

ಚಿಕ್ಕಮಗಳೂರು: ಡೆಂಗೆ ನಿಯಂತ್ರಣಕ್ಕೆ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳ ವೈದ್ಯರು ಸಿದ್ಧತೆ ನಡೆಸಿದ್ದು, ಔಷಧಿಗೆ ಯಾವುದೇ ಕೊರತೆಯಿಲ್ಲ. ಡೆಂಗೆ ಬಗ್ಗೆ ಜನರು ಅನಗತ್ಯ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ನಗರದ ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಮೊದಲ ವಾರದಿಂದ ಚಿಕ್ಕಮಗಳೂರು ನಗರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂೆ ಪ್ರಕರಣಗಳು ಕಂಡು ಬಂದಿವೆ. ಜೂನ್‌ನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಡೆಂಗೆ ಪ್ರಕರಣಗಳು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಜೂನ್ ಮೊದಲ ವಾರದಲ್ಲಿ 49 ರೋಗಿಗಳು ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 35 ರೋಗಿಗಳು ಸಾಮಾನ್ಯ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ಎಲ್ಲ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಪರೀಕ್ಷೆ ಮಾಡಲಾಗಿದೆ. ರೋಗಕ್ಕೆ ತಕ್ಕಂತೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ 50 ಪ್ರಕರಣಗಳು ಹೆಚ್ಚು ಕಂಡು ಬಂದಿವೆ. ಇದರ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ ಎಂದರು.
ನಗರಸಭೆ ಆಯುಕ್ತರ ನೇತೃತ್ವದಲ್ಲಿ ನಗರಾದ್ಯಂತ ಫಾಗಿಂಗ್ ಸೇರಿದಂತೆ ಲಾರ್ವಾಗಳ ಸರ್ವೇ ನಡೆಸಿ ನಾಶಕ್ಕೆ ಕ್ರಮ ವಹಿಸಲಾಗಿದೆ. ಈ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಸೂಚಿಸಿದ್ದೇನೆ. 2-3 ವಾರಗಳ ಕಾಲ ನಗರಸಭೆ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಲಾರ್ವಾಗಳ ನಾಶಕ್ಕೆ ಮುಂದಾಗಲಿದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕಪಡುವುದು ಬೇಡ ಎಂದು ತಿಳಿಸಿದರು.
ಜನರು ತಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ನೀರು ಸಂಗ್ರಹಿಸುವ ಪಾತ್ರೆಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ ಹೊಸ ನೀರು ತುಂಬಿಸಿಕೊಳ್ಳಲು ಮುಂದಾಗಬೇಕು. ಮನೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಎಸ್‌ಪಿ ವಿಕ್ರಮ್ ಅಮಟೆ, ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ, ಜಿಲ್ಲಾಸ್ಪತ್ರೆ ಮೆಡಿಕಲ್ ಸರ್ಜನ್ ಡಾ. ಮೋಹನ್‌ಕುಮಾರ್ ಮತ್ತಿತರರಿದ್ದರು.