ಬೇರೆಲ್ಲದಕ್ಕೂ ಸಮಯವಿದೆ, ಅಧ್ಯಾತ್ಮ ಸಾಧನೆಗೆ ಮಾತ್ರ ಇಲ್ಲ!

Paramahamsa
Published on
 ಈಗಿನ ವರದಿ ಪ್ರಕಾರ 8.2 ಬಿಲಿಯನ್ ಜನರು ಈ ಭೂಗೋಳದಲ್ಲಿ ಇದ್ದಾರಂತೆ. ಅಂದರೆ 8.2 ಶತಕೋಟಿ ಜನರಿದ್ದಾರೆ ಎಂದರ್ಥ. ಈ ಕೋಟಿ ಕೋಟಿ ಜನರಲ್ಲಿ ಆಧ್ಯಾತ್ಮಿಕ ಸಾಧನೆ, ಜೀವನದ ಗುರಿ, ಭಗವದ್ ಸಾಕ್ಷಾತ್ಕಾರ ಎಂಬೀ ವಿಚಾರಗಳನ್ನು ಅರಿತವರು ಎಷ್ಟು? ಅರಿತಾಗ್ಯೂ ಸಾಧನಾ ಮಾರ್ಗದಲ್ಲಿ ಪಥಿಸುತ್ತಿರುವವರೆಷ್ಟು? ಎಂಬೀ ಪ್ರಶ್ನೆಗಳಿಗೆ ಉತ್ತರ ಲಭಿಸುವುದು ಕಷ್ಟಕರ.

ಹೀಗಿದ್ದರೂ ಎಲ್ಲೋ ಅಲ್ಲಲ್ಲಿ ನಿಜವಾದ ಅರ್ಥದಲ್ಲಿ ಅಧ್ಯಾತ್ಮ ಸಾಧಕರನ್ನು ಕಾಣಬಹುದಾಗಿದೆ. ಆದರೆ ಬಹುತೇಕರಲ್ಲಿ ಅಧ್ಯಾತ್ಮ ಸಾಧನೆ, ಜೀವನ ಧರ್ಮಯೋಗ, ಆತ್ಮಾನುಸಂಧಾನ ಇತ್ಯಾದಿಗಳ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲ. ನಿಜವಾದ ಅರ್ಥದಲ್ಲಿ ಅಧ್ಯಾತ್ಮ ವಿಚಾರಧಾರೆಗಳು ಕ್ರಮೇಣ ಈ ಪೃಥ್ವಿಯಿಂದ ಮಾಯವಾಗುತ್ತಾ ಬರುತ್ತಿವೆ. ಇದಕ್ಕೆ ಮೂಲ ಕಾರಣ ಹುಡುಕಿದಾಗ ಸಾಮಾನ್ಯವಾಗಿ ನಮಗೆ ದೊರೆಯುವ ಉತ್ತರ ‘ಸಮಯವೆಲ್ಲಿದೆ?’ ಎಂದು. ಹಾಗಾದಲ್ಲಿ ನಾವು ಕಾಣುವ ಬ್ರಹ್ಮಜ್ಞ ಪುರುಷರು, ಸಂತರು, ಮಹಾತ್ಮರು, ಯೋಗಿಗಳು, ಭಕ್ತಾಗ್ರಣ್ಯರುಗಳಿಗೆ ಸಮಯವೆಲ್ಲಿ ಬಂತು? ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು, ದಯಾನಂದ ಸರಸ್ವತಿ, ರಮಣ ಮಹರ್ಷಿಗಳು, ದಾಸವರೇಣ್ಯರು, ತುಕಾರಾಂ, ಮೀರಾಬಾಯಿ, ಅಕ್ಕಮಹಾದೇವಿ ಆದಿಯಾಗಿ ಭಕ್ತವರೇಣ್ಯ ರುಗಳು, ಅನ್ನಮಾಚಾರ್ಯ, ಭದ್ರಾಚಲ ರಾಮದಾಸರಂತಹ ಅನೇಕಾನೇಕ ಬ್ರಹ್ಮಜ್ಞ ಪುರುಷರಿಗೆ ಸಮಯವೆಲ್ಲಿ ದೊರೆಯಿತು? ಅವರೂ ಸಹ ಮಾನವರಾಗಿಯೇ ಈ ಜಗತ್ತಿನಲ್ಲಿ ಇರಲಿಲ್ಲವೇ? ಎಂಬ ಸಂದೇಹಗಳು ಬರುವುದು ಸಹಜ!.

