

ಬೆಂಗಳೂರು: ತುರ್ತು ವಾಹನಗಳಿಗೆ ದಾರಿ ಬಿಡುವ ಸಲುವಾಗಿ ಸಿಗ್ನಲ್ ಜಂಪ್ ಮಾಡಿ ದಂಡಕ್ಕೆ ಸಿಲುಕಿರುವ ವಾಹನ ಸವಾರರಿಗೆ ಸಂಚಾರ ಪೊಲೀಸರು ದಂಡದಿಂದ ವಿನಾಯಿತಿ ನೀಡಲಿದ್ದಾರೆ.
ನಗರದ ಪ್ರಮುಖ ರಸ್ತೆ ಜಂಕ್ಷನ್, ಸಿಗ್ನಲ್‌ಗಳಲ್ಲಿ ತುರ್ತುವಾಹನ ಆಂಬುಲೆನ್ಸ್‌ಗೆ ಜಾಗ ಮಾಡಿಕೊಡುವುದ್ದಾಗಿ ಸಿಗ್ನಲ್ ಜಂಪ್ ಮಾಡಿದ ವಾಹನ ಸವಾರರಿಗೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಲಾಗುವುದೆಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಹನ ಚಾಲಕರು ಆಂಬ್ಯುಲೆನ್ಸ್‌ಗಳಿಗೆ ಜಾಗ ಬಿಡಲು ಪ್ರಯತ್ನಿಸುವಾಗ ಸಿಗ್ನಲ್‌ಗಳನ್ನು ಜಂಪ್ ಮಾಡಿರುತ್ತಾರೆ. ಈ ವೇಳೆ ಟ್ರಾಫಿಕ್ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿ ದಂಡ ವಿಧಿಸಲಾಗಿರುತ್ತದೆ. ಇದರಿಂದ ವಾಹನ ಸವಾರರು ಅನಗತ್ಯವಾಗಿ ದಂಡಕ್ಕೆ ಸಿಲುಕಿರುತ್ತಾರೆ. ಆದರೆ ಇದನ್ನು ಟ್ರಾಫಿಕ್ ಕಂಟ್ರೋಲ್ ರೂಂನಲ್ಲಿ ಸಂಪೂರ್ಣವಾಗಿ ಕ್ಯಾಮರಾಗಳನ್ನು ಪರಿಶೀಲಿಸಿ ಆಂಬ್ಯುಲೆನ್ಸ್‌ಗಳಿಗೆ ದಾರಿ ಬಿಡಲು ಸಿಗ್ನಲ್ ಜಂಪ್ ಮಾಡಿದ ವಾಹನಗಳಿಗೆ ವಿಧಿಸಲಾಗಿದ್ದ ದಂಡವನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಗರದ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಅಥವಾ ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಷನ್ (ಕೆಎಸ್‌ಪಿ) ಮೂಲಕ ಪರಿಶೀಲನೆ ನಡೆಸಿದ ನಂತರ ಆಂಬ್ಯುಲೆನ್ಸ್‌ಗೆ ದಾರಿ ಬಿಡುವ ವೇಳೆ ವಿಧಿಸಲಾದ ದಂಡವನ್ನು ಕೂಡಲೇ ಮನ್ನಾ ಮಾಡಲಾಗುವುದು ಎಂದರು.
ಅಲ್ಲದೇ ಇನ್ಮುಂದೆ ತುರ್ತು ವಾಹನ ಬರುವುದನ್ನು ಗಮನಿಸಿಕೊಂಡು ಸ್ವಯಂಚಾಲಿತವಾಗಿ ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣಕ್ಕೆ ಪರಿವರ್ತನೆಯಾಗುವಂತೆ ಬದಲಾವಣೆ ಮಾಡಲಾಗುವುದು ಎಂದರು.
ನಗರದ ಪ್ರಮುಖ ೧೦ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಂಬ್ಯುಲೆಸ್ ಬರುವುದನ್ನು ೧೦೦ ಮೀಟರ್ ದೂರದಲ್ಲಿಯೇ ಜಿಪಿಎಸ್ ತಂತ್ರಜ್ಞಾನದ ಮೂಲಕ ಗುರುತಿಸಿ ರೆಡ್ ಸಿಗ್ನಲ್ ಇದಲ್ಲಿ ಕೂಡಲೇ ಹಸಿರು ಬಣ್ಣಕ್ಕೆ ಬರುವಂತೆ ಮಾಡಲಾಗುತ್ತಿದೆ. ಇದರಿಂದ ಮುಂದೆ ನಿಂತ ವಾಹನಗಳು ಸರಾಗವಾಗಿ ಮುಂದೆ ಹೋದರೆ ಹಿಂದೆ ಬಂದ ಆಂಬ್ಯುಲೆಸ್‌ಗೆ ದಾರಿ ಬಿಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.