

ಯುವಜನತೆ ಇಂದು ಪದವಿ ಗಿಟ್ಟಿಸುತ್ತಿದ್ದಾರೆ, ಯೋಗ್ಯತೆ ಗಳಿಸದಿದ್ದರೂ ಯೋಗ್ಯತಾಪತ್ರಗಳನ್ನು ಸಂಪಾದಿಸುತ್ತಿದ್ದಾರೆ, ಪೌರರಾಗಿ ದಾಖಲಾಗುತ್ತಿದ್ದಾರೆ, ತಮ್ಮ ಶಿಕ್ಷಣದ ಅವಧಿಯಲ್ಲಿ ಅವರುಗಳು ಕರಗತ ಮಾಡಿಕೊಂಡ ಏಕೈಕ ಕಲೆ ಎಂದರೆ ಆಚಾರ ಕೆಟ್ಟರೂ ಆಕಾರ ಕೆಡದಂತೆ ಉಳಿಸಿಕೊಳ್ಳುವ ಜಾಣತನ. ಇಂಥ ಶಿಕ್ಷಣ ವ್ಯವಸ್ಥೆ ಬದಲಾಗಬೇಕಲ್ಲವೆ?
ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಪ್ರಥಮತಃ ಕುಟುಂಬದ ಸದಸ್ಯ, ತದನಂತರ ಕುಲ ಸಮುದಾಯದ ಪ್ರತಿನಿಧಿ; ಅಂತಿಮವಾಗಿ ರಾಷ್ಟ್ರದ ಹಾಗೂ ವಿಶ್ವದ ಮಹತ್ವಪೂರ್ಣ ಪ್ರಜೆ ಎಂದೆನಿಸುತ್ತಾನೆ. ವ್ಯಕ್ತಿಯ ಮಾಂಸಲ ಶರೀರಕ್ಕೆ ಜನ್ಮಕೊಟ್ಟ ತಾಯಿ-ತಂದೆ, ಶಿಕ್ಷಣ, ಸಂಸ್ಕಾರ ಅನುಗ್ರಹಿಸಿದ ಶಿಕ್ಷಕ-ಪ್ರಾಧ್ಯಾಪಕರು ಹಾಗೂ ಜೀವನಾನುಭವವನ್ನು ಧಾರೆಯೆರೆದು ನಮ್ಮನ್ನು ಸಮಾಜದಲ್ಲಿ ಮುನ್ನಡೆಸುವ ಹಿರಿಯರು- ಇವರೆಲ್ಲರೂ ನಿಃಸ್ವಾರ್ಥವಾಗಿ ಸೇವೆ ಸಲ್ಲಿಸುತ್ತ, ದೈವಪ್ರತಿನಿಧಿಗಳೆಂದೆನಿಸಿ ಪ್ರಾತಃಸ್ಮರಣೀಯರಾಗಿ ಗುರ್ತಿಸಲ್ಪಟ್ಟಿದ್ದಾರೆ.
ಮಕ್ಕಳ ಬಾಲ್ಯ, ಕೌಮಾರ್ಯ, ಯೌವನದ ದಿನಗಳಲ್ಲಿ ಈ ಹಿರಿಯರೆಲ್ಲರೂ ಜೀವನ ನಿರ್ವಹಣೆಗೆ ಬೇಕಾದ ಕಾಯಕ, ಪರಿಶ್ರಮ ಮೊದಲಾದ ವಿಚಾರಗಳ ಬಗ್ಗೆ ತಿಳಿಹೇಳಿ ತರಬೇತಿ ನೀಡಿ ಪದವಿಗಳನ್ನು ಧಾರೆಯೆರೆದಿದ್ದರೂ, ಜೀವನ ನಿರ್ವಹಣೆಯನ್ನು ಕೇವಲ ಯಶಸ್ಸಿಗಷ್ಟೇ ಸೀಮಿತವಾಗಿಸದೆ ಅದನ್ನು ಮೌಲ್ಯಪೂರ್ಣವಾಗಿಸುವಲ್ಲಿ ಹಿರಿಯರ ಮುಂದಿರುವ ಹೋರಾಟವನ್ನು ಊಹಿಸಿದರೆ ಮನಸ್ಸು ತಲ್ಲಣಿಸುತ್ತದೆ. ತರಬೇತಿಯ ಹಾದಿ ಅದೆಷ್ಟು ‘ದುರ್ಗಮ’ ಎಂದೆನಿಸಿದರೂ ಕೈ ಚೆಲ್ಲಿ ಕುಳಿತುಕೊಳ್ಳುವಂತಿಲ್ಲ! ಹಿರಿಯರು ಮಕ್ಕಳ ಮುಂದಿಡುತ್ತಿರುವ ಹತ್ತಾರು ಆದರ್ಶಗಳಿಗೆ ಸ್ವತಃ ತಾವೇ ಸ್ವಲ್ಪಮಟ್ಟಿಗಾದರೂ ಮಾದರಿಯಾಗಬೇಕು ತನ್ಮೂಲಕ ಮಕ್ಕಳ ಶೀಲ ನಿರ್ವಣಕ್ಕೂ ವಿಶೇಷ ಗಮನ ಹರಿಸಲೇಬೇಕಿದೆ.
