ಜಗತ್ತಿನಲ್ಲಿ ತಳಮಳ ನೆಲೆಸಿದೆ

klr nagalapura
ಕೋಲಾರ ತಾಲೂಕಿನ ನಾಗಲಾಪುರದ ಮಠದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮಾತನಾಡಿದರು.
Published on

ಕೋಲಾರ: ನಾನು ಎಂಬ ಅಹಂಕಾರದಿಂದ ಜಗತ್ತಿನಲ್ಲಿ ತಳಮಳ ನೆಲೆಸಿದ್ದು, ದೇಶ ದೇಶಗಳ ನಡುವೆ ಬಡಿದಾಟ ನಡೆಯುತ್ತಿದೆ ಎಂದು ಬೆಂಗಳೂರಿನ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ನಾಗಲಾಪುರದ ಮಠದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೋಕ ಕಲ್ಯಾಣಾರ್ಥವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ, ಗುರುಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ಅವರ ೨೨ನೇ ಸಂಸ್ಮರಣೋತ್ಸವ ಹಾಗೂ ಮಹಾಮೃತ್ಯುಂಜಯ ಹೋಮ, ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.

ಈಗಿನ ಸಮಾಜದಲ್ಲಿ ಮಾನವೀಯ ಪ್ರಜ್ಞೆ ಇಲ್ಲವಾಗಿದೆ. ಇಂಥ ಸಂದರ್ಭದಲ್ಲಿ ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಭಾರತಕ್ಕಿದೆ. ಎಲ್ಲರೂ ಎಲ್ಲರ ಹಿತಕ್ಕಾಗಿ ಸಂಕಲ್ಪ ಮಾಡಬೇಕು. ಮಾನವೀಯ ಮೌಲ್ಯಗಳನ್ನು ಮಕ್ಕಳ ಮೇಲೆ ಬಿತ್ತಬೇಕು. ಸಂಸ್ಕಾರ ಬೆಳೆಸಬೇಕು ಎಂದರು.

ಎಲ್ಲರ ಹಿತ ಬಯಸುವುದೇ ಕಲ್ಯಾಣ. ಮಾನವ ಧರ್ಮ ಕೂಡ ಕಲ್ಯಾಣ. ಭಕ್ತಿ ಆಧಾರದಲ್ಲಿ ಇರಬೇಕು ಭಾಷಣದಿಂದ ಸಾಧ್ಯವಿಲ್ಲ. ಧರ್ಮದಲ್ಲಿ ಮೇಲು-ಕೀಳು, ಭಿನ್ನಭೇದ ಇಲ್ಲ. ಸಂಸ್ಕಾರ ಪೋಷಿಸಲು ಇರುವುದೇ ಮಠಗಳು. ನೊಂದ ಮನಸ್ಸುಗಳಿಗೆ ಬೆಳಕು ನೀಡುವ ಕೆಲಸದಲ್ಲಿ ನಾಗಲಾಪುರ ಮಠ ನಿರತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿತೋಪದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ

ಕನಕಪುರದ ಚಿಕ್ಕಕಲ್ಕುಬಾಳು ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ನಾವು ಕಲಿತ ಸಂಸ್ಕಾರ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಹಿತೋಪದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಕರು, ತತ್ವಜ್ಞಾನಿಗಳ ಮಾತು ಕೇಳಬೇಕು. ಧರ್ಮ ಮಾರ್ಗಿಗಳಾಗಿ. ಹತ್ತು ಜನ ಮೆಚ್ಚುವಂತಿರಬೇಕು ಎಂದು ಸಲಹೆ ನೀಡಿದರು. ದಾನ ಮಾಡಿದರೆ ಶಾಶ್ವತ ಕೀರ್ತಿ ಸಿಗುತ್ತದೆ. ಎಲ್ಲ ಧರ್ಮಗಳ ಸಾರ ಮನುಷ್ಯ ಸುಸಂಸ್ಕತ ವ್ಯಕ್ತಿ ಆಗಬೇಕು, ಮುಕ್ತಿ ಪಡೆಯಬೇಕು ಎಂಬುದು. ಶ್ರೀಮಂತಿಕೆಯಿAದ ನೆಮ್ಮದಿ ಇಲ್ಲ. ಭಯ ಮನೆ ಮಾಡಿದೆ ಎಂದು ಹೇಳಿದರು.

ಧರ್ಮ ಕಾರ್ಯಕ್ಕೆ ಮಠ ಅಗತ್ಯ

ಸಂಸ್ಕೃತಿ ಪ್ರಚಾರ, ಧರ್ಮದ ಸಾರ ತಿಳಿಸಲು ಶ್ರೀಮಠವು ಶ್ರಮಿಸುತ್ತಿದೆ. ಧರ್ಮದ ಕಾರ್ಯಕ್ರಮ ಮಾಡಲು ಮಠಗಳು ಬೇಕು. ಮಠಗಳು ಶ್ರದ್ಧಾ ಕೇಂದ್ರಗಳು. ಹಿಂದಿನ ಸ್ವಾಮೀಜಿಗಳು ಮಠದ ಹೆಸರು ಉಳಿಸಿದರು. ಕೋಟಿ ಸಂಪತ್ತಿಗಿಂತ ಅದು ಶ್ರೇಷ್ಠ ಎಂದು ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಸ್ವಾಮೀಜಿ ಹೇಳಿದರು.

ಮಠಗಳಿಂದ ಧರ್ಮ ರಕ್ಷಣೆ

ಮಠಗಳು ಇಲ್ಲದಿದ್ದೆರ ಧರ್ಮಕ್ಕೆ ಆಪತ್ತು ಬರುತಿತ್ತು. ಮಠಗಳು ಧರ್ಮ ರಕ್ಷಣೆಯಲ್ಲಿ ತೊಡಗಿವೆ. ನಾನು, ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳು ಮಠದ ಏಳಿಗೆಗೆ ಬದ್ಧ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಭರವಸೆ ನೀಡಿದರು. ಎಲ್ಲಾ ಧರ್ಮಗಳ ಜನರನ್ನು ವಿಶ್ವಾಸಕ್ಕೆ ಪಡೆದು ಮಠ ಸಾಗುತ್ತಿದೆ. ಈ ಮಠ ಸಿದ್ಧಗಂಗಾ ಮಠದ ಮಟ್ಟಕ್ಕೆ ಬೆಳೆಯಬೇಕು ಎಂದಿದ್ದೆ. ಅದೇ ಮಾತಿನಂತೆ ತೇಜೇಶಲಿಂಗ ಸ್ವಾಮೀಜಿ ಮಠಕ್ಕೆ ಹೊಸ ರೂಪಕೊಟ್ಟು ಆ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಧರ್ಮ ಜಾಗೃತಿ ಜತೆಗೆ ಶೈಕ್ಷಣಿಕ ಸಂಸ್ಥೆ ಕೂಡ ಸ್ಥಾಪಿಸಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಸಿ.ಎಸ್.ವೆಂಕಟೇಶ್, ವೇದಿಕೆಯಲ್ಲಿ ಮುಖಂಡರಾದ ಸೋಮಣ್ಣ, ಎಸ್.ಸುರೇಶ್, ಜ್ಞಾನಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net