

Gold: ಈಗಾಗಲೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ. ಗಡಿದಾಟಿ ಹೋಗಿದ್ದು, ಕಳೆದ ನಾಲ್ಕು ದಿನಗಳಿಂದ ಇಳಿಕೆಯತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸದ ಜೊತೆಗೆ ನಿರಾಳತೆ ತಂದಿದೆ. ಒಂದು ವಾರದ ಹಿಂದೆ ಭಾರೀ ಏರಿಕೆಯತ್ತ ಸಾಗಿದ್ದ ಗೋಲ್ಡ್ ದರ ಇದೀಗ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಕೊಳ್ಳುವವರನ್ನು ಮತ್ತೇ ಕೈಬೀಸಿ ಕರೆಯುತ್ತಿದೆ.
ಮಂಗಳವಾರ (ಆ.12) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 880 ರೂ. ಕುಸಿದಿದೆ. ಇನ್ನು 22 ಕ್ಯಾರೆಟ್ ಚಿನ್ನ 800 ರೂ. ಕಡಿಮೆಯಾಗಿದೆ. ಇದರೊಂದಿಗೆ, ಕಳೆದ ನಾಲ್ಕು ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 2 ಸಾವಿರ ರೂ. ಕಡಿಮೆಯಾಗಿ ಇಳಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ ಹತ್ತು ಡಾಲರ್ ಏರಿಕೆಯಾಗಿದೆ. ಇದರ ಪರಿಣಾಮವಾಗಿ, ಒಂದು ಔನ್ಸ್ ಚಿನ್ನ 3,353 ಡಾಲರ್ನಲ್ಲಿ ಮುಂದುವರಿದಿದೆ. ಮತ್ತೊಂದೆಡೆ, ಭಾರತದಲ್ಲಿ ಇಂದು ಬೆಳ್ಳಿಯ ಬೆಲೆ ಗಮನಾರ್ಹವಾಗಿ ಕುಸಿದಿದೆ. ಒಂದು ಕೆಜಿ ಬೆಳ್ಳಿ 2 ಸಾವಿರ ರೂ. ಕಡಿಮೆಯಾಗಿದೆ.
ರಷ್ಯಾ-ಯುಕ್ರೇನ್ ನಡುವಿನ ದೀರ್ಘಕಾಲದ ಯುದ್ಧ ಇದೀಗ ಅಂತ್ಯ ಕಾಣುವ ಹಂತಕ್ಕೆ ತಲುಪಿದೆ. ಇದು ಚಿನ್ನದ ಬೇಡಿಕೆ ಕುಸಿತಕ್ಕೆ ಪರೋಕ್ಷವಾಗಿ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಇದೇ ಆಗಸ್ಟ್ 15ರಂದು ಅಮೆರಿಕಾದ ಅಲಾಸ್ಕಾದಲ್ಲಿ ಮುಖಾಮುಖಿ ಭೇಟಿಯಾಗಲಿದ್ದಾರೆ. ಇದರಲ್ಲಿ, ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಇಬ್ಬರೂ ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಮಾತುಕತೆಗಳು ಯಶಸ್ವಿಯಾದರೆ, ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಅದೇ ಸಮಯದಲ್ಲಿ, ಟ್ರಂಪ್ ಭಾರತದ ಮೇಲೆ ವಿಧಿಸಿರುವ ಸುಂಕವನ್ನು ಕಡಿತಗೊಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದೇನಾದರೂ ಸಂಭವಿಸಿದ್ದಲ್ಲಿ, ಚಿನ್ನದ ದರ ಮತ್ತಷ್ಟು ಕುಸಿಯುತ್ತದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).