ಭರ್ತೃಹರಿಯ ನೀತಿಶತಕ ಪ್ರಸ್ತಾಪಿಸುತ್ತೆ: ಐಶ್ವರ್ಯಕ್ಕೆ ಸೌಜನ್ಯವೂ, ಪರಿಶ್ರಮಕ್ಕೆ ಮಿತಭಾಷಣವೂ, ಜ್ಞಾನಕ್ಕೆ ಉಪಶಮನವೂ, ವಿದ್ಯೆಗೆ ವಿನಯವೂ, ಹಣಕ್ಕೆ ಸತ್ವಾತ್ರವ್ಯಯವೂ, ತಪಸ್ಸಿಗೆ ಕೋಪವಿಲ್ಲದಿರುವಿಕೆಯೂ, ಪ್ರಭಾವಿಗೆ ಕ್ಷಮೆಯೂ, ಧರ್ಮಕ್ಕೆ ಫಲಾಪೇಕ್ಷೆ ಇಲ್ಲದಿರುವುದು ಭೂಷಣಗಳೆಂದು ಎನಿಸಿದ್ದರೂ ಎಲ್ಲಕ್ಕೂ ಮಿಗಿಲಾಗಿ ಶೀಲವೇ ಶ್ರೇಷ್ಠ ಭೂಷಣವೆಂದು ತಿಳಿಯಬೇಕು. ಆದ್ದರಿಂದ ಮಕ್ಕಳನ್ನು ಅರ್ಥಾತ್ ಕಿರಿಯರನ್ನು ಸನ್ಮಾರ್ಗದಲ್ಲಿ ನಡೆಸಿ ಆದರ್ಶವಂತರಾಗಬೇಕಾದ ಜೀವನದ ಪಥದಲ್ಲಿ ಹಿರಿಯರು ‘ಮಾತಾಡಿ’ ತೋರುವುದಕ್ಕಿಂತ ‘ತಾ ಮಾಡಿ’ ತೋರುವುದು ಅತ್ಯವಶ್ಯಕವೂ ಮತ್ತು ಪರಿಣಾಮಕಾರಿಯೂ ಎಂದೆನಿಸುತ್ತದೆ.
ಕೌಟುಂಬಿಕ ಶಿಕ್ಷಣ: ‘ಮನೆಯೇ ಮೊದಲ ಪಾಠಶಾಲೆ’ ಅಷ್ಟೇ ಅಲ್ಲ, ‘ಪ್ರಯೋಗಶಾಲೆ’ಯೂ ಹೌದು. ಹಸಿಯ ಜೇಡಿಮಣ್ಣು, ಶಿಲೆ, ಮರದ ದಿಮ್ಮಿಯಲ್ಲಿ ವಿಗ್ರಹರೂಪವನ್ನು ಮೂಡಿಸಬೇಕಾದ ಸವಾಲಿನ ಅವಧಿ ಇದು. ತಪ್ಪು ಮಾಡುವ ಸ್ಥಾನದಲ್ಲಿ ಮಕ್ಕಳಿದ್ದರೆ ತಿದ್ದುವ ಮಹತ್ತರ ಸ್ಥಾನದಲ್ಲಿ ಮಾತಾಪಿತೃಗಳಿದ್ದಾರೆ. ತಾವು ಗೃಹಸ್ಥಾಶ್ರಮಿಗಳಾಗಿದ್ದು ಬಾಲ್ಯದಿಂದ ಯೌವನಸ್ತರದಲ್ಲಿ ತಮ್ಮ ಸುಖ ಹಾಗೂ ಆಸಕ್ತಿಯ ಸ್ತರವು ಬದಲಾಗಿದ್ದರೂ ಮಕ್ಕಳ ಬಾಲ್ಯವನ್ನು ನಿರ್ಲಕ್ಷಿಸುವಂತಿಲ್ಲ, ಉಪೇಕ್ಷಿಸುವಂತಿಲ್ಲ. ಮಕ್ಕಳಿಗೆ ಜೀವನ ಶಿಕ್ಷಣ ನೀಡುವಾಗ ಅದೆಷ್ಟು ಎಚ್ಚರಿಕೆಯಿಂದಿರಬೇಕೆಂಬ ವಿಚಾರವೇ ಅಧ್ಯಯನಯೋಗ್ಯ. ಸೋಜಿಗದ ಸಂಗತಿಯೆಂದರೆ ನಮಗೆಲ್ಲ ಚಿರಪರಿಚಿತವಾದ Teacher’s Training Institute ವಿಚಾರದ ಜೊತೆಜೊತೆಗೆ Parent’s Training Instituteನ ಅವಶ್ಯಕತೆ ಎದ್ದು ಕಾಣುತ್ತಿರುವುದು ಉತ್ಪ್ರೇಕ್ಷೆಯಲ್ಲ. ಯೋಗ್ಯ ಮಾತಾಪಿತೃಗಳು ತಮ್ಮ ಮಕ್ಕಳಿಂದ ಇತಿಹಾಸ ನಿರ್ವಿುಸಿದ ದೃಷ್ಟಾಂತಗಳು ನಮ್ಮ ಮುಂದಿವೆ.
