

ಮೈಸೂರು: ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ತತ್ವರಹಿತ ಜನವಿರೋಧಿ ರಾಜಕಾರಣ ಮತ್ತು ರಾಜಕಾರಣಿಗಳನ್ನು ಕಂಡಾಗ ರಾಜಾಳ್ವಿಕೆಯ ಅಂದಿನ ರಾಜಪ್ರಭುತ್ವವೇ ಪ್ರಜಾಪರವಾಗಿತ್ತೆನಿಸುತ್ತದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ಕರ್ನಾಟಕ ಸೇನಾಪಡೆ ವತಿಯಿಂದ ನಗರದ ಜೆಎಲ್ಬಿ ರಸ್ತೆಯ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು ಸಂಸ್ಥಾನದ 22ನೇ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಜವಾದ ಪ್ರಜಾಪ್ರಭುತ್ವ ಇದ್ದದ್ದು ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ. ಅದರಲ್ಲೂ ವಿಶೇಷವಾಗಿ ಮೈಸೂರು ಸಂಸ್ಥಾನವನ್ನು ಆಳಿದಂತಹ ಮುಮ್ಮಡಿ ಕೃಷ್ಣರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಕ್ಷರಶಃ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣವಾಗಿತ್ತು ಎಂದರು.
ಇಂದು ನಮ್ಮನ್ನು ಆಳುತ್ತಿರುವ ನಮ್ಮ ಆಧುನಿಕ ಪ್ರಭುಗಳು ಇಡೀ ರಾಜ್ಯವನ್ನು ಮತ್ತು ರಾಷ್ಟ್ರವನ್ನು ಅವರ ಸ್ವಾರ್ಥಕ್ಕಾಗಿ ಅಂಧಕಾರಕ್ಕೆ ತಳ್ಳುತ್ತಿದ್ದಾರೆ.ಇದರಿಂದ ನಾಡಿನ ಜನತೆ ನೆಮ್ಮದಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದೇ ರೀತಿ ಇವರ ಸ್ವಾರ್ಥ ಲಾಲಸೆ ಮುಂದುವರೆಯುತ್ತಾ ಹೋದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಕ್ಷಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಇಡೀ ರಾಜ್ಯಕ್ಕೆ ಎಲ್ಲ ದೃಷ್ಟಿಯಲ್ಲೂ ಅಭಿವೃದ್ಧಿಯ ಬೆಳಕನ್ನು ನೀಡಿದಂತಹ ನಮ್ಮ ಮಹಾರಾಜರುಗಳು ಅವಿಸ್ಮರಣೀಯರಾಗಿ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮೈಸೂರಿನ ಅಭಿವೃದ್ಧಿಗೆ ಮುನ್ನುಡಿ ಬರೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ದೂರದೃಷ್ಟಿಯ ಮಹಾರಾಜ ಮುಮ್ಮಡಿಯವರನ್ನು ಮರೆಯುವಂತಿಲ್ಲ. ಸಾವಿರ ಕೆರೆಗಳ ಸರದಾರ ಎನಿಸಿ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಕ್ರಿಯಾಶೀಲತೆಯನ್ನು, ಕನಸುಗಾರಿಕೆಯನ್ನು ಮಾದರಿ ಮಾಡಿಕೊಂಡಿದ್ದ ಇವರು ಕೆಂಪೇಗೌಡರಂತೆ ಕೆರೆ, ಕಟ್ಟೆಗಳು, ದೇವಾಲಯಗಳು, ಊರು ಕೇರಿಗಳು, ಸಾಲುಮರಗಳು, ಶೈಕ್ಷಣಿಕ ಸಂಸ್ಥೆಗಳ ಮೂಲಕ ಮೈಸೂರನ್ನು ಸಹಜ ಸೌದರ್ಯ ನಗರವನ್ನಾಗಿ ನಿರ್ಮಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ನಾಡನ್ನು ಸಮರ್ಥವಾಗಿ ಕಟ್ಟಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ದಿ ಕಾರ್ಯಗಳ ತಳಹದಿಯೇ ಮುಮ್ಮಡಿ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ , ಸಂಸ್ಕೃತಿಯ ಮಹಾಪೋಷಕರಾಗಿದ್ದ ಮುಮ್ಮಡಿ ಅವರು ಸ್ವತಃ ಸಾಹಿತಿಗಳಾಗಿ ಶ್ರೀತತ್ವನಿಧಿ ಗ್ರಂಥ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಾಹಿತ್ಯಕ ಕೃತಿಗಳನ್ನು ನಾಡಿಗೆ ನೀಡಿ ಸಾರಸ್ವತ ಲೋಕವನ್ನೂ ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಮಾತನಾಡಿ, ಮಹಾರಾಜರ ಆಳ್ವಿಕೆ ಈಗಲೂ ಸಹ ಇದ್ದಿದ್ದರೆ ನಾವೆಲ್ಲ ಬಹಳ ಸಂತೋಷವಾಗಿರುತ್ತಿದ್ದೆವು. ಈಗ ಪ್ರಜಾಪ್ರಭುತ್ವ ಬಂದಮೇಲೆ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಜರ ಕಾಲದಲ್ಲಿ ನಾವಿರಬೇಕಿತ್ತು ಅಥವಾ ಈಗ ರಾಜರ ಆಳ್ವಿಕೆ ಇರಬೇಕಿತ್ತು ಎಂದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಕೊಡುಗೆ ಮೈಸೂರು ಸಂಸ್ಥಾನಕ್ಕೆ ಅಪಾರ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮೈಸೂರು ನಾಡನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮೈಸೂರಿನ ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು ಸೇರಿದಂತೆ ಹಲವಾರು ಸಂಸ್ಥೆಗಳನ್ನು ಸ್ಥಾಪನೆ ಮಾಡಿದವರು ಇವರು. ಇಂತಹ ಮಹನೀಯರ ಜಯಂತಿಯನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ವತಿಯಿಂದ ಪ್ರತಿ ವರ್ಷ ಆಚರಣೆ ಮಾಡಬೇಕು ಎಂದು ಆಗ್ರಸಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ. ರಾಮು, ಜಿಲ್ಲಾ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಕೆ. ನಾರಾಯಣ ಗೌಡ, ಮಹಾರಾಜ ಕಾಲೇಜು ಪ್ರಾಂಶುಪಾಲ ಉದಯಶಂಕರ್ ಹಾಗೂ ಇತರರು ಇದ್ದರು.