ್ವಾಮ್ಯದ ವಸ್ತುಗಳ ಮೇಲೆ ತರಬೇತಿ ಪಡೆದಿವೆ ಎಂದು ಗಂಭೀರ ಆರೋಪ ಎಸಗಿದ್ದರು. ಇದು ಬಹಳ ಹಾನಿಕಾರಕ ಎಂಬುದನ್ನು ಒತ್ತಿ ಹೇಳಿದ್ದರು. ಸಂಸ್ಥೆ ವಿರುದ್ಧ ಧ್ವನಿ ಎತ್ತಿದ್ದ ಒಂದು ತಿಂಗಳ ನಂತರ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಸದ್ಯ ಹಲವು ಚರ್ಚೆ ಹಾಗೂ ಗೊಂದಲಗಳಿಗೆ ಕಾರಣವಾಗಿದೆ,(ಏಜೆನ್ಸೀಸ್).