ತನ್ನದಲ್ಲದ ತಪ್ಪಿಗಾಗಿ ವಿನಾಕಾರಣ ಶಿಕ್ಷೆಗೆ ಒಳಪಟ್ಟ ಬಾಲಕ ನರೇಂದ್ರನಾಥನ ದುಃಖ, ಅವಮಾನದ ಸನ್ನಿವೇಶಕ್ಕೆ ಹೆತ್ತತಾಯಿ ಭುವನೇಶ್ವರಿ ಇತ್ತ ದಿಟ್ಟ ಮಾರ್ಗಸೂಚಿ ಏನು? ‘ಮಗು, ನಿನ್ನ ಕಡೆಯಿಂದ ನೀನು ಸರಿಯಾಗಿರುವಾಗ ಇನ್ನೇನು ಚಿಂತೆ? ನೋಡು, ನಿನಗೆ ಅನ್ಯಾಯವಾಗಬಹುದು, ಪರಿಸ್ಥಿತಿ ನಿನ್ನ ವಿರುದ್ಧವೂ ಆಗಬಹುದು; ಏನೇ ಆದರೂ ನೀನು ಮಾತ್ರ ಸರಿಯಾದದ್ದನ್ನೇ ಮಾಡುತ್ತ ಬಾ... ನಿನ್ನ ಜೀವನದುದ್ದಕ್ಕೂ ಪರಿಶುದ್ಧನಾಗಿರಬೇಕು, ಪವಿತ್ರನಾಗಿರಬೇಕು. ನಿನ್ನ ಆತ್ಮಗೌರವವನ್ನು ಯಾವಾಗಲೂ ಕಾಪಾಡಿಕೊ; ಹಾಗೆಯೇ ಇತರರ ಗೌರವಕ್ಕೂ ಧಕ್ಕೆ ತರದಂತೆ ನೋಡಿಕೊ. ಸಮಾಧಾನದಿಂದ ಇರುವುದನ್ನು ಅಭ್ಯಾಸ ಮಾಡು. ಆದರೆ ಸಮಯ ಬಂದರೆ ಕಲ್ಲೆದೆಯವನಾಗಿರುವುದಕ್ಕೂ ಸಿದ್ಧನಾಗಿರು’.
ಫ್ರಾನ್ಸ್ ದೇಶದ ಚಕ್ರವರ್ತಿ 9ನೇ ಲೂಯಿ ದಿ ಗ್ರೇಟ್ನ ಹೆತ್ತಮ್ಮ ಮಹಾರಾಣಿ ಬ್ಲಾ್ಯಕ್ ಎಚ್ಚರಿಸಿದ್ದು ಹೀಗೆ-‘ಮಗನೇ, ನೀನು ಒಳ್ಳೆಯ ಬದುಕು ನಡೆಸಿ, ಉತ್ತಮ ಚಾರಿತ್ರ್ಯವಂತನಾಗಿ ಇರುವವರೆಗೆ ಮಾತ್ರ ನಾನು ನಿನ್ನನ್ನು ಪ್ರೀತಿ-ಮಮತೆಗಳಿಂದ ಕಾಣುತ್ತೇನೆ. ಚಾರಿತ್ರ್ಯ ಕುಸಿದು ನೀನು ನೀತಿಭ್ರಷ್ಟನಾದರೆ ಸಿಂಹಾಸನವನ್ನೇರುವ ಯೋಗ್ಯತೆ ನಿನಗಿರುವುದಿಲ್ಲ’.
