

ತೀರ್ಥಹಳ್ಳಿ: ತಾಲೂಕಿನ ಕಟಗಾರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರು ಇಲ್ಲದ ಕಾರಣ ಆ ಭಾಗದ ಬಡ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಆಸ್ಪತ್ರೆ ವ್ಯಾಪ್ತಿಯ ಹೆದ್ದೂರಿನಲ್ಲಿ ಈ ವರ್ಷ ಏಕಾಏಕಿ ಮಂಗನ ಕಾಯಿಲೆಯೂ ಕಾಣಿಸಿಕೊಂಡಿರುವುದು ಜನರ ಆತಂಕ ಹೆಚ್ಚಿಸಿದೆ.
ತಾಲೂಕು ಕೇಂದ್ರದಿಂದ ದೂರದಲ್ಲಿರುವ ಈ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದೆ ನಾಲ್ಕು ತಿಂಗಳು ಕಳೆದಿವೆ. ರೋಗಿಗಳಿಗೆ ದಿನದ 24 ತಾಸು ಚಿಕಿತ್ಸೆ ದೊರೆಯಬೇಕು. ಬೇರೆ ಆಸ್ಪತ್ರೆಗಳಿಂದ ವಾರದಲ್ಲಿ ಕೆಲವು ದಿನ ಇಲ್ಲಿಗೆ ನಿಯೋಜನೆ ಮೇಲೆ ಬರುವ ವೈದ್ಯರು ಸಂಜೆ 4 ಗಂಟೆವರೆಗಷ್ಟೇ ಕಾರ್ಯ ನಿರ್ವಹಿಸುತ್ತಾರೆ. ಸ್ಟ್ಾನರ್ಸ್‌ಗಳೂ ಧರಣಿ ನಡೆಸುತ್ತಿದ್ದಾರೆ. ಕಾಂಪೌಂಡರ್ ಮತ್ತು ನರ್ಸ್‌ಗಳು ನೀಡುವ ಚಿಕಿತ್ಸೆಯನ್ನೇ ರೋಗಿಗಳು ಅವಲಂಬಿಸುವ ಅನಿವಾರ್ಯತೆ ಇದೆ.
ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಕಟಗಾರು ಆರೋಗ್ಯ ಕೇಂದ್ರಕ್ಕೆ ತಾಲೂಕಿನ ಬೇರೆ ಆಸ್ಪತ್ರೆಗಳಿಂದ ವೈದ್ಯರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಒಂದು ವಾರದಲ್ಲಿ ಕಾಯಂ ವೈದ್ಯರ ನೇಮಕ ಮಾಡುವ ಪ್ರಯತ್ನ ಮಾಡುತ್ತೇನೆ. ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ವೈದ್ಯರ ನೇಮಕ ದೊಡ್ಡ ಸವಾಲಾಗಿದೆ. ಹೆದ್ದೂರು ಭಾಗದಲ್ಲಿ ಕೆಎ್ಡಿ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ಭಾಗಕ್ಕೆ ಸಂಚಾರ ಘಟಕದ ವ್ಯವಸ್ಥೆ ಮಾಡಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಎಲ್ಲರಿಗೂ ಚಿಕಿತ್ಸೆ ಉಚಿತವಾಗುವಂತೆ ಆರೋಗ್ಯ ಇಲಾಖೆ ಕಮಿಷನರ್ ಜತೆ ಮಾತನಾಡಿದ್ದೇನೆ ಎಂದರು.