ನಿಮ್ಮನ್ನು ನೋಡಿಕೊಳ್ಳುವವರಿರುತ್ತಾರೆ

Care Taker
Published on

ನನಗೆ ಯಾವುದು ಸುಖ ನೀಡುತ್ತದೊ ಅದನ್ನು ಮಾತ್ರ ಮಾಡುತ್ತೇನೆ ಎಂದರೆ ಪ್ರಯೋಜನ ಇಲ್ಲ. ಕೇವಲ ಸುಖವನ್ನು ಅರಸುತ್ತಾ ಹೋಗುವವರು ನಾಶವಾಗುತ್ತಾರೆ. ಇತರರಿಗೆ ಸೇವೆ ಮಾಡುವವರು ಹೊಳೆಯುತ್ತಾರೆ. ಪ್ರತಿನಿತ್ಯ ಧ್ಯಾನ ಮಾಡಿ ನಿಮ್ಮ ಆಂತರ್ಯದ ಸಂತೋಷವನ್ನು ಕಂಡುಕೊಳ್ಳಿ.

ಶ್ರೀ ಸ್ಫೂರ್ತಿ
ಹಿರಿಯರಾದವರು, ತಾವು ಮತ್ತೊಬ್ಬರ ಮೇಲೆ ಅವಲಂಬಿ ಗಳಾಗಿದ್ದೇವೆ, ಆದ್ದರಿಂದ ಸ್ವತಂತ್ರರಾಗಿಬಿಡಬೇಕು ಎಂದು ದುಃಖಿಸುತ್ತಿರುತ್ತಾರೆ. ನೋಡಿ, ಇದುವರೆಗೂ ಯಾವ ಮಗುವೂ ಸ್ವತಂತ್ರವಾಗಿಲ್ಲ. ನೀವು ಮಗುವಾಗಿದ್ದಾಗ ನಿಮ್ಮನ್ನು ಹೆತ್ತವರು ನಿಮ್ಮನ್ನು ನೋಡಿಕೊಂಡರು. ಮುದಿತನದಲ್ಲಿ ನಿಮ್ಮ ಮಕ್ಕಳು ಅಥವಾ ಬೇರೆ ಯಾರೋ ನಿಮ್ಮನ್ನು ನೋಡಿಕೊಳ್ಳುತ್ತಾರೆ. ಆದ್ದರಿಂದ ಆರಂಭದಿಂದ ಕೊನೆಯವರೆಗೂ ಜೀವನವು ಅವಲಂಬಿಯಾಗಿದೆ. ಇದರ ನಡುವೆ ನಾವು ಸ್ವತಂತ್ರರು ಎಂದುಕೊಂಡರೂ, ಅನೇಕ ವಿಷಯಗಳ ಮೇಲೆ ಅವಲಂಬಿಗಳಾಗಿದ್ದೇವೆ. ನಿಮ್ಮ ಗಮನವೆಲ್ಲಾ ದೈವದ ಮೇಲಿದ್ದರೆ ನೀವು ಅವಲಂಬನೆಯ ಹೊರೆಯನ್ನು ಅನುಭವಿಸುವುದಿಲ್ಲ ಅಥವಾ ಸ್ವತಂತ್ರರಾಗಬೇಕೆಂಬ ಆಶಾಭಂಗ, ಚಡಪಡಿಕೆಯೂ ಇರುವುದಿಲ್ಲ. ಎರಡೂ ಮಾಯವಾಗುತ್ತವೆ.

ನಿಮ್ಮಲ್ಲಿ ಬೆಳೆಸಿಕೊಂಡಿರುವ ಅಸುರಕ್ಷತೆಯ ಭಾವವನ್ನು ಹೊರಕ್ಕೆಸೆದು ಸುಟ್ಟುಬಿಡಿ. ನಿಮ್ಮ ಮಕ್ಕಳೇ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದುಕೊಳ್ಳಬೇಡಿ. ನಿಮ್ಮ ಕೊನೆಯ ಉಸಿರನ್ನು ಬಿಡುತ್ತಿರುವಾಗ ನಿಮ್ಮ ಕೆಲಸದವರೊ ಅಥವಾ ಪಕ್ಕದ ಮನೆಯವರೊ ಬಂದು ಸಹಾಯಮಾಡಬಹುದು.