ಪ್ರಸ್ತಾಪಿತ ಎರಡೂ ಘಟನೆಗಳಲ್ಲಿ ಜೀವನ ಶಿಕ್ಷಣ ಮತ್ತು ಅದಕ್ಕೆ ಬೇಕಾದ ಮಹಾನ್ ಆದರ್ಶಗಳ ಪರಿಚಯ ನಮಗಾಗುತ್ತದೆ. ಮಕ್ಕಳನ್ನು ಲೌಕಿಕ ಶಿಕ್ಷಣ ವಿಷಯದಲ್ಲಿ ಅಲಂಕೃತರನ್ನಾಗಿಸಿದರೂ ಅವರು ದುಷ್ಟರಾಗಿ ಉಳಿದಲ್ಲಿ ಮಣಿಯಿಂದ ಭೂಷಿತವಾದ ಸರ್ಪದೋಪಾದಿಯಲ್ಲಿ ಸಮಾಜದಲ್ಲಿ ಭಯವನ್ನು ಉತ್ಪಾದಿಸುವವರೇ ಆಗುತ್ತಾರೆ, ಅನ್ಯಾಯ, ಅಧರ್ಮಗಳ ಪ್ರತಿನಿಧಿಗಳೇ ಆಗಿಬಿಡುತ್ತಾರೆ!
ಮನುಷ್ಯರು ಸರ್ವಾಂತರ್ಯಾಮಿಯಾದ ಭಗವಂತನ ಇರುವಿಕೆಯ ವಿಚಾರದಲ್ಲೇ ಸಂಶಯಗ್ರಸ್ತರಾದರೆ ಸಹಮಾನವ ರೊಂದಿಗೆ ವಿಶ್ವಾಸದಿಂದ ವ್ಯವಹರಿಸುವ ಮಾತಂತೂ ದೂರ ಉಳಿಯುತ್ತದೆ! ಆದ್ದರಿಂದ ಕಣ್ಣು ತೆರೆದು ಜಗತ್ತನ್ನು ತನ್ನದೆಂದು ತಿಳಿದು ಹೃತ್ಪೂರ್ವಕವಾಗಿ ವ್ಯವಹರಿಸುವ ಜೀವನಕಲೆ ಪಾಲಕರಿಂದ ಅನುಗ್ರಹಿತವಾಗಬೇಕು.
ಶಾಲಾ ಕಾಲೇಜು ಶಿಕ್ಷಣ: ‘ಒಂದು ಉತ್ತಮ ಶಾಲೆಯನ್ನು ತೆರೆದರೆ ಭವಿಷ್ಯದಲ್ಲಿ ನೂರು ಬಂಧಿಖಾನೆಗಳನ್ನು ತೆರೆಯುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಮಹಾತ್ಮರು. ಆದರೆ ಇಲ್ಲಿ ಪ್ರತಿಪಾದಿತವಾದ ಶಾಲೆಗಳ ಮಹತ್ವ ಹಾಗೂ ಶಾಲೆಗಳಲ್ಲಿ ಮೂಡಿಬರಬೇಕಾದ ಆದರ್ಶಪೂರ್ಣ ವಾತಾವರಣವು ಮರೀಚಿಕೆಯಾದಂತಿದೆ. ನಾನಿ ಪಾಲ್ಕಿವಾಲಾ ಹೇಳುತ್ತಾರೆ- ‘ಸ್ವತಂತ್ರಪೂರ್ವದಲ್ಲಿ
ನಾವು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಶಾಲಾಕೊಠಡಿಗಳು ಸೋರುತ್ತಿದ್ದವು. ಸ್ವಾತಂತ್ರಾ್ಯನಂತರ ಇಂದು ನಮ್ಮ ಪರೀಕ್ಷಾ ಪ್ರಶ್ನೆಪತ್ರಿಕೆಗಳೂ ಯಥೇಚ್ಛವಾಗಿ ಸೋರಿಕೆಯಾಗುತ್ತಿವೆ!’. ಮೌಲ್ಯ ಶಿಕ್ಷಣವು ಕಣ್ಮರೆಯಾಗಿದೆ. ಇತ್ತೀಚೆಗೆ ಶಿಕ್ಷಕರೊಬ್ಬರು ನೊಂದುಕೊಂಡು ನನ್ನಲ್ಲಿ ಹಂಚಿಕೊಂಡ ಅಭಿಪ್ರಾಯವಿದು - ‘ಪೂಜ್ಯರೇ, ಮರ್ಯಾದಸ್ಥ ಶಿಕ್ಷಕನ ವೃತ್ತಿಜೀವನದಲ್ಲಿ ಅನುಭವಕ್ಕೆ ಬರುವ ಎರಡು ಘೊರ ಸನ್ನಿವೇಶಗಳೆಂದರೆ ಪರೀಕ್ಷೆಗಳನ್ನು ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದು’. ಇದು ಶಿಕ್ಷಣ ಪ್ರಪಂಚದ ದುರವಸ್ಥೆಯನ್ನು ಎತ್ತಿ ಹಿಡಿದ ಕನ್ನಡಿ.