ಒಮ್ಮೆ ರಾಮಕೃಷ್ಣ ಪರಮಹಂಸರಲ್ಲಿ ಮಹಿಮಚರಣ ಎಂಬ ಭಕ್ತೋತ್ತಮ ಇದೇ ಪ್ರಶ್ನೆಯನ್ನು ಹಾಕುತ್ತಾನೆ. ಸಂಸಾರಿಗಳಿಗೆ ಅನೇಕ ಕೆಲಸ ಕಾರ್ಯಗಳು, ಸಾಧನೆಗೆ ಸಮಯವೆಲ್ಲಿ? ಎಂದು. ರಾಮಕೃಷ್ಣರು: ಹಾಗೇಕೆ ಹೇಳುತ್ತೀಯೆ? ಈ ಜಗತ್ತು ಸ್ವಪ್ನವತ್ ಎಂದು ಅರಿತಿಲ್ಲವೇ?. ತಮಗೆ ತಡೆಯಾಗಿ ಸಮುದ್ರ ನಿಂತಿರುವುದನ್ನು ನೋಡಿ ಲಕ್ಷ್ಮಣ ಕುಪಿತನಾಗಿ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ರಾಮನಿಗೆ ಹೇಳಿದ, ಈ ಸಮುದ್ರ ನಮ್ಮನ್ನು ಲಂಕೆಗೆ ಬಿಟ್ಟುಕೊಡುತ್ತಿಲ್ಲ. ನಾನು ವರುಣನನ್ನು ಸಾಯಿಸುತ್ತೇನೆ ಎಂದು. ರಾಮ ಆತನಿಗೆ ಬುದ್ದಿಮಾತು ಹೇಳುತ್ತಾ, ಹೇ ಲಕ್ಷ್ಮಣ, ನಿನ್ನ ದೃಷ್ಟಿಗೆ ಗೋಚರವಾಗುತ್ತಿರುವುದೆಲ್ಲ ಸ್ವಪ್ನವತ್ ಅನಿತ್ಯ. ಸಮುದ್ರವೂ ಅನಿತ್ಯ; ನಿನ್ನ ಕೋಪವೂ ಅನಿತ್ಯ; ಮಿಥ್ಯವನ್ನು ಮಿಥ್ಯದ ಮೂಲಕ ಸಾಯಿಸುವುದೂ ಮಿಥ್ಯವೇ.

ಅಂದರೆ ಈ ಜಗತ್ತೇ ಮಿಥ್ಯೆ ಎಂಬುದನ್ನು ಅರಿಯಬೇಕು. ಈ ಮಿಥ್ಯಾ ಜೀವನದಲ್ಲಿ ನನ್ನದು, ನಮ್ಮದು, ನನ್ನ ಆಸ್ತಿ, ನನ್ನವರು, ಇತ್ಯಾದಿ ಭ್ರಮೆಯಲ್ಲಿ ಜೀವನದ ಮೂಲವನ್ನೇ ಮರೆತಿರುವುದ ರಿಂದ ಎಲ್ಲಾ ಶಕ್ತಿ, ಯುಕ್ತಿಗಳು ಕೇವಲ ಪ್ರಾಪಂಚಿಕತೆಯತ್ತ ಧಾವಿಸುತ್ತಿವೆ. ಈ ಸಂಭಾಷಣೆ ಮುಂದುವರಿಯುತ್ತಿರುವಾಗ ಭಕ್ತನೊಬ್ಬ ಪರಮಹಂಸರಲ್ಲಿ, ಪ್ರಾಪಂಚಿಕರಿಗೆ ಉಪಾಯ ವೇನು? ಎಂದು ಕೇಳುತ್ತಾನೆ. ಅದಕ್ಕೆ ರಾಮಕೃಷ್ಣರು, ‘ಸಾಧು, ಸತ್ಸಂಗ ಸಂಗ ಮಾಡುತ್ತಿರಬೇಕು, ಅಧ್ಯಾತ್ಮಿಕ ವಿಷಯಗಳನ್ನು ಸತತವಾಗಿ ಕೇಳುತ್ತಿರಬೇಕು. ಅವರು ಕಾಮ-ಕಾಂಚನದ ಮತ್ತಿನಿಂದ ಉನ್ಮತ್ತರಾಗಿರುತ್ತಾರೆ. ಉನ್ಮತ್ತನಿಗೆ ಅಕ್ಕಿ ತೊಳೆದ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕೊಡುತ್ತಾ ಬಂದ ಹಾಗೆ ಕ್ರಮೇಣವಾಗಿ ಪ್ರಜ್ಞೆ ಉಂಟಾಗಿಬಿಡುತ್ತದೆ’ ಎನ್ನುತ್ತಾರೆ.

