

ಬೆಂಗಳೂರು: ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಅಗತ್ಯವಿಲ್ಲ(There is no need to hand over Suhas Shetty's murder to the NIA) . ನಮ್ಮ ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಿದ್ದು, 8 ಮಂದಿಯನ್ನು ಬಂಧಿಸಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ(G Parameswara) ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರೋಪಿಗಳ ಬಂಧನವಾಗಿರುವಾಗ ಎನ್‌ಐಎ ತನಿಖೆ ಅಗತ್ಯವಿಲ್ಲ. ಬಿಜೆಪಿಯವರು ಎನ್‌ಐಎ ತನಿಖೆಗೆ ಒತ್ತಾಯಿಸುವುದು ಅವರ ಅಭಿಪ್ರಾಯ ಎಂದರು.
ಸುಹಾಸ್ ಶೆಟ್ಟಿಯ ಮೇಲೆ ಕೊಲೆಗಳು ಸೇರಿದಂತೆ 5 ಕ್ರಿಮಿನಲ್ ಪ್ರಕರಣಗಳಿದ್ದವು. ಈ ಕಾರಣಕ್ಕೆ ಜವಾಬ್ದಾರಿ ಸ್ಥಾನದಲ್ಲಿರುವ ನಾನೂ ಸೇರಿದಂತೆ ಯಾವುದೇ ಪ್ರತಿನಿಧಿಗಳು ಭೇಟಿ ನೀಡಲಿಲ್ಲ ಎಂದು ಹೇಳಿದರು.
ಸುಹಾಸ್ ಶೆಟ್ಟಿ ಕುಟುಂಬಕ್ಕೆ ನ್ಯಾಯ ಕೊಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಕೊಲೆ ಪ್ರಕರಣದಲ್ಲಿ ಯಾರನ್ನೋ ಆರೋಪಿಗಳು ಎಂದು ಬಂಧಿಸಲು ಸಾಧ್ಯವಿಲ್ಲ. ಸುಹಾಸ್‌ಶೆಟ್ಟಿ ಕೊಲೆಯಲ್ಲಿ ಹಿಂದೂ ಸಮುದಾಯದ ಆರೋಪಿಗಳನ್ನು ಬಂಧಿಸುವ ಮೂಲಕ ದಾರಿ ತಪ್ಪಿಸಲಾಗುತ್ತಿದೆ ಎಂಬುದು ಅನಗತ್ಯ ಆರೋಪ ಎಂದರು.
ಸುಹಾಸ್ ಶೆಟ್ಟಿ ಕೊಲೆಗೆ 2022 ರಲ್ಲಿ ಹತ್ಯೆಯಾದ ಫಾಜಿಲ್ ಅವರ ಸಹೋದರ ಆದಿಲ್ ಮೆಹರೊನ್ 5 ಲಕ್ಷ ರೂ. ಸುಪಾರಿ ನೀಡಿರುವ ಬಗ್ಗೆಯೂ ತನಿಖೆಯಾಗುತ್ತಿದೆ. ಕೊಲೆಗೆ ಮೂಲ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿರುವ ಪಿಜಿಗಳ ಮಾಹಿತಿ ಕಲೆ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕೃತ, ಅನಧಿಕೃತ ಪಿಜಿಗಳ ಬಗ್ಗೆ ಸಮಗ್ರ ವಿವರಣೆಗಳು ಪೊಲೀಸ್ ಠಾಣೆಯಲ್ಲಿರಬೇಕು. ಅನಧಿಕೃತವಾಗಿದ್ದರೆ ಅವುಗಳು ನಡೆಯಲು ಹೇಗೆ ಅವಕಾಶ ನೀಡಲಾಗಿದೆ ಎಂಬ ಪ್ರಶ್ನೆ ಕೂಡ ಇದೆ. ಬಿಬಿಎಂಪಿಯಿಂದ ಸ್ಪಷ್ಟ ಅನುಮತಿ ಪಡೆದ ಬಳಿಕವಷ್ಟೇ ಪಿಜಿಗಳು ನಡೆಯಬೇಕು ಎಂದು ಎಚ್‌ಎಸ್‌ಆರ್ ಲೇ ಔಟ್ ಪಿಜಿಯಲ್ಲಿನ ಯುವತಿಯ ನಗ್ನ ಓಡಾಟಕ್ಕೆ ಪ್ರತಿಕ್ರಿಯಿಸಿದರು.