

Mollywood: ಮೂರು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಹೆಸರಾಂತ ಮಲಯಾಳಂ ನಟ ಕೊಲ್ಲಂ ತುಳಸಿ, ಮಾಲಿವುಡ್ನ ದಿಗ್ಗಜ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಕುರಿತಂತೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ತುಳಸಿ, "ಮಮ್ಮುಟ್ಟಿ ಬಹಳ ಆಳ ಮತ್ತು ಕೌಶಲ್ಯ ಹೊಂದಿರುವ ನಟ. ಅವರ ವೃತ್ತಿಜೀವನದುದ್ದಕ್ಕೂ ಹಲವಾರು ವಿಭಿನ್ನ, ಕಣ್ಮನ ಸೆಳೆಯುವಂತ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಅಪಾರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದಾರೆ. ಆದರೆ, ವೈಯಕ್ತಿಕ ಜೀವನದಲ್ಲಿ ಮಮ್ಮುಟ್ಟಿ ಅವರು ಬಹಳ ಗಂಭೀರ ಮತ್ತು ಸಂಯಮದಿಂದ ವರ್ತಿಸುವ ವ್ಯಕ್ತಿ. ಅವರು ಸರಳ ವ್ಯಕ್ತಿಯೇ ನಿಜ. ಆದ್ರೆ, ಇದು ಯಾರಿಗೂ ಅಷ್ಟಾಗಿ ತಿಳಿಯೋದಿಲ್ಲ. ಮಮ್ಮುಟ್ಟಿ ಸೊಕ್ಕಿನಂತ ಮುಖಲಕ್ಷಣವನ್ನು ಹೊಂದಿದ್ದಾರೆ. ನೋಡಿದ ಕೆಲವರಿಗೆ ಅವರಲ್ಲಿ ಸೊಕ್ಕಿದೆ ಎನ್ನಿಸುತ್ತದೆ. ಆದರೆ, ಅದು ತಪ್ಪು ಕಲ್ಪನೆ" ಎಂದರು.
"ತಮ್ಮ ಭಾವನೆಗಳನ್ನು ಅವರು ಮರೆಮಾಚ್ಚುತ್ತಾರೆ. ಕೆಲವೊಮ್ಮೆ, ನೀವು ಗುಡ್ ಮಾರ್ನಿಂಗ್ ಎಂದು ಹೇಳಿದರೆ, ಅವರು ಅದಕ್ಕೆ ಸ್ಪಂದಿಸಬಹುದು. ಸ್ಪಂದಿಸದೆಯೂ ಇರಬಹುದು" ಎಂದರು. "ಇನ್ನು ಮೋಹನ್ ಲಾಲ್ ಅವರನ್ನು ಸುಲಭವಾಗಿ ಮಾತನಾಡಿಸಬಹುದು. ಅವರು ಸದಾ ಹರ್ಷಚಿತ್ತದಿಂದ ಕೂಡಿದ ವ್ಯಕ್ತಿ. ಲಾಲ್ ಎಲ್ಲರೊಂದಿಗೆ ನಗು ಮತ್ತು ಸರಾಗವಾಗಿ ಸಂಭಾಷಣೆ ನಡೆಸುತ್ತಾರೆ. ಬಹುತೇಕರೊಂದಿಗೆ ಅವರು ತಮಾಷೆ ಮಾಡುತ್ತಿರುತ್ತಾರೆ. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಆರಾಮದಾಯಕವಾಗಿತ್ತಾರೆ. ಇದು ಅವರ ಯಶಸ್ಸು" ಎಂದು ಹೇಳಿದರು,(ಏಜೆನ್ಸೀಸ್).