

ಶಿವಮೊಗ್ಗ: ದಶಕಗಳ ಹಿಂದೆ ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟ ಆರಂಭವಾದ ಪರಿಣಾಮ ಕಾರ್ಮಿಕ ದಿನಾಚರಣೆ ಅಸ್ತಿತ್ವಕ್ಕೆ ಬಂದಿತು ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಿವಪ್ಪ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದಿಂದ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿ, ಮೊದಲು ಅಮೆರಿಕದಲ್ಲಿ ದುಡಿಮೆಗೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟ ಪ್ರಾರಂಭವಾಗಿ ಬಳಿಕ ವಿಶ್ವಸಂಸ್ಥೆಯಿಂದ ಕಾರ್ಮಿಕ ದಿನಾಚರಣೆ ನಿಗದಿಯಾಯಿತು ಎಂದರು.
ಅಸಂಘಟಿಕತ ಕಾರ್ಮಿಕರಿಗೆ ಇವತ್ತಿಗೂ ಜೀವನದ ಭದ್ರತೆ ಇಲ್ಲ. ದುಡಿಯುವ ಶಕ್ತಿ ಇರುವವರೆಗೆ ಮಾತ್ರ ಅವರಿಗೆ ಕೂಲಿ ಸಿಗುತ್ತದೆ. ಕಾರ್ಮಿಕ ಕಾನೂನುಗಳು ಎಲ್ಲರಿಗೂ ಅನ್ವಯವಾಗದೆ ಇರುವುದರಿಂದ ಹಮಾಲಿ ಕಾರ್ಮಿಕರು ನ್ಯಾಯಬದ್ಧ ಕಾನೂನಿನಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ನಮಗೂ ನಿವೃತ್ತಿ ವೇತನ ನೀಡಬೇಕು. ಇದು ನಮ್ಮ ಬಹುವರ್ಷದ ಬೇಡಿಕೆ. ಶಕ್ತಿಹೀನರಾದರೆ ಯಾರೂ ನಮ್ಮನ್ನು ಮಾತನಾಡಿಸುವುದಿಲ್ಲ. ಹೀಗಾಗಿ ಹಮಾಲಿ ಕಾರ್ಮಿಕರು ಸಂಘಟಿತರಾಗಿ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಮಣಿ, ಉಪಾಧ್ಯಕ್ಷ ಶೇಖ್ ಇಮ್ರಾನ್, ಕಾರ್ಯದರ್ಶಿ ಎಚ್.ಶಿವಾನಂದಪ್ಪ, ಪ್ರಮುಖರಾದ ಜಾವೀದ್, ಇಫ್ರಾನ್, ಯಶವಂತ, ಸಲೀಂ, ಎ.ಪಳನಿ, ಶರವಣ, ಸಂತೋಷ್‌ಕುಮಾರ್, ವೆಂಕಟರಮಣ, ಎಂ.ಕೆ.ಬುಡೇನ್ ಖಾನ್ ಇತರರಿದ್ದರು.