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ರಾಷ್ಟ್ರದ ಭವಿಷ್ಯ ಮತ್ತು ರಾಷ್ಟ್ರವೇ ಆಗಿದ್ದಾರೆ. ವ್ಯಕ್ತಿತ್ವಕ್ಕೆ ಶ್ರೀಮಂತಿಕೆ ನೀಡುವ ಸತ್ಯಸಂಧತೆ, ಕರುಣೆ, ನಿಃಸ್ವಾರ್ಥತೆ, ಪ್ರಾಮಾಣಿಕತೆ, ಸಹಾನುಭೂತಿ, ಪರೋಪಕಾರ, ಇವುಗಳನ್ನು ಪರಿಚಯಿಸಬೇಕಲ್ಲದೆ ವಿದ್ಯಾರ್ಥಿಗಳು ಎಲ್ಲ ಮೌಲ್ಯಗಳನ್ನು ತಮ್ಮ ಶಿಕ್ಷಕರ ವ್ಯಕ್ತಿತ್ವ ಹಾಗೂ ನಡವಳಿಕೆಗಳಲ್ಲಿ ಕಾಣಬೇಕು.
ಶಿಕ್ಷಕರು ನಾಲ್ಕು ಗೋಡೆಗಳ ನಡುವೆ ಪಾಠ ಮಾಡಬೇಕು, ಆದರೆ ವಿದ್ಯಾರ್ಥಿಗಳ ಬದುಕು-ಭವಿತವ್ಯಗಳನ್ನು ನಾಲ್ಕೂ ದಿಕ್ಕುಗಳಿಗೆ ವಿಸ್ತರಿಸಬೇಕು! ಹಿತವಾದ, ಮಿತವಾದ ಮಾತುಗಳಿಂದ ಶುದ್ಧಭಾವನೆಗಳೊಂದಿಗೆ ಬದುಕುವುದೇ ಜೀವನಧರ್ಮ. ಅದೇ ‘ತಪಸ್ಸು’ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.
ನಮ್ಮ ವಿಶ್ವವಿದ್ಯಾಲಯಗಳ ದುರವಸ್ಥೆಯಂತೂ ಹೇಳತೀರದು. ಮನುಷ್ಯನಾದರೋ ಜನ್ಮತಃ ಮೃಗ, ಸಂಸ್ಕಾರಗಳಿಂದ ಮಾನವ; ಸಾಧನೆಯಿಂದ ದೇವತಾ! ಶಿಕ್ಷಣವು ಇಂದು ರಾಷ್ಟ್ರದ ಅಭ್ಯುದಯಕ್ಕೆ ಅಡ್ಡವಾಗಿ ನಿಂತ ಬಹುದೊಡ್ಡ ಹೆಮ್ಮಾರಿಯೇ ಆಗಿದೆ. ಮಾನವನು ಇಲ್ಲಿ ಮಾನವಸಂಪನ್ಮೂಲವಾಗಿ ಅಭಿವೃದ್ಧಿ ಹೊಂದುತ್ತಿಲ್ಲ. Human Resource ಸಂಸ್ಥೆಗಳು ಸದಾ ಗಲಾಟೆಗಳಿಗೆ, ದೇಶದ್ರೋಹದ ಕೆಲಸಗಳಿಗೆ, ಮಾದಕವಸ್ತುಗಳ ಬಳಕೆಗೆ, ಪರೀಕ್ಷಾ ನಕಲಿಗೆ ಹಾಗೂ ನಕಲು ಅಂಕಪಟ್ಟಿಗಳ ಸಂಪಾದನೆಗೆ ನಿಂತು Demon Resource Centres ಆಗಿರುವುದು ಆಘಾತಕಾರಿ. ಯುವಜನತೆ ಇಂದು ಪದವಿ ಗಿಟ್ಟಿಸುತ್ತಿದ್ದಾರೆ, ಯೋಗ್ಯತೆ ಗಳಿಸದಿದ್ದರೂ ಯೋಗ್ಯತಾಪತ್ರಗಳನ್ನು ಸಂಪಾದಿಸುತ್ತಿದ್ದಾರೆ, ಪೌರರಾಗಿ ದಾಖಲಾಗುತ್ತಿದ್ದಾರೆ, ತಮ್ಮ ಶಿಕ್ಷಣದ ಅವಧಿಯಲ್ಲಿ ಅವರುಗಳು ಕರಗತ ಮಾಡಿಕೊಂಡ ಏಕೈಕ ಕಲೆ ಎಂದರೆ ಆಚಾರ ಕೆಟ್ಟರೂ ಆಕಾರ ಕೆಡದಂತೆ ಉಳಿಸಿಕೊಳ್ಳುವ ಜಾಣತನ!