ಯಾರಿಗೆ ಗೊತ್ತು? ಯಾರೇ ನಿಮಗೆ ಸಹಾಯ ಮಾಡಿದರೂ ಭಗವಂತನೇ ಬಂದು ನಿಮಗೆ ಆ ರೂಪದಲ್ಲಿ ಸಹಾಯ ಮಾಡುತ್ತಿದ್ದಾನೆ ಅಷ್ಟೇ. ನಿಮಗೆ ಸಹಾಯ ಮಾಡುವ ಹೊಣೆಯನ್ನು ಆ ದೈವೀ ಶಕ್ತಿಗೆ ಕೊಟ್ಟುಬಿಡಿ. ನಿಮಗೆ ಯಾವಾಗ ಅವಶ್ಯಕವೊ ಆಗ, ಯಾವುದೇ ರೂಪದಲ್ಲಿ ಬಂದು ನಿಮಗೆ ಸಹಾಯ ಮಾಡಲಿ. ಯಾರ ಸಹಾಯದಿಂದಲೂ ನೀವು ಮುಜುಗರ ಪಡಬೇಕಿಲ್ಲ ಅಥವಾ ಹೊರೆಯನ್ನು ಅನುಭವಿಸಬೇಕಿಲ್ಲ ತಿಳಿಯಿತೆ? ಇದೊಂದು ದೊಡ್ಡ ಸಮಸ್ಯೆ. ಇತರರು ನಮಗೆ ಸಹಾಯ ಮಾಡಿದರೆ ಅದೊಂದು ಹೊರೆ ಎಂದು ಭಾವಿಸುತ್ತೇವೆ. ಇತರರ ಮೂಲಕ ನಿಮಗೆ ಸಹಾಯ ಮಾಡುತ್ತಿರುವುದು ಭಗವಂತನೇ. ಈ ತಿಳಿವಳಿಕೆ ಇದ್ದರೆ, ಅದ್ವೈತದ ಜ್ಞಾನವಿದ್ದರೆ, ಆಗ ನೀವು ಸುಂದರವಾಗಿ ಅರಳುವುದನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ.

ನಾನು ಯೋಗ್ಯವಾದ ವ್ಯಕಿ; ನನಗೆಲ್ಲವೂ ಬರಬೇಕು ಎಂದುಕೊಂಡರೆ ಸಮಸ್ಯೆಗಳು ಬರುತ್ತವೆ, ದೂರುಗಳು ಬರುತ್ತವೆ. ಆಗ ನಿಮ್ಮ ಯೋಗ್ಯತೆಯೂ ಕಡಿಮೆಯಾಗುತ್ತದೆ. ದೂರುಗಳು ಕೊನೆಗೊಂಡಾಗ ಸರಳತೆ, ಸುಲಭತೆ, ವಿನಮ್ರತೆ ಮೂಡುತ್ತದೆ. ನಮಗೇನು ಬರಬೇಕು ಅದಕ್ಕಿಂತಲೂ ಹೆಚ್ಚಾಗಿ ಆಶೀರ್ವದಿಸಲ್ಪಟ್ಟೆವೆಂದು ಭಾವಿಸಿದಾಗ ಕೃತಜ್ಞತೆಯು ಉಕ್ಕುತ್ತದೆ. ಆಗ ಎಲ್ಲವೂ ನಿಮ್ಮ ಬಳಿಗೆ ತಾನಾಗಿಯೇ ಬರಲಾರಂಭಿಸುತ್ತದೆ. ನಿಮಗೆಲ್ಲಾ ಬರಬೇಕೆಂದು ತಗಾದೆ ಮಾಡಲಾರಂಭಿಸಿದರೆ, ನಿಮ್ಮೊಳಗಿರುವ ಏನೋ ಒಂದು ಸಣ್ಣದಾಗುತ್ತದೆ. ನಾವು ಮಾಡಿರುವ ಪರಿಶ್ರಮಕ್ಕೆ ಪುರಸ್ಕರಿಸಬೇಕು, ತಮಗೆ ಸಂಬಳ ಕೊಡಬೇಕು ಎಂದು, ಓರ್ವ ನೌಕರರ ಸ್ಥಾನದಲ್ಲಿ ನಿಂತು ತಗಾದೆ ಮಾಡಿದಂತಿರುತ್ತದೆ. ತಗಾದೆ ಮಾಡದೆ ಭಗವಂತ ಆಶೀರ್ವದಿಸಿದ್ದಾನೆ ಎಂದು ಭಾವಿಸಿದರೆ, ನಿಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ.

