

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಮುಷ್ಕರ, ಪ್ರತಿಭಟನೆ, ಕೋಮು ಗಲಭೆ, ಕರ್ಫ್ಯೂ, ಬಾಂಬ್ ಸ್ಫೋಟ ಮತ್ತು ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಸಮಯದಲ್ಲಿ ಪೊಲೀಸರು ಹುತಾತ್ಮರಾದರೆ ಮಾತ್ರ ಅನುಗ್ರಹ ಪೂರ್ವಕ (30 ಲಕ್ಷ ರೂ.) ಪರಿಹಾರ ಸಿಗಲಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಥವಾ ಆರೋಪಿಗಳ ಪತ್ತೆಗೆ ವಾಹನದಲ್ಲಿ ತೆರಳುವಾಗ ರಸ್ತೆ ಅಪಘಾತಕ್ಕೆ ಒಳಗಾದರೆ ಪರಿಹಾರ ಸಿಗುವುದಿಲ್ಲ... ಇಂತಹದೊಂದು ದ್ವಂದ್ವ ಸುತ್ತೋಲೆ ಹೊರಡಿಸುವ ಮೂಲಕ ಹುತಾತ್ಮ ಪೊಲೀಸ್ ಕುಟುಂಬಗಳಿಗೆ ಕೊಡುವ ಪರಿಹಾರಕ್ಕೆ ಗೃಹ ಇಲಾಖೆ ಕೊಕ್ಕೆ ಹಾಕಿದೆ.
ಜೂನ್ 7ರಂದು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಲು ಆಂಧ್ರಪ್ರದೇಶಕ್ಕೆ ತೆರಳಿದ್ದ ಶಿವಾಜಿನಗರ ಠಾಣೆಯ ಪೊಲೀಸರ ತಂಡ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಪಿಎಸ್ಐ ಅವಿನಾಶ್ ಮತ್ತು ಕಾನ್ಸ್ಟೆಬಲ್ ಅನಿಲ್ ಮುಲಿಕ್ ಅಸುನೀಗಿದ್ದರು. ಅನಾಹುತ ಸಂಭವಿಸಿ 5 ತಿಂಗಳು ಕಳೆದರೂ ನೊಂದ ಕುಟುಂಬಗಳಿಗೆ ಇಲಾಖೆಯಿಂದ ಬಿಡಿಗಾಸೂ ಸಿಕ್ಕಿಲ್ಲ. ಈ ಬಗ್ಗೆ ಗೃಹ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ 2018ರ ಅಕ್ಟೋಬರ್ನಲ್ಲಿ ‘ಅನುಗ್ರಹ ಪೂರ್ವಕ ಪರಿಹಾರ’ ಕುರಿತು ಹೊರಡಿಸಿರುವ ಆದೇಶದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ಸೌಲಭ್ಯ ಇಲ್ಲವೆಂದು ಉಲ್ಲೇಖಿಸಲಾಗಿದೆ. ಹೀಗಾಗಿ ಬಿಡಿಗಾಸು ಸಿಗುವುದಿಲ್ಲ ಎನ್ನುತ್ತಾರೆ. ಹಾಗಿದ್ದರೆ ಸರ್ಕಾರದ ಪ್ರಕಾರ ಡ್ರಗ್ಸ್ ದಂಧೆ ಅಪರಾಧ ಅಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.
ದೊಂಬಿ, ಕೋಮು ಗಲಭೆ ಅಂತಹ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಮಯದಲ್ಲಿ ಎಷ್ಟು ಬೇಗ ಸ್ಥಳಕ್ಕೆ ಪೊಲೀಸರು ತಲುಪುತ್ತಾರೋ ಅಷ್ಟು ಅನಾಹುತಗಳನ್ನು ತಪ್ಪಿಸಲು ಸಾಧ್ಯ. ಧಾವಂತದಲ್ಲಿ ಪೊಲೀಸರು ಸ್ಥಳಕ್ಕೆ ಹೋಗುವಾಗ ರಸ್ತೆ ಅಪಘಾತವಾದರೆ ಅವರೇ ಹೊಣೆ. ಅಪರಾಧ ತಡೆಗಟ್ಟುವ ಕರ್ತವ್ಯದಲ್ಲಿ ಸಮಾಜಘಾತುಕ ಶಕ್ತಿಗಳನ್ನು ಹುಡುಕಿಕೊಂಡು ಪೊಲೀಸರು ಹೋಗಬೇಕಾಗುತ್ತದೆ. ಶಂಕಿತರ ಸುಳಿವು ಸಿಕ್ಕ ಕೂಡಲೇ ಅಲರ್ಟ್ ಆಗಿ ಖಾಕಿ ಪಡೆ ಆರೋಪಿಗಳ ಬೆನ್ನತ್ತಬೇಕಾಗುತ್ತದೆ. ಇಂತಹ ವೇಳೆ ರಸ್ತೆ ಅಪಘಾತ ಸಂಭವಿಸಿದರೆ ಯಾರು ಹೊಣೆ? ಸುತ್ತೋಲೆಯನ್ನು ಮುಂದಿಟ್ಟುಕೊಂಡು ಪರಿಹಾರ ಕೊಡಲು ಮೀನಾಮೇಷ ಎಣಿಸುತ್ತಿರುವ ಗೃಹ ಇಲಾಖೆ ವಿರುದ್ಧ ಪೊಲೀಸರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.