ಸಾರ್ವಜನಿಕ ಕ್ಷೇತ್ರ: ಸುಭಾಷಿತ ಹೇಳುವಂತೆ, ಅವಿವೇಕಿಗಳು ವಿದ್ಯೆಯನ್ನು ವಿನಾಶಕ್ಕೆ, ಸಂಪತ್ತನ್ನು ಅಹಂಕಾರ ಪ್ರದರ್ಶನಕ್ಕೆ ಮತ್ತು ಶಕ್ತಿ ಸಾಮರ್ಥ್ಯಗಳನ್ನು ಸಹಮಾನವರನ್ನು ಹಿಂಸಿಸುವುದಕ್ಕಾಗಿ ಬಳಸುತ್ತಿದ್ದಾರೆ. ಶರೀರ ಮತ್ತು ಮನಸ್ಸಿನಲ್ಲಿ ಶುಚಿತ್ವವಾಗಲಿ, ಮಾತಿನಲ್ಲಿ ಸತ್ಯನಿಷ್ಠೆಯಾಗಲೀ ಅಪರೂಪವಾಗುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರಕ್ಕಾಗಿ ಪ್ರಾಣತ್ಯಾಗದ ಅವಶ್ಯಕತೆಯಿತ್ತು, ಸ್ವಾತಂತ್ರಾ್ಯನಂತರ ರಾಷ್ಟ್ರಕ್ಕಾಗಿ ಬದುಕಬೇಕೆಂಬ ಆದರ್ಶ ನಮ್ಮ ಮುಂದೆ ಇರಬೇಕಾಗಿತ್ತು.
We are not yet human beings but just candidates for humanity’ ಎಂಬ ಅನುಭಾವಿಯ ಮಾತು ದಿನೇದಿನೆ ಸತ್ಯವೆನಿಸುತ್ತಿದೆ.
ದೇಶದ ಜನಸಂಖ್ಯೆಯಲ್ಲಿ ಸಿಂಹಪಾಲಿನವರು ಒಂದೋ ಧೈರ್ಯಹೀನರು, ಇಲ್ಲವೋ ಸೌಜನ್ಯಹೀನರು. ಜೀವನವೆಂಬುದು ಯಶಸ್ವಿಯಾಗುವುದು ಮೌಲ್ಯಗಳ ಅನುಷ್ಠಾನದಿಂದ ಎಂಬ ಪರಿಜ್ಞಾನ ಮರೀಚಿಕೆಯಂತಾಗಿದೆ. ‘ಕಾರ್ಯವಾಸಿ ಕತ್ತೆ ಕಾಲು ಹಿಡಿ’ ಎಂಬಂತೆ ಹತ್ತಾರು ವಾಮಚಮತ್ಕಾರಗಳಿಂದ ನೌಕರಿಗಿಟ್ಟಿಸುತ್ತಾರೆ, ಇಲ್ಲಿಯವರೆಗೆ ಠಿಛಿಞಟಟ್ಟಚ್ಟಢ ಆಗಿದ್ದ ಇವರು ವ್ಯವಸ್ಥೆಗೆ ‘permanent worry’ ಆಗಿ ಪರಿಣಮಿಸುತ್ತಾರೆ!
