

ಬೆಂಗಳೂರು: ವಾಲ್ಮೀಕಿ ನಿಗಮದ ವಿಚಾರದಲ್ಲಿ ವಿರೋಧ ಪಕ್ಷದವರು ಕಾಂಗ್ರೆಸ್ ಮೇಲೆ ಕೆಸರೆರಚುತ್ತಿದ್ದರು. ಇದಕ್ಕಾಗಿ ನಾನು ಸ್ವಯಂ ನಿರ್ಧಾರ ಮಾಡಿದ್ದು, ನನ್ನ ರಾಜೀನಾಮೆಗೆ ಯಾರ ಒತ್ತಡವೂ ಇಲ್ಲ ಎಂದು ಸಚಿವ ಸ್ಥಾನದಿಂದ ನಿರ್ಗಮಿತ ಬಿ.ನಾಗೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ಮಾಧ್ಯಮದಲ್ಲಿ ವಿವಿಧ ಚಿತ್ರಣ ನೀಡಲಾಗಿದೆ. ರಾಜ್ಯದ ಜನರಲ್ಲಿ ಆತಂಕ ಇರುವ ರೀತಿಯಲ್ಲಿತ್ತು. ನಿಗಮದಲ್ಲಿ ಆಗಿರುವ ಅವ್ಯವಹಾರದಂತೆ ಎಂಡಿ, ಅಧಿಕಾರಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಸಿಎಂ ಜತೆಗೂ ಚರ್ಚೆ ಮಾಡಿದೆ. ನನ್ನ ಆತ್ಮ್ಸಾಕ್ಷಿಯಂತೆ, ಸ್ವ ಇಚ್ಚೆಯಿಂದ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿ ನೀಡಿ ಯಶಸ್ವಿಯಾಗಿ ಆಡಳಿತ ನಡೆಸಲಾಗುತ್ತಿತ್ತು. ಸಿಎಂ, ಡಿಕೆಶಿ, ಖರ್ಗೆಯವರಿಗೆ ಈ ಬೆಳವಣಿಗೆಯಿಂದ ಯಾರಿಗೂ ಮುಜುಗರ ಆಗಬಾರದೆಂದು ನಿರ್ಧರಿಸಿದೆ ಈ ತೀರ್ಮಾನ ಮಾಡಿದ್ದೇನೆ ಎಂದರು.
ಎಸ್‌ಐ ಟಿ ತನಿಖೆ ನಡೆಯುತ್ತಿದೆ. ನಿಷ್ಪಕ್ಷಪಾತವಾಗಿ ಆಗಬೇಕು. ನಾನ್ು ನಿರ್ದೋಷಿಯಾಗಿ ಬಂದು ಮತ್ತೆ ಮಂತ್ರಿಯಾಗುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ನಿಗಮದ ಹಗರಣದಲ್ಲಿ ನಿಮ್ಮ ಅಳಿಯನ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ. ರಾಜಕೀಯ ಎಂದ ಮೇಲೆ ಆರೋಪ ಇದ್ದಿದ್ದೆ. ಗೂಳಿಹಟ್ಟಿ ಶೇಖರ್ ಆಡಿಯೂ ಕೇಳುತ್ತಿದೆ. ಬಿಜೆಪಿಯವರದ್ದು ಹಗರಣ ಇದೆ.ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಹೇಳಿದ್ದಾರೆ. ಗೋವಿಂದ ಕಾರಜೋಳ ಬಗ್ಗೆಯೂ ಹೇಳಿದ್ದಾರೆ ಈ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡುವುದಾಗಿ ಈಗಾಗಲೇ ಗೃಹ ಮಂತ್ರಿಗಳು ಹೇಳಿದ್ದಾರೆ ಎಂದರು.
ಇಡೀ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ನನ್ನ ಮನಃಪೂರ್ವಕವಾಗಿ ಹೇಳುತ್ತಿದ್ದೇನೆ, ನನ್ನ ಮೇಲೆ ಯಾವ ಒತ್ತಡ ಕೂಡ ಇಲ್ಲ. ಸಿಎಂ, ಡಿಸಿಎಂ ರಾಜಿನಾಮೆ ಕೊಡುವುದು ಬೇಡ ಎಂದೇ ಹೇಳಿದ್ದರು.
ಕ್ಷೇತ್ರದಿಂದ ಜನರೂ ಕೂಡ ಹೀಗೆ ರಾಜಿನಾಮೆ ಕೊಟ್ಟರೆ ಹೇಗೆಂದು ಪ್ರಶ್ನಿಸಿದ್ದರು ಎಂದ ಅವರು ಇಡೀ ಪ್ರಕರಣ ನನ್ನ ಗಮನಕ್ಕೆ ಬಾರದೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ತನಿಖೆಯಲ್ಲಿ ನಿರ್ದೋಷಿ ಎಂದು ಬಂದರೆ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುತ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅದು ನಮ್ಮ ಸಿಎಂ ಹಾಗೂ ವರಿಷ್ಟರಿಗೆ ಬಿಟ್ಟಿದ್ದು. ನಾನು ನಿರ್ದೋಷಿ ಅಂತ ಬಂದಮೇಲೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ತೀರ್ಮಾನ ಮಾಡಲಿ. ಈಗಂತೂ ಆ ರೀತಿ ಭರವಸೆಯನ್ನ ಯಾರೂ ನೀಡಿಲ್ಲ ಎಂದರು.