

ವಾಷಿಂಗ್ಟನ್: ಭಾರತ-ಅಮೆರಿಕ ವಾಣಿಜ್ಯ ಬಾಂಧವ್ಯದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂದಿನ ವಾರ ಭಾರತ ಭೇಟಿ ವೇಳೆ ಉಭಯ ದೇಶಗಳು ಯಾವುದೇ ಮಹತ್ವದ ವಾಣಿಜ್ಯ ಒಡಂಬಡಿಕೆಗೆ ಸಹಿ ಹಾಕುವ ಸಂಭವವಿಲ್ಲ ಎಂಬ ಸುಳಿವು ನೀಡಿದರು.
ಫೆಬ್ರವರಿ 24-25ರ ಭೇಟಿ ವೇಳೆ ಭಾರತ ಮತ್ತು ಅಮೆರಿಕ ವಾಣಿಜ್ಯ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಂಭವವಿದೆಯೆಂಬ ಮಾಧ್ಯಮ ವರದಿಗಳತ್ತ ಅಧ್ಯಕ್ಷರ ಗಮನಕ್ಕೆ ತಂದಾಗ, ಟ್ರಂಪ್ ಈ ರೀತಿ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು. ಆದರೆ, ನವೆಂಬರ್ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗೂ ಮುಂಚೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಭಾರತ ಪ್ರವಾಸದ ವೇಳಾಪಟ್ಟಿ
ಫೆ.24 ಬೆಳಗ್ಗೆ 11- ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯಾರನ್ನು ಪ್ರಧಾನಿ ನರೇಂದ್ರ ಮೋದಿ ಸ್ವತಃ ಸ್ವಾಗತಿಸಲಿದ್ದಾರೆ. ನಂತರ ಏರ್ಪೋರ್ಟ್ನಿಂದ ಮೊಟೆರಾ ಸ್ಟೇಡಿಯಂವರೆಗೆ ಮೋದಿ ಮತ್ತು ಟ್ರಂಪ್ ರೋಡ್ ಷೋ. ಮಾರ್ಗ ಮಧ್ಯೆ ಸಬರಮತಿ ಆಶ್ರಮಕ್ಕೆ ಭೇಟಿ.
ಮಧ್ಯಾಹ್ನ 12.30- ಮೊಟೆರಾ ಸ್ಟೇಡಿಯಂನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ.
1.10 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ. ಸುಮಾರು 3 ತಾಸುಗಳ ಕಾರ್ಯಕ್ರಮ.
3.30- ಅಹಮದಾಬಾದ್ನಿಂದ ಆಗ್ರಾಕ್ಕೆ ಪಯಣ
ಸಂಜೆ 5- ಟ್ರಂಪ್ ದಂಪತಿಯಿಂದ ತಾಜ್ವುಹಲ್ ವೀಕ್ಷಣೆ. ರಾತ್ರಿ ದೆಹಲಿಗೆ ಆಗಮಿಸಿ ಹೋಟೆಲ್ನಲ್ಲಿ ವಿಶ್ರಾಂತಿ.
ಫೆ.25 ಬೆಳಗ್ಗೆ 10- ಟ್ರಂಪ್ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ.
10.45- ರಾಜ್ಘಾಟ್ಗೆ ಟ್ರಂಪ್ ದಂಪತಿ ಭೇಟಿ, ಬಾಪು ಸ್ಮಾರಕಕ್ಕೆ ನಮನ.
11 .30- ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಂತರ ಜಂಟಿ ಸುದ್ದಿಗೋಷ್ಠಿ .
ಮಧ್ಯಾಹ್ನ 3- ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆ. ನಂತರ ಅಮೆರಿಕಗೆ ನಿರ್ಗಮನ.
ಟ್ರಂಪ್ ಪ್ರತಿಮೆಗೆ ಪೂಜೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅವರ ಅಪ್ಪಟ ಅಭಿಮಾನಿಯಾದ ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿ ಬಸ್ಸಾ ಕೃಷ್ಣ, ಟ್ರಂಪ್ ಮೂರ್ತಿ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಟ್ರಂಪ್ ಕನಸಲ್ಲಿ ಬಂದಾಗಿನಿಂದ ಅವರನ್ನು ಗೌರವಿಸುತ್ತಿರುವೆ. ಈ ಕನಸಿನ ನಂತರ ಉದ್ಯಮದಲ್ಲಿ ಭಾರಿ ಪ್ರಗತಿಯಾಗಿ ಅದೃಷ್ಟ ಖುಲಾಯಿಸಿತು. ಹೀಗಾಗಿ ತನ್ನ ಮನೆಯನ್ನೇ ಮಂದಿರವಾಗಿ ಪರಿವರ್ತಿಸಿ ಟ್ರಂಪ್ರ ಆಳೆತ್ತರದ ಮೂರ್ತಿ ಸ್ಥಾಪಿಸಿದ್ದಾಗಿ ಕೃಷ್ಣ ಹೇಳಿದ್ದಾರೆ.