ಅಕ್ಷರಸ್ಥರೆನಿಸಿಕೊಂಡವರಲ್ಲಿ ಕೆಲವರು ಉದ್ವೇಗಕಾರಿ ಯಾಗಿ ದುಷ್ಕೃತ್ಯವನ್ನೆಸಗುವ ಘಾತಕರಾಗಿ ಪರಿಣಮಿಸಿರುವುದು ಇಂದು ಸುಸ್ಪಷ್ಟ. ಅವರು ಬಹುಕಾಲ ಬಾಳಲಾರರೆಂಬುದೂ ಲೋಕನಿಯಮ. ಕೆಲವೊಮ್ಮೆ ಅವರ ವಿಕೃತ ಸಾಹಸವು ಸುಸೈಡಲ್ ಬಾಂಬಿಂಗ್ನಲ್ಲಿ ಮುಕ್ತಾಯವಾಗುತ್ತದೆ. ಸಮಾಜದ ಪ್ರತಿಯೊಂದು ಸಮುದಾಯದಲ್ಲೂ ಸಜ್ಜನರಿರುವುದು ದಿಟವಾದರೂ ಕೆಲವೊಮ್ಮೆ ಅವರಲ್ಲೂ ಮಂಕುಕವಿದ ಮೋಹದಿಂದ ಹೀಗೆ ಮಾತನಾಡುವವರೂ ಉಂಟು-‘ನಮ್ಮಲ್ಲಿ ಯಾರೋ ಕೆಲವರು ದುಷ್ಟರಂತೆ, ಅನೈತಿಕರಂತೆ ನಡೆದುಕೊಂಡಾಕ್ಷಣ
ನೀವೇಕೆ ಇಡೀ ಸಮುದಾಯವನ್ನೇ ಗುರಿಮಾಡಿಕೊಂಡು ಟೀಕಿಸುತ್ತೀರಿ?’ ಈ ಪ್ರಶ್ನೆಗೆ ಸುಭಾಷಿತವೊಂದು ಹೀಗೆ ಹೇಳುತ್ತದೆ:
ಏಕೇನ ಶುಷ್ಕವೃಕ್ಷೇಣ ದಹ್ಯಮಾನೇನ ವಹ್ನಿನಾ|
ದಹ್ಯತೇ ಕಾನನಂ ಸರ್ವಂ ದುಷ್ಪುತ್ರೇಣ ಕುಲಂ ಯಥಾ||
ಅಡವಿಯಲ್ಲಿ ಒಂದು ಒಣಮರಕ್ಕೆ ಬೆಂಕಿ ಹತ್ತಿದರೂ ಅಡವಿಯೇ ಸುಟ್ಟುಹೋಗುತ್ತದೆ. ಅಂತೆಯೇ ಒಬ್ಬ ದುಷ್ಟಪುತ್ರನಿಂದ ಕುಲವೇ ಹಾಳಾಗುತ್ತದೆ. ಬೆರಳಿಗೆ ಕ್ಯಾನ್ಸರ್ ಬಂದಿದ್ದರೆ ಶಸ್ತ್ರಚಿಕಿತ್ಸೆಯಿಂದ ಅದನ್ನು ನಿಮೂಲನ ಮಾಡಬೇಕು, ಇಲ್ಲದಿದ್ದರೆ ಮುಂದೆ ಅದು ಕೈಕಾಲುಗಳಿಗೆ ಅಲ್ಲದೆ ಇಡೀ ಶರೀರಕ್ಕೇ ವಿಸ್ತರಿಸಿ ಪ್ರಾಣಕ್ಕೆ ಸಂಚಕಾರ ತರುವುದೂ ದಿಟ.
ವೈಯಕ್ತಿಕ ಸ್ವಾತಂತ್ರ್ಯದ ಮೌಲ್ಯದೊಂದಿಗೆ ಸಾಮಾಜಿಕ ಹೊಣೆಗಾರಿಕೆಯ ಮೌಲ್ಯವು ಮೇಳೈಸಿದಾಗ ಮಾನವ ಮಹಾತ್ಮನಾಗುತ್ತಾನೆ. ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿದ್ದು, ‘ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ಜೀವನ, ಉಳಿದವರು ಬದುಕಿದ್ದರೂ ಸತ್ತಂತೆ’.
ಧಾರ್ವಿುಕ ಕ್ಷೇತ್ರ: ಭಗವಾನ್ ಶ್ರೀರಾಮಕೃಷ್ಣರೆನ್ನುತ್ತಾರೆ-‘ವೈದ್ಯನನ್ನು ಕಂಡಾಗ ನಮಗೆ ನಮ್ಮ ಕಾಯಿಲೆ ನೆನಪಾಗುವಂತೆ, ವಕೀಲನನ್ನು ಕಂಡಾಗ ನಮ್ಮ ಮೊಕದ್ದಮೆ ನೆನಪಾಗುವಂತೆ, ಸಂನ್ಯಾಸಿಯನ್ನು ಕಂಡಾಗ ನಮಗೆ ದೇವರ ನೆನಪಾಗಬೇಕು’. ಆಧ್ಯಾತ್ಮಿಕ ಕ್ಷೇತ್ರದ ಪ್ರತಿನಿಧಿಗಳಿಗೆ ಇದೊಂದು ಧ್ಯೇಯವಾಕ್ಯ.
