

ದೇಶದ್ರೋಹಿ ವಿಚಾರದಲ್ಲಿ ಯಾರೇ ಇದ್ದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರನ್ನು ಬಗ್ಗು ಬಡಿಯುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರಾಷ್ಟ್ರದ್ರೋಹ ಬೆಳೆಸುವ ಕೆಲಸವನ್ನು ಕೆಲ ಸಂಘಟನೆಗಳು ಮಾಡುತ್ತಿವೆ. ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ಯುವಕರಿಂದ ದೇಶದ್ರೋಹಿ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ. ಇದರ ಹಿಂದೆ ಹಲವಾರು ಶಕ್ತಿಗಳ ಕೈವಾಡ ಇದೆ ಎಂದರು. ಇಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ ಹಿಂದುಸ್ತಾನ್ ಜಿಂದಾಬಾದ್ ಎಂದು ಹೇಳಿ ಜೀವಂತವಾಗಿ ವಾಪಸ್ ಬರಲಿ ನೋಡೋಣ. ತಾಕತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಇಂಥವರ ಪರ ಕೆಲ ರಾಜಕೀಯ ಪಕ್ಷಗಳು ಪರ ನಿಲ್ಲುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಎಎ ವಿರುದ್ಧ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಹಣ ವಿನಿಯೋಗ ವಿಚಾರದ ಕುರಿತು ಈಗಾಗಲೇ ಇಡಿ ತನಿಖೆ ನಡೆಯುತ್ತಿದೆ. ಕೆಲ ಬ್ಯಾಂಕ್ ಖಾತೆಗಳಿಗೆ ನೂರಾರು ಕೋಟಿ ರೂ. ವರ್ಗಾವಣೆಯೂ ಆಗಿದೆ. ವಿದೇಶದಿಂದಲೂ ಹಣ ಬಂದಿದೆ ಎಂದರು. ವಿಶ್ವವಿದ್ಯಾಲಯಗಳು, ವಿದ್ಯಾಸಂಸ್ಥೆಗಳು ದೇಶದ್ರೋಹ ತಾಣಗಳಾಗದಿರಲಿ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರ ವಹಿಸುವಂತೆ ತಿಳಿಸಲಾಗುತ್ತಿದೆ ಎಂದರು. ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದವರಿಗೆ ಬಾಂಡ್ ಕೊಟ್ಟವರ ಬಗ್ಗೆ ಮಾಹಿತಿ ನೀಡಲು, ಕಡತ ಹಾಜರುಪಡಿಸಲು ಹೇಳಿದ್ದೇನೆ. ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.
ಖಚಿತ ಸಾಕ್ಷ್ಯ ಲಭ್ಯ
ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅಮೂಲ್ಯಳ ಕುರಿತು ಸಾಮಾಜಿಕ ಜಾಲತಾಣ ಶೋಧಿಸಲಾಗಿದ್ದು, ಆಕೆ ವ್ಯಾಸಂಗ ಮಾಡು ತ್ತಿದ್ದ ಕಾಲೇಜಿನ ಉಪನ್ಯಾಸಕರು ಹಾಗೂ ಸ್ನೇಹಿತರನ್ನು ವಿಚಾರಿಸಲಾಗಿದೆ. ಅಮೂಲ್ಯ ಎಡಪಂಥೀಯ ಸಂಘಟನೆಯಲ್ಲಿ ಗುರುತಿಸಿ ಕೊಂಡಿದ್ದು, ಅದರಲ್ಲಿ 60ಕ್ಕೂ ಹೆಚ್ಚು ಮಂದಿ ಹೋರಾಟ ಮತ್ತು ಪ್ರತಿಭಟನೆಗಳಲ್ಲಿ ನಿರಂತರ ವಾಗಿ ಸಕ್ರಿಯರಾಗಿರುವುದು ಖಚಿತವಾಗಿದೆ. ಸಮಾವೇಶಕ್ಕಾಗಿ ಎರಡು ಬಗೆಯ ಆಹ್ವಾನಪತ್ರಿಕೆ ಮಾಡಲಾಗಿತ್ತು. ಒಂದರಲ್ಲಿ ಎಐಎಂಐ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸೇರಿ ಪ್ರಮುಖರ ಹೆಸರುಗಳಿವೆ. ಮತ್ತೊಂದರಲ್ಲಿ ಅಮೂಲ್ಯ ಹಾಗೂ ಆಕೆ ಗುರುತಿಸಿಕೊಂಡಿರುವ ಸಂಘಟನೆ ಸದಸ್ಯರು ಹಾಗೂ ಇತರರ ಹೆಸರು ಉಲ್ಲೇಖವಾಗಿವೆ. ಆಕೆಗೆ ವಿಐಪಿ ಪಾಸ್ ವಿತರಿಸಲಾಗಿತ್ತು. ಆಕೆಗೆ ಆಹ್ವಾನ ಕೊಟ್ಟ ಸೈಯ್ಯದ್ ಯಾರು ಎಂಬುದು ಗೊತ್ತಾಗಿಲ್ಲ. ಸಮಾವೇಶದ ವೇದಿಕೆಯಲ್ಲಿದ್ದ ಅತಿಥಿ ಹಾಗೂ ನಿರೂಪಕರು ಯಾರು ಎಂಬ ಕುರಿತು ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.