ಬಿಗ್ ಬಾಸ್​​ ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ; ಸೀಸನ್​ 12ರ ವಿನ್ನರ್​, ರನ್ನರ್​ಅಪ್​​​ ಇವರಿಬ್ಬರೇ ಅಂತಿದ್ದಾರೆ ವೀಕ್ಷಕರು | BBK12

ಬಿಗ್ ಬಾಸ್​ 12ರ ಟ್ರೋಫಿ
ಬಿಗ್ ಬಾಸ್​ 12ರ ಟ್ರೋಫಿ
Published on

ಪ್ರಮುಖ ಮುಖ್ಯಾಂಶಗಳು

  • ಬಿಗ್ ಬಾಸ್​ ಸೀಸನ್​ 12ರ ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ
  • ಯಾರ ಮುಡಿಗೇರಲಿದೆ ಸೀಸನ್​ 12ರ ಟ್ರೋಫಿ, ಪಟ್ಟ?
  • 37 ಕೋಟಿ ಚಿಲ್ಲರೆ ಜನಗಳ ಮತ ಪಡೆದಿರುವ ಆ ವಿಜೇತರು ಯಾರು ಎಂಬುದೇ ಕೌತುಕ
  • ನೆಟ್ಟಿಗರ ಅಭಿಪ್ರಾಯಗಳ ಪ್ರಕಾರ, ಇವರಿಬ್ಬರೇ ವಿನ್ನರ್​ ಮತ್ತು ರನ್ನರ್​ಅಪ್​
ಬೆಂಗಳೂರು: ​ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಮೂರು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಇದೀಗ ಕಾರ್ಯಕ್ರಮವು ಕೊನೆಯ ಹಂತಕ್ಕೆ ತಲುಪಿದ್ದು, ಗ್ರ್ಯಾಂಡ್​ ಫಿನಾಲೆಗೆ ಕ್ಷಣಗಣನೆ ಆರಂಭಗೊಂಡಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ನೋಡುಗರಲ್ಲಿ ಖುಷಿ ನೀಡಿದೆ. ಫಿನಾಲೆ ರೇಸ್​ನಲ್ಲಿರುವ ಆರು ಫೈನಲಿಸ್ಟ್​ಗಳ ಪೈಕಿ ಯಾರ ಮುಡಿಗೆ ಸೀಸನ್​ 12ರ ಕಿರೀಟ ಸೇರಲಿದೆ ಎಂಬ ಕುತೂಹಲ ಸದ್ಯ ವೀಕ್ಷಕರಲ್ಲಿ ಕಾಡುತ್ತಿದೆ. 
ಗಿಲ್ಲಿ ನಟ, ಅಶ್ವಿನಿ, ರಘು, ಕಾವ್ಯ, ರಕ್ಷಿತಾ ಮತ್ತು ಧನುಷ್​ ಫಿನಾಲೆ ರೇಸ್​ನಲ್ಲಿದ್ದಾರೆ. ಇವರ ಪೈಕಿ ಯಾರ ಮುಡಿಗೆ ಗೆಲುವಿನ ಕಿರೀಟ ಸೇರಲಿದೆ ಎಂಬುದು ಇಂದು (ಜ.18) ಗ್ರ್ಯಾಂಡ್​ ಫಿನಾಲೆ ಸಂಚಿಕೆಯ ಕೊನೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಈ ಮುಂಚೆ, ಆರು ಫೈನಲಿಸ್ಟ್​ಗಳ ಪೈಕಿ ಯಾರಾದರೂ ಒಬ್ಬರು ಶನಿವಾರದ ಪ್ರೀ-ಫಿನಾಲೆಯಲ್ಲಿ ಎಲಿಮಿನೇಟ್​ ಆಗ್ತಾರೆ ಎಂದೇ ವೀಕ್ಷಕರು ಭಾವಿಸಿದ್ದರು. ಆದರೆ, ಮೊದಲ ಬಾರಿಗೆ ಆ ರೀತಿ ಆಗಲಿಲ್ಲ. ಆರು ಮಂದಿ ಕೂಡ ಭಾನುವಾರದ ಸಂಚಿಕೆಗೆ ತಲುಪಿದ್ದು, ವಿನ್ನರ್​ ಸ್ಥಾನಕ್ಕೆ ಜಿದ್ದಾಜಿದ್ದಿ ನಡೆಸಲಿದ್ದಾರೆ.

ಬಿಗ್ ಬಾಸ್​ ಇತಿಹಾಸದಲ್ಲೇ ಇದು ಮೊದಲು!

