

Space : ತಾನೊಬ್ಬ ಗಗನಯಾತ್ರಿ ಎಂದು ಹೇಳಿಕೊಂಡು 65 ವರ್ಷದ ವೃದ್ಧ ಮಹಿಳೆಯೊಬ್ಬರಿಗೆ ಆಕೆಯ ಗೆಳೆಯ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಜಪಾನ್ನ ಉತ್ತರ ದ್ವೀಪ ಹೊಕ್ಕೈಡೋದಲ್ಲಿ ನಡೆದಿದೆ.
ವೃದ್ಧೆ ಮತ್ತು ಆಕೆಯ ಗೆಳೆಯ ಇಬ್ಬರಿಗೂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಯಿತು. ಇದೇ ಪರಿಚಯ ಪ್ರೀತಿಗೆ ತಿರುಗಿತು. ಆ ವ್ಯಕ್ತಿ ತಾನೊಬ್ಬ ರಷ್ಯಾದ ಗಗನಯಾತ್ರಿ ಎಂದು ಹೇಳಿಕೊಂಡು ವೃದ್ಧ ಮಹಿಳೆಯೊಂದಿಗೆ ಸಂಬಂಧವನ್ನು ಪ್ರಾರಂಭಿಸಿದನು. ಅದನ್ನು ಆಕೆಯೂ ನಂಬಿದಳು.
ಮಾಧ್ಯಮ ವರದಿಗಳ ಪ್ರಕಾರ, ಆ ವ್ಯಕ್ತಿಯ ಇನ್ಸ್ಟಾಗ್ರಾಂ ಪುಟದಲ್ಲಿ ಹಲವಾರು ಬಾಹ್ಯಾಕಾಶ ಫೋಟೋಗಳಿವೆ. ಜಪಾನ್ಗೆ ಬಂದಾಗ ವೃದ್ಧ ಮಹಿಳೆಯನ್ನು ಮದುವೆಯಾಗುವುದಾಗಿ ರಷ್ಯಾ ಮೂಲದ ಆ ವ್ಯಕ್ತಿ ಭರವಸೆ ನೀಡಿದ್ದ.
ಹೀಗಿರುವಾಗ ಒಂದು ದಿನ, ವೃದ್ಧೆಗೆ ಕರೆ ಮಾಡಿದ ಪ್ರೇಮಿ ತಾನು ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದೇನೆ. ಆದರೆ, ಅನಿರೀಕ್ಷಿತವಾಗಿ ದಾಳಿಗೊಳಗಾಗಿದ್ದೇನೆ. ಹೀಗಾಗಿ ಆಮ್ಲಜನಕದ ಅವಶ್ಯಕತೆ ಇದೆ. ಆಮ್ಲಜನಕವನ್ನು ಖರೀದಿಸಲು ಆನ್ಲೈನ್ನಲ್ಲಿ ಹಣ ಕಳುಹಿಸಿಕೊಡಿ ಎಂದು ಕೇಳಿದ್ದಾನೆ. ಅದನ್ನು ನಂಬಿದ ವೃದ್ಧೆ, ಅವನಿಗೆ ಸುಮಾರು ಒಂದು ಮಿಲಿಯನ್ ಯೆನ್ (ರೂ. 5 ಲಕ್ಷ) ಕಳುಹಿಸಿದ್ದಾರೆಂದು ವರದಿಯಾಗಿದೆ.
ಇದಾದ ನಂತರ, ಆ ವ್ಯಕ್ತಿಯನ್ನು ಮತ್ತೆ ಸಂಪರ್ಕಿಸಲು ಸಾಧ್ಯವಾಗದಿದ್ದಾಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ವಂಚನೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)