ಅವಿನಾಶ್ ಮೃತಪಟ್ಟು 5 ತಿಂಗಳು ಕಳೆದಿವೆ. ಇಲಾಖೆಗೆ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಇಲ್ಲಿಯವರೆಗೂ ಸರ್ಕಾರದಿಂದ ನಯಾಪೈಸೆ ಬಂದಿಲ್ಲ. ಭರವಸೆಗಳು ಮಾತ್ರ ಸಿಕ್ಕಿವೆ.
| ಕಾಶಿನಾಥ್ ಹುತಾತ್ಮ ಪಿಎಸ್ಐ ಅವಿನಾಶ್ ತಂದೆ
ಸುತ್ತೋಲೆಯಲ್ಲಿ ಏನಿದೆ?
ಕಾನೂನು ಸುವ್ಯವಸ್ಥೆ ಹದಗೆಡುವುದು ಎಂದರೆ ಮುಷ್ಕರ, ಪ್ರತಿಭಟನೆ, ಮೆರವಣಿಗೆ, ಗುಂಪು ಗಲಾಟೆ, ದೊಂಬಿ, ಕಲ್ಲು ತೂರಾಟ, ಕೋಮು ಗಲಭೆ, ಕರ್ಫ್ಯೂ, ನಿಷೇಧಾಜ್ಞೆ, ಪ್ರಕೃತಿ ವಿಕೋಪ, ಬಾಂಬ್ ಪತ್ತೆ, ನಕ್ಸಲ್, ಉಗ್ರ ವಿರುದ್ಧ ಕಾರ್ಯಾಚರಣೆ, ಬೆಂಕಿ ಅನಾಹುತ ಎಂದು ಉಲ್ಲೇಖಿಸಲಾಗಿದೆ. ಅಪರಾಧ ತಡೆಗಟ್ಟುವ ಕರ್ತವ್ಯ ಅಂದರೆ ಕಳ್ಳತನ, ಕೊಲೆ, ಅಪಹರಣ, ದರೋಡೆ ತಡೆಗಟ್ಟುವ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಆರೋಪಿಗಳ ಘರ್ಷಣೆಯಲ್ಲಿ ಗಾಯ ಮತ್ತು ಮರಣಹೊಂದಿದರೆ ಅನುಗ್ರಹ ಪೂರ್ವ ಪರಿಹಾರ ಸಿಗಲಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ತಿದ್ದುಪಡಿ ಅಗತ್ಯ
2018ರ ಅಕ್ಟೋಬರ್ನಲ್ಲಿ ಹೊರಡಿಸಿರುವ ಅನುಗ್ರಹ ಪೂರ್ವಕ (30 ಲಕ್ಷ ರೂ.) ಪರಿಹಾರ ಕುರಿತ ಸುತ್ತೋಲೆಗೆ ತಿದ್ದುಪಡಿ ತರಬೇಕಾಗಿದೆ. ಅಪರಾಧಗಳನ್ನು ತಡೆಗಟ್ಟಲು ಅಥವಾ ಆರೋಪಿಗಳ ಪತ್ತೆಗೆ ಹೋಗುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅಂತಹ ಪ್ರಕರಣಗಳನ್ನು ಪರಿಗಣಿಸುವುದಾಗಿ ತಿದ್ದುಪಡಿ ತರಬೇಕಾಗಿದೆ.
ಕುಟುಂಬಕ್ಕೆ ಆಸರೆಯಾಗಿದ್ದರು
ಬೀದರ್ ಜಿಲ್ಲೆ ಬಸವಕಲ್ಯಾಣ ಮೂಲದ ಕೆ. ಅವಿನಾಶ್ ಮತ್ತು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕೆರೆ ಗ್ರಾಮದ ಕಾನ್ಸ್ಟೆಬಲ್ ಅನಿಲ್ ಮುಲಿಕ್ ಕುಟುಂಬ ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದೆ. ಕುಟುಂಬಗಳಿಗೆ ಆಶ್ರಯ ಆಗಿದ್ದ ಮಕ್ಕಳನ್ನು ಕಳೆದುಕೊಂಡು ಪರಿಹಾರ ಮತ್ತು ವೇತನ ಸೌಲಭ್ಯ, ಅನುಕಂಪದ ನೌಕರಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿವೆ.