ಮುಂದಿನ ಮೂರು ದಶಕಗಳವರೆಗೆ ವಿದ್ಯುತ್ ಸಮಸ್ಯೆ ತಲೆದೋರಲ್ಲ

IMG-20250906-WA0089
ನುಗ್ಗೇಹಳ್ಳಿ ಹೋಬಳಿಯ ತೆಂಕನಹಳ್ಳಿ ಗ್ರಾಮದ ವಿವಿಧ ಬಡಾವಣೆಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಮಹದೇವ್, ಸಂಪತ್‌ಕುಮಾರ್, ಕೃಷ್ಣೇಗೌಡ, ಹೇಮಂತ್ ಇದ್ದರು.
Published on

ನುಗ್ಗೇಹಳ್ಳಿ: ತಾಲೂಕಿನಲ್ಲಿ ಮುಂದಿನ ಮೂರು ದಶಕಗಳವರೆಗೆ ವಿದ್ಯುತ್ ಸಮಸ್ಯೆ ಪರಿಹಾರ ಮಾಡಲು ಸರ್ಕಾರದಿಂದ 220 ಕೆವಿ ರಿಸೀವ್ ಸ್ಟೇಷನ್‌ಗೆ ಅನುಮೋದನೆ ದೊರೆತಿದೆ. ಇದರಿಂದ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ತಲೆದೋರುವುದಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಹೋಬಳಿಯ ತೆಂಕನಹಳ್ಳಿ ಗ್ರಾಮದ ವಿವಿಧ ಬಡಾವಣೆಗಳಿಗೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವ ಸಲುವಾಗಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಳೆದ ಮೂರು ವರ್ಷಗಳ ಸತತ ಪ್ರಯತ್ನದಿಂದ ರಾಜ್ಯ ಸರ್ಕಾರ ಹಾಗೂ ಇಂಧನ ಸಚಿವರಿಗೆ ಹಲವು ಬಾರಿ ಮನವಿ ಮಾಡಿದ ಪರಿಣಾಮ ಹೋಬಳಿಯ ತೆಂಕನಹಳ್ಳಿ ಬಳಿ 220 ಕೆವಿ ರಿಸೀವ್ ಸ್ಟೇಷನ್‌ಗೆ ಅನುಮೋದನೆ ದೊರೆತಿದೆ. ಇದರಿಂದ ತಾಲೂಕಿನಲ್ಲಿ ಮುಂಬರುವ 25ರಿಂದ 30 ವರ್ಷ ಯಾವುದೇ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ. ಸಾರ್ವಜನಿಕರಿಗೆ ಹಾಗೂ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಸುಲಭವಾಗುತ್ತದೆ ಎಂದರು.

ಟೆಂಡರ್ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಂಡ ನಂತರ ಯೋಜನೆಗೆ ಭೂಮಿಪೂಜೆ ನೆರವೇರಿಸಲಾಗುತ್ತದೆ. ಗ್ರಾಮದಲ್ಲಿ ಸಿಆರ್ ಎಫ್ ಯೋಜನೆ ವತಿಯಿಂದ ಚನ್ನರಾಯಪಟ್ಟಣ-ತಿಪಟೂರು ಮುಖ್ಯರಸ್ತೆಯ ತೆಂಕನಹಳ್ಳಿ ಗೇಟ್‌ನಿಂದ ಅತ್ತಿಹಳ್ಳಿವರೆಗೆ ಗುಣಮಟ್ಟದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ನಿಗಮದಿಂದ ಗ್ರಾಮದ 25 ರಿಂದ 30 ಮನೆಗಳಿರುವ ಬಡಾವಣೆಗೆ ನಿರಂತರ ಜ್ಯೋತಿ ಕಲ್ಪಿಸುವ ಸಲುವಾಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಒತ್ತಾಯದಂತೆ ಇನ್ನುಳಿದಿರುವ ಬಡಾವಣೆಗಳಿಗೂ ಎರಡನೇ ಹಂತದಲ್ಲಿ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲಾಗುತ್ತದೆ ಗ್ರಾಮದಲ್ಲಿ ಆಗಲೇ ಕಾಂಕ್ರೀಟ್ ರಸ್ತೆ ಒಳಚರಂಡಿ ಶಾಲೆಗೆ ಹೊಸ ಕೊಠಡಿ ಡೇರಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ನುಗ್ಗೇಹಳ್ಳಿ ಸೆಸ್ಕ್ ವಿಭಾಗದ ಸಹಾಯಕ ಇಂಜಿನಿಯರ್ ಡಿ.ಎ.ಮಹಾದೇವ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹುಲಿಕೆರೆ ಸಂಪತ್‌ಕುಮಾರ್, ಡೇರಿ ಕಾರ್ಯದರ್ಶಿ ಕೃಷ್ಣೇಗೌಡ, ಮುಖಂಡರಾದ ಸಣ್ಣ ನಿಂಗೇಗೌಡ, ಮಲಿಂಗೇಗೌಡ, ಟಿ.ಎಂ.ಮಹೇಶ್, ಹೇಮಂತ್, ಬಸವರಾಜ್, ನಂಜಮರಿ, ಶ್ರೀನಿವಾಸ್, ನಿಂಗೇಗೌಡ, ಬಸವರಾಜ್, ಗಂಗಾಧರ್, ಮಾಸ್ತಿಗೌಡ, ಪರಮೇಶ್, ಅರ್ಚಕ ದಿನೇಶ್, ಸೇರಿದಂತೆ ಸೆಸ್ಕ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net