ಬಿಗ್ ಬಾಸ್​ ಇತಿಹಾಸದಲ್ಲೇ ಇದು ಮೊದಲು ಅನಿಸುತ್ತದೆ. ಫಿನಾಲೆಗೂ ಮೊದಲೇ ಜನರು ಇವರೇ ಗೆಲ್ತಾರೆ ಮತ್ತು ಸೀಸನ್​ 12ರ ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎಂದು ಬಹಳ ಖಚಿತವಾಗಿ ಹೇಳುತ್ತಿರುವುದು. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ, ರಸ್ತೆಬದಿ ಮತ್ತು ನಗರದ ಸರ್ಕಲ್, ಆಟೋ​ಗಳಲ್ಲಿ ಬೃಹತ್​ ಪೋಸ್ಟರ್​, ಬ್ಯಾನರ್​ಗಳನ್ನು ಹಾಕುವ ಮೂಲಕ ನಿರೀಕ್ಷೆಗೂ ಮೀರಿದ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಜನರ ಅಭಿಪ್ರಾಯ ಗಿಲ್ಲಿ ಪರವಾಗಿಯೇ ಇದೆ. ಗಿಲ್ಲಿಯೇ ವಿನ್ನರ್​ ಎಂದು ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಮೀರಿ ಅಭಿಮಾನಿಯೊಬ್ಬರು ಗಿಲ್ಲಿ ಮುಖವಿರುವ ಟ್ಯಾಟೂವನ್ನು ತಮ್ಮ ತೋಳಿನ ಮೇಲೆ ಹಾಕಿಸಿಕೊಳ್ಳುವ ಮೂಲಕ ಆತನೇ ಗೆಲ್ಲಬೇಕು ಎಂದಿದ್ದಾರೆ. 

ದಾಖಲೆಯ ವೋಟಿಂಗ್

ಕನ್ನಡದ ಬಿಗ್ ಬಾಸ್​ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚಿನ ವೋಟಿಂಗ್ ನಡೆದಿದೆ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಬಹಿರಂಗಪಡಿಸಿದರು. ಕಳೆದ ಸೀಸನ್​ನಲ್ಲಿ ವಿಜೇತ ಹನುಮಂತು ಅವರಿಗೆ 5 ಕೋಟಿ ಚಿಲ್ಲರೆ ಮತಗಳು ಬಿದ್ದಿತು. ಆ ಸಮಯಕ್ಕೆ ಇದು ದೊಡ್ಡ ದಾಖಲೆಯನ್ನು ಬರೆದಿತ್ತು. ಆದರೆ, ಸೀಸನ್ 12ರ ಮತಗಳು ಮಾತ್ರ ಹೊಸ ದಾಖಲೆ ಮಾತ್ರವಲ್ಲದೇ, ಮತ್ತೊಂದು ಆಯಾಮವನ್ನೇ ನೀಡಿದೆ. ಈ ಬಾರಿಯ ವಿನ್ನರ್​ಗೆ ಬರೋಬ್ಬರಿ 37 ಕೋಟಿ ಮತಗಳು ಬಂದಿವೆ. ಅದು ಕೇವಲ ಶುಕ್ರವಾರದ ರಾತ್ರಿಯವರೆಗಿನ ಅಪ್ಡೇಟ್​! ಶನಿವಾರದ್ದು ಸೇರಿಸಿದರೆ ಇನ್ನೂ ಹೆಚ್ಚಾಗಲಿದೆ. 
ವಿನ್ನರ್​-ರನ್ನರ್​ಅಪ್​ ಸ್ಥಾನದಲ್ಲಿ ಇವರಿಬ್ಬರ ಹೆಸರು...
ಒಂದೆಡೆ ಬಿಗ್ ಬಾಸ್​ ಸೀಸನ್​ 12ರ ವಿಜೇತರಾಗಿ ಗಿಲ್ಲಿ ನಟ ಹೊರಹೊಮ್ಮಲಿದ್ದಾರೆ ಎಂದು ಜನರು ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಅಭಿಪ್ರಾಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಮತ್ತೊಂದೆಡೆ, ಗಿಲ್ಲಿ ಮೊದಲ ಸ್ಥಾನ ಗೆದ್ದು, ಟ್ರೋಫಿ ಎತ್ತಿಹಿಡಿದರೆ, ಅವರ ನಂತರದ ಸ್ಥಾನದಲ್ಲಿ ರಕ್ಷಿತಾ ಶೆಟ್ಟಿ ಅಥವಾ ಅಶ್ವಿನಿ ಗೌಡ ಹೆಸರು ಕೇಳಿಬಂದಿದೆ. ಇದರಲ್ಲಿ ರಕ್ಷಿತಾ ಹೆಸರೇ ಹೆಚ್ಚು ಸದ್ದು ಮಾಡುತ್ತಿದೆ. ಬಿಗ್ ಬಾಸ್​ ರನ್ನರ್​ಅಪ್​ ಸ್ಥಾನ ಈಕೆಗೆ ಎಂಬ ಮಾತುಗಳೂ ಇವೆ. ಆದರೆ, ಅಧಿಕೃತ ಘೋಷಣೆಯೊಂದೇ ಇದಕ್ಕೆಲ್ಲ ಸ್ಪಷ್ಟ ಉತ್ತರ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net