ಆದರೆ ಇಂದಿನ ಕಾಲಘಟ್ಟದಲ್ಲಿ ಮನುಜರಿಗೆ ಸಮಯವೆಲ್ಲಿದೆ? ಇತ್ತೀಚೆಗೆ ಆಶ್ರಮಕ್ಕೆ ಒಬ್ಬರು ಭೇಟಿಯಿತ್ತಿದ್ದರು. ಆ ಆಶ್ರಮದ ಯತಿಗಳು ‘ಈಗ ನಿಮಗೆ ಎಲ್ಲಾ ಜವಾಬ್ದಾರಿ ಮುಗಿದಿದೆ ಎಂದು ಕೇಳಿಬಂತು. ನೀವ್ಯಾಕೆ ಈಗಲಾದರೂ ಸ್ವಲ್ಪ ಆಧ್ಯಾತ್ಮಿಕ ಜೀವನದ ಬಗ್ಗೆ ಮನಸ್ಸು ತಿರುಗಿಸಬಾರದು’ ಎಂದರು. ಅದಕ್ಕೆ ಆತ, ‘ಸ್ವಾಮಿ ಈಗ ಆರಂಭವಾಗಿದೆ, ಇನ್ನೂ ಕೆಲಸಗಳು ವಿಪರೀತ ಇದೆ, ಈಗಲೇ ಯಾಕೆ ಚಿಂತೆ?’ ಎಂದು ಹೊರಟು ಹೋದರಂತೆ.

ಇಂತಹ ಮನಃಸ್ಥಿತಿಯಲ್ಲಿರುವವರಿಗೆ ಪರಮಹಂಸರು ಈ ಉದಾಹರಣೆ ನೀಡುತ್ತಾರೆ. ‘ಒಮ್ಮೆ ನರೇಂದ್ರನಾಥ (ಸ್ವಾಮಿ ವಿವೇಕಾನಂದರು) ನನಗೆ ಹೇಳಿದ, ನೀವು ನೋಡುತ್ತಿರುವ ಭಗವಂತನ ರೂಪಗಳೆಲ್ಲ ನಿಮ್ಮ ಮಾನಸಿಕ ಭ್ರಾಂತಿ ಅಂತ.

ಆದರೆ ಮಾತೂ ಆಡುತ್ತವಲ್ಲ.. ಎಂದೆ. ಅದಕ್ಕಾತ ಹಾಗೆ ಭಾವನೆ ಆಗುತ್ತದೆ ಎಂದ. ಆಗ ನಾನು ಭವತಾರಿಣಿಯ ಸಮೀಪ ಧಾವಿಸಿ ಹೇಳಿದೆ: ಹೇ ತಾಯೆ, ಏನು ಇದೆಲ್ಲ ಮಿಥ್ಯವೇ? ನರೇಂದ್ರ ಹಾಗೆ ಹೇಳಿದನಲ್ಲ! ಅಂತ. ಒಡನೆಯೇ ಭಗವತಿ ನನಗೆ ಒಂದು ಅಲೌಕಿಕ ದರ್ಶನ ತೋರಿಸಿದಳು. ನಾನು ಚೈತನ್ಯವನ್ನು - ಅಖಂಡ ಚೈತನ್ಯವನ್ನು ಮತ್ತು ಆತನಿಂದ ಉದ್ಭವಿಸಿದ ಚೈತನ್ಯ ಮೂರ್ತಿಯನ್ನು ದರ್ಶಿಸಿದೆ.

ಯಾರು ಶುದ್ಧ ಮನಸ್ಸಿನಿಂದ ಅಧ್ಯಾತ್ಮಿಕ ಪಥದಲ್ಲಿ ಪಥಿಸುತ್ತಿರುತ್ತಾರೆಯೋ ಅವರಿಗೆ ಯಶಸ್ಸು ಖಂಡಿತ. ಮನುಷ್ಯತ್ವದಿಂದ ದೈವತ್ವದೆಡೆಗೆ ಪಯಣಿಸುವುದೇ ನಿಜವಾದ ಅರ್ಥದಲ್ಲಿ ಅಧ್ಯಾತ್ಮ ಜೀವನ. ಸಮಯವೆಲ್ಲಿದೆ ಎಂದು ಕೇಳದೇ ಆ ಅಧ್ಯಾತ್ಮ ಜೀವನವನ್ನು ಅರ್ಥಮಾಡಿಕೊಂಡವನೇ ಶ್ರೇಷ್ಠ ಸಾಧಕ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ:vvsudina@gmail.com, swajapa@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net