ಒಂದು ದಿನ ಓರ್ವ ಮಹಿಳೆ, ನಾನೇಕೆ ನನ್ನ ಪತಿಯನ್ನು, ಮಕ್ಕಳನ್ನು, ಕುಟುಂಬವನ್ನು ನೋಡಿಕೊಳ್ಳಬೇಕು? ನನಗೆ ವಯಸ್ಸಾದ ಮೇಲೆ ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಏನು ಖಾತ್ರಿ? ಎಂದು ಕೇಳಿದರು. ನಿಮ್ಮ ಹೆತ್ತವರು ನಿಮ್ಮ ಬಗ್ಗೆ ಈ ರೀತಿಯಾಗಿ ಆಲೋಚಿಸಿದ್ದರೆ ಇಂದು ನಿಮ್ಮ ಗತಿ ಏನಾಗುತ್ತಿತ್ತೆಂದು ಆಲೋಚಿಸಿ! ನಾನು ಯಾರು? ಎಂಬ

ಪ್ರಶ್ನೆಯನ್ನಿಟ್ಟುಕೊಂಡು ಆಧ್ಯಾತ್ಮಿಕ ಪಥದಲ್ಲಿ ಮುಂದುವರಿ ಯಿರಿ. ಆದರೆ ನಿಮ್ಮ ಕುಟುಂಬದ, ಮಕ್ಕಳ ಜವಾಬ್ದಾರಿ ಯನ್ನು ನಿಭಾಯಿಸಿ ಮತ್ತದನ್ನು ಪೂರ್ಣ ಪ್ರಾಮಾಣಿಕತೆಯಿಂದ ಮಾಡಿ. ನನಗೆ ಯಾವುದು ಸುಖ ನೀಡುತ್ತದೊ ಅದನ್ನು ಮಾತ್ರ ಮಾಡುತ್ತೇನೆ ಎಂದರೆ ಪ್ರಯೋಜನವಿಲ್ಲ. ಕೇವಲ ಸುಖವನ್ನು ಅರಸುತ್ತಾ ಹೋಗುವವರು ನಾಶವಾಗುತ್ತಾರೆ. ಇತರರಿಗೆ ಸೇವೆ ಮಾಡುವವರು ಹೊಳೆಯುತ್ತಾರೆ. ನಿಮ್ಮ ಕುಟುಂಬವನ್ನು, ಮಕ್ಕಳನ್ನು

ಒಂದಾಗಿಡಿ. ಪ್ರತಿನಿತ್ಯ ಧ್ಯಾನ ಮಾಡಿ ನಿಮ್ಮ ಆಂತರ್ಯದ ಸಂತೋಷವನ್ನು ಕಂಡುಕೊಳ್ಳಿ. ನಿಮ್ಮ ಮಕ್ಕಳಿಂದ ಏನನ್ನೂ ಎದುರು ನೋಡಬೇಡಿ. ಈ ರೀತಿಯ ಪ್ರಶ್ನೆ ಮನಸ್ಸಿನಲ್ಲಿ ಸುಮ್ಮನೆ ಏಳುವುದಿಲ್ಲ. ಇಂದಿನ ದಿನದ ಧಾರಾವಾಹಿಗಳನ್ನು ನೋಡಿ, ನೋಡಿ ಅಥವಾ ಬೇರೆ ಯಾವುದೋ ಭಯ ಮನಸ್ಸಿನಲ್ಲಿ ಮೂಡಿದಾಗ ಹೀಗನಿಸುತ್ತದೆ. ನಿಮ್ಮ ಮಕ್ಕಳಿಗೆ ನೆರವೇರಿಸಬೇಕಾದ ಕರ್ತವ್ಯವನ್ನು ನೆರವೇರಿಸಿ ಮತ್ತು ನಿಮ್ಮನ್ನು ನೋಡಿಕೊಳ್ಳಲು ಭಗವಂತನಿದ್ದಾನೆಂದು ತಿಳಿಯಿರಿ. ನಿಮ್ಮನ್ನು ಮಕ್ಕಳು ಭವಿಷ್ಯದಲ್ಲಿ ನೋಡಿಕೊಳ್ಳಲಿ ಎಂಬ ಸಲುವಾಗಿ ನೀವು ಮಕ್ಕಳಿಗೆ ಜನ್ಮ ನೀಡಿಲ್ಲ. ಅದೇ ನಿಮ್ಮ ಉದ್ದೇಶವಾಗಿದ್ದರೆ, ನೀವು ತಪ್ಪಾಗಿ ತಿಳಿದಿದ್ದೀರಿ. ಯಾವುದೇ ತಾಯಿಯ, ಹೆತ್ತವರ ಮನದಲ್ಲಿ ಈ ಆಲೋಚನೆ ಇರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net