

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಎಲ್‌ಎಲ್‌ಬಿ ಪ್ರವೇಶಾತಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು ನೀಡದಿರಲು ತನ್ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಯು) ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ತಮಗೆ ಮೂರು ವರ್ಷದ ಕಾನೂನು ಪದವಿ(ಎಲ್‌ಎಲ್‌ಬಿ) ಪ್ರವೇಶಾತಿ ನಿರಾಕರಿಸಿರುವ ಎನ್‌ಎಲ್‌ಎಸ್‌ಯು ಕ್ರಮ ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಯಾದ ಮುಗಿಲ್ ಅನ್ಬು ವಸಂತ್ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ಎನ್‌ಎಲ್‌ಎಸ್‌ಯು ಹೈಕೋರ್ಟ್‌ಗೆ ಈ ಮಾಹಿತಿ ನೀಡಿದೆ.
ಎನ್‌ಎಲ್‌ಎಸ್‌ಯು ಮೀಸಲಾತಿ ಪ್ರಕಾರ, ಪರಿಶಿಷ್ಟ ಜಾತಿಯವರೆಗೆ ಶೇ.೧೫ರಷ್ಟು, ಪರಿಶಿಷ್ಟ ಪಂಗಂಡದವರಿಗೆ ಶೇ.೭.೫ರಷ್ಟು, ಹಿಂದುಳಿದ ವರ್ಗದವರಿಗೆ ಶೇ.೨೭ರಷ್ಟು, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.೧೦ರಷ್ಟು, ಶೇ.೫ರಷ್ಟು ವಿಕಲಚೇತನರಿಗೆ ಶೇ.೩೦ರಷ್ಟು ಮಹಿಳೆಗೆ ಮತ್ತು ಶೇ.೨೫ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಹೀಗಾಗಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸದಿರಲು ವಿವಿಯ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಮೇಲಾಗಿ, ಮೀಸಲಾತಿಯನ್ನು ಸೂಚಿಸುವುದು ಮತ್ತು ಅನುಷ್ಠಾನಗೊಳಿಸುವುದು ವಿವಿಯ ಪರಾಮಾಧಿಕಾರವೆಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರಲ್ಲಿ ಆದೇಶಿಸಿದೆ ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ, ಅರ್ಜಿದಾರರ ಯಾವುದೇ ಹಕ್ಕನ್ನು ವಿಶ್ವವಿದ್ಯಾಲಯವು ಉಲ್ಲಂಘನೆ ಮಾಡಿಲ್ಲ. ಅವರ ವಿಚಾರದಲ್ಲಿ ತಾರತಮ್ಯ ನೀತಿ ಸಹ ಅನುಸರಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು:
ಎನ್‌ಎಲ್‌ಎಸ್‌ಟಿ-ಎಲ್‌ಎಲ್‌ಬಿ ೨೦೨೩ರ ಮಾರ್ಗಸೂಚಿಯಲ್ಲಿ ಕಾನೂನು ಪದವಿ ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲು ಒದಗಿಸುವ ಬಾಧ್ಯತೆ ಹೊಂದಿಲ್ಲ. ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ಕಾಯ್ದೆ-೨೦೧೯ ಮತ್ತು ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ಅಧಿನಿಯಮಗಳು-೨೦೨೦ರ ಪ್ರಕಾರ ತೃತೀಯ ಲಿಂಗಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವುದಿಲ್ಲ. ಆದರೆ ಅವರ ಪ್ರವೇಶ, ಒಳಗೊಳ್ಳುವಿಕೆ ಮತ್ತು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಬೆಂಬಲಿಸಲು ‘ಪ್ರಗತಿಪರವಾದ ಲಿಂಗ ನೀತಿ’ ಜಾರಿಗೆ ತಂದಿದೆ ಎಂದು ಹೇಳಿಕೊಂಡಿದೆ.ಈ ಆಕ್ಷೇಪಣೆ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ಅಶೋಕ್ ಎ.ಕಿಣಗಿ ಅವರ ಪೀಠವು ಪ್ರಕರಣ ಸಂಬಂಧ ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.