ಬುದ್ಧ, ಕ್ರಿಸ್ತ, ಶಂಕರ, ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದರೇ ಮೊದಲಾದವರು ತಮ್ಮ ಹೃದಯದಲ್ಲಿ ‘ಕರುಣೆ’ ಎಂಬ ಅಮೃತೋಪಮ ವಸ್ತುವಿಗೆ ಆಶ್ರಯವಿತ್ತು ಅದನ್ನು ಜಗತ್ತಿನೆಡೆಗೆ ಹರಿಸುತ್ತ ಬಂದರು. ‘Love is the Law’ ಎಂಬುದು ಅವರುಗಳ ಧ್ಯೇಯವಾಗಿತ್ತು. ಕರುಣಾರಸವನ್ನು ಪಡೆದುಕೊಳ್ಳುತ್ತ ಮತ್ತೆ ಮತ್ತೆ ಕೈಚಾಚಿ ಮನುಷ್ಯರು ‘ಭಿಕ್ಷುಕರು’ ಆಗಿ ಉಳಿದರು. ಪಡೆಯುವ ವಿಷಯದಲ್ಲಿ ನಿಷ್ಣಾತಿ ಗಳಿಸಿದ್ದ ಜನರು ಅದನ್ನು ಇತರರಿಗೆ ಕೊಡುವ ವಿಚಾರದಲ್ಲಿ ಮಹಾಭಿಕ್ಷುಕರಾದದ್ದು ದುರ್ದೈವ.
ಧಾರ್ವಿುಕ ಹಾಗೂ ಆಧ್ಯಾತ್ಮಿಕ ಸಂಸ್ಥೆಗಳಿಂದ ಸಮಾಜ ಬಯಸುತ್ತಿರುವುದು ಮೌಲ್ಯಗಳಿಂದ ಜೀವನವನ್ನು ಶ್ರೀಮಂತವಾಗಿಸಿಕೊಳ್ಳಲು ಬೇಕಾದ ಜೀವನಕಲೆಯನ್ನು. ತ್ಯಾಗ, ವೈರಾಗ್ಯ, ಸೇವೆ, ಪರೋಪಕಾರಗಳ ಬಗ್ಗೆ ಸಾಧುವಾದವನು ಜ್ವಲಂತ ಉದಾಹರಣೆಯಾಗಬೇಕಿದೆ.‘ಜಗತ್ತು ಒಂದು ಗರಡಿ ಮನೆ, ನಾವಿಲ್ಲಿ ಬಲಿಷ್ಠರಾಗಲು ಬಂದಿದ್ದೇವೆ’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ‘ನಾನು ರಾತ್ರಿ ನಿದ್ರೆ ಬರುವವರೆಗೆ ಜೀವನದ ಕಡೆಯ ಗಳಿಗೆಯವರೆಗೆ ಕಲಿಯುತ್ತ ಸಾಗುತ್ತೇನೆ’ ಎಂದರು ಶ್ರೀರಾಮಕೃಷ್ಣರು. ಜನರನ್ನು ವೈಯಕ್ತಿಕ ಜೀವನದಲ್ಲಿ ಹಾಗೂ ಸಾಂಘಿಕ ಜೀವನದಲ್ಲಿ ಎತ್ತಿ ನಿಲ್ಲಿಸುವುದೇ ಧರ್ಮ. ಅದು ಕೇವಲ ಆಚಾರ ಸಂಹಿತೆಯಷ್ಟೇ ಅಲ್ಲ, ನಂಬಿಕೆಗಳ ಒಡಂಬಡಿಕೆಯಷ್ಟೇ ಅಲ್ಲ, ಬದಲಾಗಿ ಮೌಲ್ಯಗಳ ಅನುಷ್ಠಾನ ಎಂಬ ಸತ್ಯವನ್ನು ಜನತೆ ಅರಿಯುವಂತಾದಾಗ, ಅರ್ಥಾತ್ ಮನೆ, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು ಹಾಗೂ ಧಾರ್ವಿುಕ ಸಂಸ್ಥೆಗಳು ಸಂಸ್ಕೃತಿ ಪ್ರಸರಣ ಧಾಮಗಳಾದಾಗ ಸಮಾಜಕ್ಕೆ ಜೈಲುಗಳ ಹಂಗು ಇರುತ್ತದೆಯೇ?
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)